ಸಪ್ತಾಸ್ತ್ರಕ್ಕೆ ತರೂರ್‌ ಆಯ್ಕೆಗೆ ಕಾಂಗ್ರೆಸ್ಸಲ್ಲಿ ಅತೃಪ್ತಿ ಸ್ಫೋಟ

KannadaprabhaNewsNetwork | Updated : May 18 2025, 05:12 AM IST
Follow Us

ಸಾರಾಂಶ

ಪಾಕಿಸ್ತಾನದ ಉಗ್ರ ಮುಖವಾಡ ಬಯಲು ಹೊರಟಿರುವ ಕೇಂದ್ರ ಸರ್ಕಾರದ ನಿಯೋಗಕ್ಕೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರನ್ನು ಆಯ್ಕೆ ಮಾಡಿದ ವಿಷಯವು ಇದೀಗ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣ 

ನವದೆಹಲಿ: ಪಾಕಿಸ್ತಾನದ ಉಗ್ರ ಮುಖವಾಡ ಬಯಲು ಹೊರಟಿರುವ ಕೇಂದ್ರ ಸರ್ಕಾರದ ನಿಯೋಗಕ್ಕೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರನ್ನು ಆಯ್ಕೆ ಮಾಡಿದ ವಿಷಯವು ಇದೀಗ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಜೊತೆಗೆ ಕಾಂಗ್ರೆಸ್‌ನೊಳಗೂ ದೊಡ್ಡ ಆಕ್ರೋಶಕ್ಕೆ ನಾಂದಿ ಹಾಡಿದೆ.

ತಾನು ತರೂರ್‌ ಹೆಸರು ಶಿಫಾರಸು ಮಾಡದೇ ಇದ್ದರೂ ಅವರನ್ನು ಆಯ್ಕೆ ಮಾಡಿದ ಕೇಂದ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಮೋದಿ ಸರ್ಕಾರ ರಾಜಕೀಯದ ಆಟ ಆಡುತ್ತಿದೆ’ ಎಂದಿದೆ. ಆದರೆ ‘ಇದು ನನಗೆ ಗೌರವದ ಸಂಗತಿ. ರಾಷ್ಟ್ರೀಯ ಹಿತಾಸಕ್ತಿ ವಿಷಯದಲ್ಲಿ ನನ್ನ ಸೇವೆ ಅಗತ್ಯವಿದ್ದಾಗ, ನಾನು ಅದಕ್ಕೆ ಅರ್ಹನಾಗಿದ್ದೇನೆ. ನನ್ನ ಆಯ್ಕೆಯಲ್ಲಿ ರಾಜಕೀಯ ಏನೂ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್‌ ತರೂರ್‌ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ಗೆ ಶಾಕ್‌:

ವಿದೇಶಕ್ಕೆ ಕಳುಹಿಸುವ ನಿಯೋಗಕ್ಕೆ ನಿಮ್ಮ ನಿಮ್ಮ ಪಕ್ಷದಿಂದ ಸಂಸದರ ಹೆಸರು ಸೂಚಿಸಿ ಎಂದು ಕೇಂದ್ರ ಸರ್ಕಾರ ಎಲ್ಲಾ ಪಕ್ಷಗಳಿಗೆ ಸೂಚಿಸಿತ್ತು. ಅದರಂತೆ ಆನಂದ್‌ ಶರ್ಮಾ, ಗೌರವ್‌ ಗೊಗೋಯ್‌, ನಾಸಿರ್‌ ಹುಸೇನ್‌ ಮತ್ತು ಅಮರಿಂದರ್‌ ಸಿಂಗ್‌ ರಾಜಾ ಹೆಸರನ್ನು ಕಾಂಗ್ರೆಸ್‌ ಸೂಚಿಸಿತ್ತು. ಆದರೆ ಈ ನಾಲ್ವರ ಪೈಕಿ ಯಾರನ್ನೂ ತಂಡದ ನೇತೃತ್ವಕ್ಕೆ ಆಯ್ಕೆ ಮಾಡಲು ನಿರಾಕರಿಸಿದ ಕೇಂದ್ರ ಸರ್ಕಾರ, ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ, ವಿದೇಶಾಂಗ ವ್ಯವಹಾರ ಸಚಿವರಾಗಿದ್ದ, ಅದ್ಭುತ ಮಾತುಗಾರರಾಗಿರುವ ಶಶಿ ತರೂರ್‌ ಅವರನ್ನು ಆಯ್ಕೆ ಮಾಡಿದೆ.

ಕಾಂಗ್ರೆಸ್‌ ಆಕ್ರೋಶ:

ತರೂರ್‌ ಆಯ್ಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌, ನಾವು ಕಳುಹಿಸಿರುವ ಹೆಸರನ್ನು ಬಿಟ್ಟು ಬೇರೆ ಹೆಸರನ್ನು ಸರ್ಕಾರ ನಿಯೋಗಕ್ಕೆ ಆಯ್ಕೆ ಮಾಡಿದೆ. ಈ ಮೂಲಕ ಈ ಮೂಲಕ ಸರ್ಕಾರ ನಾರದ ಮುನಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ. ಜೊತೆಗೆ ಇದೇ ವೇಳೆ ಶಶಿತರೂರ್‌ ಅವರ ಹೆಸರೆತ್ತದೆ ಕಾಲಳೆದಿರುವ ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್‌, ‘ಕಾಂಗ್ರೆಸ್‌ನಲ್ಲಿ ಇರುವುದಕ್ಕೂ ಕಾಂಗ್ರೆಸ್‌ನವರಾಗಿರುವುದಕ್ಕೂ ಭೂಮಿ-ಆಕಾಶದ ಅಂತರವಿದೆ’ ಎಂದು ಸರ್ಕಾರದ ಆಹ್ವಾನ ಒಪ್ಪಿಕೊಂಡ ತರೂರ್‌ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ವ್ಯಂಗ್ಯ:

ಈ ನಡುವೆ ಜೈರಾಂ ರಮೇಶ್‌ ಟೀಕೆಗೆ ಬಿಜೆಪಿ ಮುಖಂಡ ಅಮಿತ್‌ ಮಾಳವೀಯ, ‘ಶಶಿ ತರೂರ್‌ ವಾಕ್ಪಟುತ್ವದ ಕುರಿತು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ವಿಶ್ವಸಂಸ್ಥೆಯ ಅಧಿಕಾರಿಯಾಗಿ, ವಿದೇಶಾಂಗ ನೀತಿಯ ಆಳವಾದ ಜ್ಞಾನ ಹೊಂದಿರುವ ಅ‍ವರನ್ನು ಯಾಕೆ ಕಾಂಗ್ರೆಸ್‌ ಪಕ್ಷ ಸರ್ವಪಕ್ಷಗಳ ನಿಯೋಗಕ್ಕೆ ಆಯ್ಕೆ ಮಾಡಿಲ್ಲ? ಇದಕ್ಕೆ ಅಭದ್ರತೆ, ಅಸೂಯೆ ಕಾರಣವೇ?’ ಎಂದು ಕಾಲೆಳೆದಿದ್ದಾರೆ.

ಗೌರವದ ಸಂಗತಿ- ತರೂರ್‌:

ಈ ನಡುವೆ ತಮ್ಮ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿರುವ ತರೂರ್‌, ‘ಇದು ನನಗೆ ಗೌರವದ ಸಂಗತಿ. ರಾಷ್ಟ್ರೀಯ ಹಿತಾಸಕ್ತಿ ವಿಷಯದಲ್ಲಿ ನನ್ನ ಸೇವೆ ಅಗತ್ಯವಿದ್ದಾಗ, ನಾನು ಅದಕ್ಕೆ ಅರ್ಹನಾಗಿದ್ದೇನೆ. ಭಾರತದಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ ಮತ್ತು ಪಾಕಿಸ್ತಾನವು ತನ್ನ ನೆಲದಲ್ಲಿ ಉಗ್ರವಾದವನ್ನು ಪೋಷಿಸುತ್ತಿದೆ ಎಂದು ನಾವು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸುತ್ತೇವೆ. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಿಗೆ ಬಂದಾಗ, ಯಾವುದೇ ವಿಭಜನೆ ಇಲ್ಲ. ಕೇವಲ ಕರ್ತವ್ಯ ಮುಖ್ಯ’ ಎಂದು ಪೋಸ್ಟ್‌ ಮಾಡಿದ್ದಾರೆ.

ಆಕ್ರೋಶಕ್ಕೆ ಕಾರಣ ಏನು?

- ಶಶಿ ತರೂರ್‌ ಕಾಂಗ್ರೆಸ್ಸಿಗನಾಗಿದ್ದರೂ ಆಪರೇಶನ್‌ ಸಿಂದೂರ ಪೂರ್ತಿ ಬೆಂಬಲಿಸಿದ್ದರು

- ಮೋದಿ ಬೆಂಬಲಿಸುವ ತರೂರ್‌ ವರ್ತನೆಗೆ ಕಾಂಗ್ರೆಸ್‌ ವರಿಷ್ಠರು ಬೇಸರಗೊಂಡಿದ್ದರು

- ಪಾಕ್‌ ಬಣ್ಣ ಬಯಲು ಮಾಡುವ ಸಮಿತಿಗೆ ತರೂರ್‌ರನ್ನು ಪಕ್ಷ ಶಿಫಾರಸು ಮಾಡಿರಲಿಲ್ಲ

- ಆದರೆ ಈಗ ತರೂರ್ ದಿಢೀರ್‌ ಆಯ್ಕೆಗೆ ಕಾಂಗ್ರೆಸ್ಸಲ್ಲಿ ಬೇಸರ, ಸರ್ಕಾರದ ವಿರುದ್ಧ ಕಿಡಿ

- ತರೂರ್‌ ‘ಕೈ’ನಲ್ಲಿ ಇರುವುದಕ್ಕೂ, ಕಾಂಗ್ರೆಸ್ಸಿಗನಾಗಿ ಇರುವುದಕ್ಕೂ ವ್ಯತ್ಯಾಸ: ಜೈರಾಂ

- ತರೂರ್‌ ಕಂಡರೆ ಕಾಂಗ್ರೆಸ್‌ಗೆ ಅಷ್ಟೇಕೆ ಅಸೂಸೆಯೆ?: ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

- ಆಯ್ಕೆಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ವಪಕ್ಷಕ್ಕೇ ಶಶಿ ತರೂರ್‌ ಟಾಂಗ್‌

Read more Articles on