ರಾಮಾಯಣ ಐತಿಹ್ಯದ ಲೇಪಾಕ್ಷಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

KannadaprabhaNewsNetwork | Updated : Jan 17 2024, 04:30 PM IST

ಸಾರಾಂಶ

ರಾಮ ಪ್ರಾಣಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ, ರಾಮಾಯಣ ಐತಿಹ್ಯವುಳ್ಳ ಆಂಧ್ರಪ್ರದೇಶದ ಲೇಪಾಕ್ಷಿ ವೀರಭದ್ರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ನವದೆಹಲಿ: ರಾಮ ಪ್ರಾಣಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ, ರಾಮಾಯಣ ಐತಿಹ್ಯವುಳ್ಳ ಆಂಧ್ರಪ್ರದೇಶದ ಲೇಪಾಕ್ಷಿ ವೀರಭದ್ರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಪಂಚೆ, ಶಲ್ಯ ಧರಿಸಿದ್ದ ಭಸ್ಮಧಾರಿ ಮೋದಿ, ದೇವರ ನಾಮಗಳನ್ನು ಭಜಿಸಿದರು ಹಾಗೂ ದೇಗುಲದ ಪುರೋಹಿತರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ಸಮಾರಂಭವೊಂದರಲ್ಲಿ ಅವರು ಮಾತನಾಡಿ ಇಡೀ ದೇಶ ಇಂದು ರಾಮಮಯವಾಗಿದೆ ಎಂದು ಹರ್ಷಿಸಿದರು.ಲೇಪಾಕ್ಷಿಯು ರಾಮಾಯಣ ಕಥಾಹಂದರದಲ್ಲಿ ಐತಿಹಾಸಿಕ ಸ್ಥಳವಾಗಿ ಗುರುತಿಸಲ್ಪಟ್ಟಿದೆ. 

ಜಟಾಯು ಎಂಬ ಬೃಹತ್‌ ಹದ್ದು ರಾವಣನಿಂದ ಸೀತೆಯನ್ನು ರಕ್ಷಿಸಲು ತೆರಳಿ ರಾವಣನಿಂದ ತನ್ನ ರೆಕ್ಕೆಯನ್ನು ಕತ್ತರಿಸಿಕೊಂಡು ಈ ಸ್ಥಳದಲ್ಲಿ ಬಿದ್ದಿತ್ತೆಂದು ನಂಬಲಾಗಿದೆ. ಅಷ್ಟೇ ಅಲ್ಲದೆ ಶ್ರೀರಾಮನಿಗೆ ಸೀತೆಯ ಕುರಿತು ಜಟಾಯು ಸುಳಿವು ನೀಡಿದಾಗ ಶ್ರೀರಾಮನು ಜಟಾಯುವಿಗೆ ಮೋಕ್ಷ ಪ್ರಾಪ್ತಿ ಮಾಡಿದ್ದು ಇದೇ ಸ್ಥಳದಲ್ಲಿ ಎಂದು ನಂಬಲಾಗಿದೆ. 

ಪ್ರಧಾನಿ ಮೋದಿ ದಕ್ಷಿಣ ಭಾರತದಲ್ಲಿ ಎರಡು ದಿನ ಪ್ರವಾಸ ಕೈಗೊಂಡಿದ್ದು, ಬುಧವಾರವೂ ಸಹ ಕೇರಳದ ಗುರುವಾಯೂರು ಮತ್ತು ಶ್ರೀರಾಮಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಮೋದಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಮಾಡುವ ಸಲುವಾಗಿ ಹನ್ನೊಂದು ದಿನಗಳ ವಿಶೇಷ ಅನುಷ್ಠಾನ ಆಚರಣೆ ಮಾಡುತ್ತಿದ್ದಾರೆ.

ರಾಮನ ಬಗ್ಗೆ ವಿಡಿಯೋ ಮಾಡಿ ಜಾಲತಾಣದಲ್ಲಿ ಹಂಚಿಕೊಳ್ಳಿ: ಟ್ರಸ್ಟ್‌

ಅಯೋಧ್ಯೆ: ಅಯೋಧ್ಯೆಯಲ್ಲಿ 5 ಶತಮಾನಗಳ ಬಳಿಕ ರಾಮಮಂದಿರ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಜನ ರಾಮನ ಬಗ್ಗೆ ಕಿರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು ಎಂದು ರಾಮಮಂದಿರ ಟ್ರಸ್ಟ್‌ ಸಲಹೆ ನೀಡಿದೆ. 

ವಿಡಿಯೋದಲ್ಲಿ ರಾಮನ ಬಗೆಗಿನ ಹಾಡು, ನೃತ್ಯ, ಕಿರು ನಾಟಕ, ಮಾತು, ಹೀಗೆ ನಿಮಗನಿಸಿದ್ದನ್ನು ವಿಡಿಯೋ ಮಾಡಿ #ShriRamHomecoming ಎಂಬ ಹ್ಯಾಷ್‌ಟ್ಯಾಗ್‌ ಜೊತೆಗೆ ಹಂಚಿಕೊಳ್ಳಲು ಸೂಚಿಸಿದೆ. 

ಅಲ್ಲದೇ ವಿಡಿಯೋ ಜತೆಗೆ ನಿಮ್ಮ ಹೆಸರು, ಸ್ಥಳ ಹಾಗೂ ಕಿರು ಟಿಪ್ಪಣಿಗಳಿರಲಿ ಎಂದು ಟ್ರಸ್ಟ್ ತಿಳಿಸಿದೆ. ರಾಮಭಕ್ತರು ಈ ಮೂಲಕ ರಾಮಸ್ಮರಣೆ ಮಾಡಲು ರಾಮಜನ್ಮಭೂಮಿ ತೀರ್ಥಕ್ಷೇತ್ರ ಕರೆ ನೀಡಿದೆ.

ರಾಮಮಂತ್ರ ಜಪಿಸಲು ಗಾಯಕಿ ಚಿತ್ರಾ ಕರೆ: ಕೆಲವರ ವಿರೋಧ
ತಿರುವನಂತಪುರ: ರಾಮಮಂದಿರ ಉದ್ಘಾಟನೆಯ ದಿನ ಜನರು ರಾಮನಾಮ ಪಠಣೆ ಮಾಡಬೇಕು ಮತ್ತು ಸಂಜೆ ಮನೆಗಳಲ್ಲಿ ದೀಪ ಹಚ್ಚಿ ‘ಲೋಕ ಸಮಸ್ತಾ ಸುಖಿನೋ ಭವಂತು’ ಎನ್ನಬೇಕು ಎಂದು ರಾಷ್ಟ್ರಪ್ರಶಸ್ತಿ ವಿಜೇತ ಗಾಯಕಿ ಕೆ.ಎಸ್‌.ಚಿತ್ರಾ ನೀಡಿರುವ ಕರೆಗೆ ಕೇರಳದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಚಿತ್ರಾ ಅವರು ರಾಮಮಂದಿರದ ಉದ್ಘಾಟನೆಯನ್ನು ಸಮರ್ಥಿಸಿಕೊಳ್ಳಬಾರದಿತ್ತು. ರಾಮಮಂದಿರ ಒಂದು ಪಕ್ಷದ ಕಾರ್ಯಕ್ರಮ. ಈ ಮೂಲಕ ಚಿತ್ರಾ ರಾಜಕೀಯ ನಿಲುವುಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. 

ಮತ್ತೊಂದಷ್ಟು ಜನರು.ಅದರಲ್ಲೂ ವಿಶೇಷವಾಗಿ ಗಾಯಲ ಜಿ. ವೇಣುಗೋಪಾಲ್‌ ಅವರು ಚಿತ್ರಾ ಅವರನ್ನು ಬೆಂಬಲಿಸಿದ್ದು, ಅವರ ನಿಲುವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಅವರು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ರಾಮ ಮೂರ್ತಿ ಪ್ರತಿಷ್ಠಾಪನೆಯ ಸಮಯದಲ್ಲಿ ಜನ ‘ಶ್ರೀರಾಮ ಜಯ ರಾಮ ಜಯಜಯ ರಾಮ’ ಮಂತ್ರವನ್ನು ಪಠಿಸಬೇಕು ಎಂದು ಚಿತ್ರಾ ಅವರು ವಿಡಿಯೋ ಸಂದೇಶವೊಂದರಲ್ಲಿ ಹೇಳಿದ್ದರು. 

ಈ ವಿಡಿಯೋದ ಕೊನೆಯಲ್ಲಿ ‘ಲೋಕ ಸಮಸ್ತಾ ಸುಖಿನೋ ಭವಂತು’ ಎಂದು ಅವರು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

Share this article