ಶತ್ರುಘ್ನ ‘ಸಿಂಹ’ ಘರ್ಜನೆಗೆ ಅಹ್ಲುವಾಲಿಯಾ ಸವಾಲ್‌

Published : May 13, 2024, 11:47 AM ISTUpdated : May 13, 2024, 11:56 AM IST
shatrughan sinha son luv on his career

ಸಾರಾಂಶ

ಅಸನ್ಸೋಲ್‌ಗೆ ಬಿಜೆಪಿ ಟಿಕೆಟ್‌ ಪ್ರಕಟಿಸಿದಾಗಿನಿಂದ ಭಾರೀ ಮುಜುಗರ ಅನುಭವಿಸುವುದರೊಂದಿಗೆ ಸಮಸ್ತ ದೇಶಕ್ಕೆ ಈ ಕ್ಷೇತ್ರ ಪರಿಚಯವಾಯಿತು

ಅಸನ್ಸೋಲ್‌ಗೆ ಬಿಜೆಪಿ ಟಿಕೆಟ್‌ ಪ್ರಕಟಿಸಿದಾಗಿನಿಂದ ಭಾರೀ ಮುಜುಗರ ಅನುಭವಿಸುವುದರೊಂದಿಗೆ ಸಮಸ್ತ ದೇಶಕ್ಕೆ ಈ ಕ್ಷೇತ್ರ ಪರಿಚಯವಾಯಿತು. ಬಿಜೆಪಿ ಟಿಕೆಟ್‌ ನೀಡಿದ್ದ ಗಾಯಕ ಪವನ್‌ ಸಿಂಗ್ ಕುರಿತು ಅಶ್ಲೀಲ ವಿಡಿಯೋಗಳು ಹೊರಬಂದ ಹಿನ್ನೆಲೆಯಲ್ಲಿ ಅವರು ನೈತಿಕ ಹೊಣೆ ಹೊತ್ತು ಕಣದಿಂದ ಹಿಂದೆ ಸರಿದರು. ಇತ್ತ ಟಿಎಂಸಿಯಿಂದ ಬಿಹಾರಿ ಬಾಬು ಎಂದೇ ಖ್ಯಾತವಾಗಿರುವ ಶತ್ರುಘ್ನ ಸಿನ್ಹಾಗೆ ಮತ್ತೊಮ್ಮೆ ಅವಕಾಶ ನೀಡಿದ್ದರೆ ಬಿಜೆಪಿ ಭಾರೀ ಲೆಕ್ಕಾಚಾರ ಹಾಕಿ ಸರ್ದಾರ್ಜಿ ಎಂದೇ ಖ್ಯಾತವಾಗಿರುವ ಪಕ್ಕದ ವರ್ಧಮಾನ್‌ ದುರ್ಗಾಪುರದ ಸಂಸದ ಸುರೇಂದ್ರಜೀತ್‌ ಸಿಂಗ್‌ ಅಹ್ಲುವಾಲಿಯಾಗೆ ಮಣೆ ಹಾಕಿದೆ. ಇದರ ಜೊತೆಗೆ ಸಿಪಿಎಂ ಕೂಡ ಪ್ರಬಲ ಅಭ್ಯರ್ಥಿ ಜಹನಾರಾ ಖಾನ್‌ಗೆ ಟಿಕೆಟ್‌ ನೀಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಹೇಗಿದೆ ಸಿಂಹ ಘರ್ಜನೆ?

ಶತ್ರುಘ್ನ ಸಿನ್ಹಾ ಅವರು 2022ರಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಅಭೂತಪೂರ್ವವಾಗಿ ಗೆಲುವು ಸಾಧಿಸಿದ ಬಳಿಕ ಕ್ಷೇತ್ರದಲ್ಲಿ ಸಂಸದರಾಗಿ ಗಮನ ಸೆಳೆದಿದ್ದಾರೆ. ಇವರು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಕ್ಷೇತ್ರದಲ್ಲಿ ಇನ್ನೂ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಜನತೆ ಬಯಸುತ್ತಿದ್ದಾರೆ. ವಿಶೇಷವಾಗಿ ಇಲ್ಲಿನ ಕಾರ್ಮಿಕ ವಲಯವು ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಅದನ್ನು ಪೂರೈಸಿಕೊಡಬೇಕೆಂದು ಬಯಸುತ್ತಿದ್ದಾರೆ. ಜೊತೆಗೆ ಇತ್ತೀಚೆಗೆ ಸಿಎಎ ಜಾರಿಯಾಗಿರುವ ಹಿನ್ನೆಲೆಯಲ್ಲಿ ಅದರ ಪರಿಣಾಮ ನೇರವಾಗಿ ಟಿಎಂಸಿ ಪಡೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಮೂಲಕ ಪ್ರಸಕ್ತ ಚುನಾವಣೆಯಲ್ಲೂ ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ಬಿಜೆಪಿ ನಾಯಕ ಅಹ್ಲುವಾಲಿಯಾ ಸವಾಲನ್ನು ಮೆಟ್ಟಿ ನಿಂತು ಸಿಂಹದಂತೆ ಘರ್ಜಿಸುವ ನಿರೀಕ್ಷೆಯಿದೆ.

ಹೇಗಿದೆ ಬಿಜೆಪಿ ರಣತಂತ್ರ?

ಬಿಜೆಪಿಗೆ ಪ್ರಥಮ ಚುಂಬನಂ ದಂತ ಭಗ್ನಂ ಎಂಬುವಂತೆ ಟಿಕೆಟ್‌ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಮುಜುಗರ ಅನುಭವಿಸಿದೆ. ಅದನ್ನು ಸರಿಪಡಿಸಿಕೊಳ್ಳಲು ಪಕ್ಷವು ಒಂದು ತಿಂಗಳಿಗೂ ಹೆಚ್ಚು ಕಾಲ ತೆಗೆದುಕೊಂಡಿರುವುದನ್ನು ಗಮನಿಸಿದರೆ ಚುನಾವಣಾ ಸಿದ್ಧತೆಯಲ್ಲಿ ತುಸು ಹಿಂದಿದೆ ಎಂದೇ ಹೇಳಬಹುದು. ಆದರೆ ಬಿಜೆಪಿಯು ಪಕ್ಕದ ಕ್ಷೇತ್ರ ವರ್ಧಮಾನ್‌ ದುರ್ಗಾಪುರದಲ್ಲಿ ಹಾಲಿ ಸಂಸದರಾಗಿರುವ ಸುರೇಂದ್ರಜೀತ್‌ ಸಿಂಗ್‌ ಅಹ್ಲುವಾಲಿಯಾ ಅವರಿಗೆ ಟಿಕೆಟ್‌ ನೀಡಿದ್ದು, ದುರ್ಗಾಪುರದಲ್ಲಿ ಅಚ್ಚರಿ ನೀಡಿದಂತೆ ಇಲ್ಲೂ ಸಹ ಅಚ್ಚರಿಯ ರೀತಿಯಲ್ಲಿ ಗೆಲುವು ಸಾಧಿಸಿ ಶತ್ರುಘ್ನಗೆ ಶಾಕ್‌ ನೀಡುವ ನಿರೀಕ್ಷೆಯಲ್ಲಿ ಬಿಜೆಪಿ ಪ್ರಚಾರಕ್ಕಿಳಿದಿದೆ. ಪ್ರಮುಖವಾಗಿ ಬಿಜೆಪಿಯು ಇಲ್ಲಿ ಸ್ಥಳೀಯ ಸಮಸ್ಯೆಗಳನ್ನೇ ಉಲ್ಲೇಖಿಸುತ್ತಿದ್ದು, ಶತ್ರುಘ್ನ ಸಿನ್ಹಾ ತಮ್ಮ ಸಂಸದರ ನಿಧಿಯನ್ನು ಸಮರ್ಪಕ ಯೋಜನೆಗಳಿಗೆ ಬಳಸಿಕೊಂಡಿಲ್ಲ ಎಂದು ಆರೋಪಿಸಿ ಮತದಾರರ ಮನ ಸೆಳೆಯುವಲ್ಲಿ ನಿರತವಾಗಿದೆ. ಅಲ್ಲದೆ ಅಹ್ಲುವಾಲಿಯಾ 2014ರಲ್ಲಿ ದೂರದ ದಾರ್ಜೀಲಿಂಗ್‌ ಕ್ಷೇತ್ರದಲ್ಲಿ ಗೆದ್ದು, 2019ರಲ್ಲಿ ಮತ್ತೊಂದು ಮೂಲೆಯ ವರ್ಧಮಾನ್‌ ದುರ್ಗಾಪುರದಲ್ಲಿ ಗೆಲುವು ಸಾಧಿಸಿರುವುದನ್ನು ಗಮನಿಸಿದರೆ ಅವರ ರಣತಂತ್ರ ಸಾಮರ್ಥ್ಯವನ್ನು ಅಲ್ಲಗಳೆಯಲಾಗದು. ಯಾವುದೇ ವೈಯಕ್ತಿಕ ಟೀಕೆಗಿಳಿಯದೆ ಕೇವಲ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕುರಿತು ಪ್ರಚಾರ ಮಾಡುವಲ್ಲಿ ಬಿಜೆಪಿ ನಿರತವಾದರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಜಹನಾರಾ ಖಾನ್‌ ಸ್ಪರ್ಧೆ ಒಡ್ಡುವರೇ?

ಸಿಪಿಎಂ ಕ್ಷೇತ್ರದಲ್ಲಿ ನೆಲೆ ಕಳೆದುಕೊಂಡಿದ್ದರೂ ಅಲ್ಪಸಂಖ್ಯಾತ ಸಮುದಾಯದ ಜಹನಾರಾ ಖಾನ್‌ಗೆ ಈ ಬಾರಿ ಟಿಕೆಟ್‌ ನೀಡಿದೆ. ಈ ಮೂಲಕ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬುಡಕಟ್ಟು ಸಮುದಾಯದ ಮತಗಳನ್ನು ಸೆಳೆಯುವ ನಿರೀಕ್ಷೆಯಲ್ಲಿದೆ. ಆದರೆ ಜಹನಾರಾ ಖಾನ್‌ ತುಸು ಪ್ರಬಲ ಪೈಪೋಟಿ ಒಡ್ಡಿದಲ್ಲಿ ಟಿಎಂಸಿಗೆ ಅಪಾಯ ತಂದೊಡ್ಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಸ್ಪರ್ಧೆ ಹೇಗೆ?

ಅಸನ್ಸೋಲ್‌ ಕ್ಷೇತ್ರ ಪಶ್ಚಿಮ ಬಂಗಾಳದ ತುದಿಯಲ್ಲಿದ್ದು, ಜಾರ್ಖಂಡ್‌ ಜೊತೆಗೆ ಗಡಿ ಬೆಸೆದುಕೊಂಡಿದೆ. ಹೀಗಾಗಿ ಇಲ್ಲಿ ಹಿಂದಿ ಮಾತನಾಡುವ ಜನ ಹೆಚ್ಚಿದ್ದು, ಶತ್ರುಘ್ನ ಸಿನ್ಹಾ ಅವರನ್ನು ಬಾಲಿವುಡ್‌ ನಟನೆಂಬ ಹಿನ್ನೆಲೆಯಲ್ಲಿ ಅಂಧಾಭಿಮಾನದಿಂದ ಮತ ಹಾಕುವ ಸಾಧ್ಯತೆಗಳೇ ಹೆಚ್ಚಿವೆ. ಏಕೆಂದರೆ ಕಳೆದ ಕೆಲವು ಚುನಾವಣೆಗಳಲ್ಲಿ ಈ ಕ್ಷೇತ್ರವು ತಾರಾ ನಟ ನಟಿಯರ ಪೈಪೋಟಿಗೆ ಸಾಕ್ಷಿಯಾಗಿದ್ದು, ಈ ಬಾರಿಯೂ ನಟರೊಬ್ಬರಿಗೆ ಮಣೆ ಹಾಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಬಿಜೆಪಿ ಶತ್ರುಘ್ವರನ್ನು ವಿಶ್ವಾಸದ್ರೋಹಿ ಎಂದು ಜರಿಯುತ್ತಿದ್ದರೂ ಉಪಚುನಾವಣಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಅದು ಲೆಕ್ಕಕ್ಕೆ ಬರದು. ಟಿಎಂಸಿಯು ತನ್ನ ಸಾಂಪ್ರದಾಯಿಕ ಮತಗಳ ಜೊತೆಗೆ ಅಲ್ಪಸಂಖ್ಯಾತ ಮತಗಳನ್ನು ಜಹನಾರಾಖಾನ್‌ ತೆಕ್ಕೆಗೆ ಹೋಗುವುದನ್ನು ತಪ್ಪಿಸಿದ್ದೇ ಆದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. ಆದರೂ ಮತದಾರರು ತಮ್ಮ ಸ್ಥಳೀಯ ಸಮಸ್ಯೆ ಪರಿಹಾರಕ್ಕಾಗಿ ಕಳೆದ ಬಾರಿ ಹೊಸಬರಿಗೆ ಅವಕಾಶ ನೀಡುವ ಮನಸ್ಸು ಮಾಡಿದ್ದೇ ಆದಲ್ಲಿ ಬಿಜೆಪಿ ಕೂಡ ಮುನ್ನಡೆ ಸಾಧಿಸಬಹುದು. ಒಟ್ಟಿನಲ್ಲಿ ಕ್ಷೇತ್ರದಲ್ಲಿ ಈ ಬಾರಿ ಪ್ರಬಲ ಪೈಪೋಟಿ ನಡೆಯುವುದಂತೂ ನಿಶ್ಚಿತವಾಗಿದೆ.

ಸ್ಟಾರ್‌ ಕ್ಷೇತ್ರ: ಅಸನ್ಸೋಲ್‌

ರಾಜ್ಯ: ಪಶ್ಚಿಮ ಬಂಗಾಳ

ವಿಧಾನಸಭಾ ಕ್ಷೇತ್ರಗಳು: 7

ಮತದಾನದ ದಿನ: ಮೇ 13

ಪ್ರಮುಖ ಅಭ್ಯರ್ಥಿಗಳು:

ಬಿಜೆಪಿ - ಎಸ್‌.ಕೆ ಅಹ್ಲುವಾಲಿಯಾ

ಟಿಎಂಸಿ - ಶತ್ರುಘ್ನ ಸಿನ್ಹಾ

ಸಿಪಿಎಂ - ಜಹನಾರಾ ಖಾನ್‌

2022ರ ಉಪಚುನಾವಣೆ

ಗೆಲುವು: ಟಿಎಂಸಿ - ಶತ್ರುಘ್ನ ಸಿನ್ಹಾ

ಸೋಲು: ಬಿಜೆಪಿ - ಅಗ್ನಿಮಿತ್ರ ಪೌಲ್‌.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!