ಅಹಮದಾಬಾದ್: ಭಾರತ ಮತ್ತು ಚೀನಾ ಗಡಿಯಲ್ಲಿ ನಿಯೋಜನೆಗೊಂಡಿರುವ 20 ಯೋಧರು ಚೀನಿ ಭಾಷೆಯನ್ನು ಕಲಿತು ಅದರಲ್ಲಿ ಪಿಜಿ ಸ್ನಾತಕೋತ್ತರ ಡಿಪ್ಲೋಮ ಪದವಿ ಪಡೆದಿದ್ದಾರೆ.
ಭಾರತೀಯ ಸೇನೆಯ ಸಹಕಾರದೊಂದಿಗೆ ಚೀನಾದೊಂದಿಗಿನ ವಾಸ್ತವಿಕ ರೇಖೆ(ಎಲ್‌ಎಸಿ)3,488ಕಿ.ಮೀ ಉದ್ದಕ್ಕೂ ನಿಯೋಜನೆಗೊಂಡಿದ್ದ ಸೈನಿಕರು ಚೀನಿ ಭಾಷೆಯನ್ನು ಕಲಿತಿದ್ದಾರೆ. ಯೋಧರು ಧ್ವಜ ಸಭೆ, ನಿಯಮಿತ ಸಂವಾದ, ಸೈನ್ಯದ ಮಾತುಕತೆಗೆ ಅಗತ್ಯ ಎನ್ನುವ ಕಾರಣಕ್ಕಾಗಿ ಭಾಷೆ ಕಲಿತಿದ್ದಾರೆ. ಇದರ ಜೊತೆಗೆ ಗಡಿಯಾಚೆಗಿನ ಯೋಧರ ಜೊತೆಗಿನ ಸಂವಹನಕ್ಕೆಅಗತ್ಯವಾದ ಕೌಶಲ್ಯಗಳಿರಬೇಕು ಎನ್ನುವ ಕಾರಣಕ್ಕೂ ಈ ನಿರ್ಣಯ ಕೈಗೊಳ್ಳಲಾಗಿದೆ.
ಭಾರತೀಯ ಸೇನೆಯ ಪೂರ್ವ ಕಮಾಂಡರ್‌ನ 20 ಯೋಧರು ಗುಜರಾತಿನ ಗಾಂಧಿ ನಗರದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯದಲ್ಲಿ ಚೀನಾದಲ್ಲಿ ಅತಿಹೆಚ್ಚು ಮಾತನಾಡುವ ಮ್ಯಾಂಡರೀನ್ ಭಾಷೆಯನ್ನು ಕಲಿತು, ಪಿಜಿ ಪದವಿ ಪಡೆದಿದ್ದಾರೆ.
ಭಾರತ-ಚೀನಾ ಸೇನಾ ಹಿಂತೆಗೆತ ಬಹುತೇಕ ಪೂರ್ಣ
ಲಡಾಖ್: ಭಾರತ-ಚೀನಾ ನಡುವೆ ಇತ್ತೀಚೆಗೆ ಆದ ಒಪ್ಪಂದದಂತೆ ಲಡಾಖ್‌ನ ಡೆಮ್ಚೋಖ್ ಹಾಗೂ ಡೆಸ್ಪಾಂಗ್ ಗಡಿಯಲ್ಲಿ ಸೇನಾ ಹಿಂತೆಗೆತ ಬಹುತೇಕ ಪೂರ್ಣವಾಗಿದೆ. ಶೀಘ್ರದಲ್ಲೇ ಭಾರತ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎಂದು ಮೂಲಗಳು ಸೋಮವಾರ ಹೇಳಿವೆ. ಇತ್ತೀಚೆಗೆ ಎರಡೂ ದೇಶಗಳು ಸೇನಾ ಹಿಂತೆಗೆತಕ್ಕೆ ಒಪ್ಪಂದ ಮಾಡಿಕೊಂಡಿದ್ದವು. ಆ ಪ್ರಕಾರ ಅ.25ರಂದು ಸೇನಾ ಹಿಂತೆಗೆತ ಆರಂಭವಾಗಿತ್ತು ಹಾಗೂ ಚೀನಾ ಸೈನಿಕರು ಟೆಂಟ್ ತೆರವುಗೊಳಿಸಲು ಆರಂಭಿಸಿದ್ದರು. ಅ,28-29ರ ವೇಳೆಗೆ ಹಿಂತೆಗೆತ ಪೂರ್ಣಗೊಳ್ಳಲಿದೆ ಎಂದು ಭಾರತದ ರಕ್ಷಣಾ ಮೂಲಗಳು ಹೇಳಿದ್ದವು.
‘ಆ ಪ್ರಕಾರ ಸೇನಾ ಹಿಂತೆಗೆತ ಬಹುತೇಕ ಮುಕ್ತಾಯವಾಗಿದೆ. ಅಧಿಕೃತ ಘೋಷಣೆ ಯಾವುದೇ ಕ್ಷಣದಲ್ಲಿ ಹೊರಬೀಳಲಿದೆ. ಬಳಿಕ ಒಪ್ಪಂದದಂತೆ ಎರಡೂ ದೇಶಗಳ ಯೋಧರು ಗಡಿಯಲ್ಲಿ ಜಂಟಿ ಪಹರೆ ನಡೆಸಲಿದ್ದಾರೆ’ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.2020ರಲ್ಲಿ ಲಡಾಖ್‌ನ ಗಲ್ವಾನ್ ಗಡಿಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದು 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಬಳಿಕ ಲಡಾಖ್‌ನ 7 ಗಡಿ ಕೇಂದ್ರಗಳಲ್ಲಿ ಉಭಯ ದೇಶಗಳ ಯೋಧರು ಬೀಡು ಬಿಟ್ಟು ಜಟಾಪಟಿ ನಡೆಸಿದ್ದರು. ಆದರೆ ನಂತರದ ಶಾಂತಿ ಮಾತುಕತೆಗಳು ನಡೆದು 5 ಗಡಿಗಳಲ್ಲಿ ಸೇನಾ ಹಿಂತೆಗೆತ ಆಗಿತ್ತು. ಡೆಮ್ಚೋಕ್ ಹಾಗೂ ಡೆಸ್ಪಾಂಗ್‌ನಲ್ಲಿ ಮಾತ್ರ ಆಗಿರಲಿಲ್ಲ. ಅಲ್ಲಿ ಈಗ ಸೇನಾ ಹಿಂತೆಗೆತ ಸಾಕಾರ ಆಗುತ್ತಿದ್ದು, ಗಡಿಯಲ್ಲಿ 5 ವರ್ಷಗಳ ಬಳಿಕ ಶಾಂತಿ ನೆಲೆಸುವ ನಿರೀಕ್ಷೆ ಇದೆ.