ವಿಮಾನದ ಬ್ಲ್ಯಾಕ್‌ಬಾಕ್ಸ್ ಪತ್ತೆ : ದುರಂತ ಕಾರಣ ಶೀಘ್ರ ಬಯಲು

KannadaprabhaNewsNetwork |  
Published : Jun 14, 2025, 02:05 AM ISTUpdated : Jun 14, 2025, 04:40 AM IST
ಬ್ಲಾಕ್‌ ಬಾಕ್ಸ್‌ (ಪ್ರಾತಿನಿಧಿಕ ಚಿತ್ರ) | Kannada Prabha

ಸಾರಾಂಶ

265 ಜನರನ್ನು ಬಲಿಪಡೆದ ಅಹಮದಾಬಾದ್‌ನ ಏರಿಂಡಿಯಾ ಡ್ರೀಮ್‌ಲೈನರ್‌ ವಿಮಾನ ದುರಂತದ ತನಿಖೆ ಚುರುಕುಗೊಂಡಿದ್ದು, ಇಡೀ ಘಟನೆಯ ಮೇಲೆ ಬೆಳಕು ಚೆಲ್ಲಬಹುದಾದ ವಿಮಾನದೊಳಗಿನ ಬ್ಲ್ಯಾಕ್‌ಬಾಕ್ಸ್‌ ಮತ್ತು ಡಿವಿಆರ್‌ ಅನ್ನು ಅಧಿಕಾರಿಗಳ ತಂಡ ಶುಕ್ರವಾರ ಪತ್ತೆ ಹಚ್ಚಿದೆ.

 ಅಹಮದಾಬಾದ್: 265 ಜನರನ್ನು ಬಲಿಪಡೆದ ಅಹಮದಾಬಾದ್‌ನ ಏರಿಂಡಿಯಾ ಡ್ರೀಮ್‌ಲೈನರ್‌ ವಿಮಾನ ದುರಂತದ ತನಿಖೆ ಚುರುಕುಗೊಂಡಿದ್ದು, ಇಡೀ ಘಟನೆಯ ಮೇಲೆ ಬೆಳಕು ಚೆಲ್ಲಬಹುದಾದ ವಿಮಾನದೊಳಗಿನ ಬ್ಲ್ಯಾಕ್‌ಬಾಕ್ಸ್‌ ಮತ್ತು ಡಿವಿಆರ್‌ ಅನ್ನು ಅಧಿಕಾರಿಗಳ ತಂಡ ಶುಕ್ರವಾರ ಪತ್ತೆ ಹಚ್ಚಿದೆ. ಗುರುವಾರ, ಘಟನಾ ಸ್ಥಳದಲ್ಲಿನ ಬದುಕುಳಿದಿರಬಹುದಾದ ವ್ಯಕ್ತಿಗಳು ಮತ್ತು ಮೃತಪಟ್ಟವರ ಶವಗಳಿಗಾಗಿ ಹುಡುಕಾಟ ನಡೆಸಿದ್ದ ರಕ್ಷಣಾ ಸಿಬ್ಬಂದಿ, ಶುಕ್ರವಾರ ತಮ್ಮ ಗಮನವನ್ನು ಸಾಕ್ಷ್ಯ ಸಂಗ್ರಹದ ಮೇಲೆ ಕೇಂದ್ರೀಕರಿಸಿದ್ದಾರೆ.

ವಿಮಾನ ಅಪಘಾತದ ತನಿಖೆ ನಡೆಸುವ ಹೊಣೆ ಹೊತ್ತಿರುವ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ)ದ ಅಧಿಕಾರಿಗಳ 40 ಜನರ ತಂಡವು, ಶುಕ್ರವಾರ ಅಪಘಾತ ನಡೆದ ವೈದ್ಯಕೀಯ ಕಾಲೇಜಿನ ವಸತಿ ಸಮುಚ್ಚಯದ ಮೇಲೆ ವಿಮಾನದೊಳಗಿದ್ದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ ಮಾಡಿದೆ. ಜೊತೆಗೆ ರಕ್ಷಣಾ ಸಿಬ್ಬಂದಿಗಳು ವಿಮಾನದೊಳಗಿದ್ದ ಡಿವಿಆರ್‌ ಪತ್ತೆ ಹಚ್ಚುವಲ್ಲೂ ಯಶಸ್ವಿಯಾಗಿದ್ದಾರೆ.

ನಿರ್ಣಾಯಕ ಪುರಾವೆ:

ವಿಮಾನ ಅಪಘಾತದ ತನಿಖೆಯಲ್ಲಿ ಕಪ್ಪು ಪೆಟ್ಟಿಗೆ ಹಾಗೂ ಡಿವಿಆರ್ ಮಹತ್ವದ ಪುರಾವೆ ಒದಗಿಸಲಿವೆ. ಕಿತ್ತಳೆ ಬಣ್ಣದಲ್ಲಿರುವ ಈ ಕಪ್ಪು ಪೆಟ್ಟಿಗೆ ಅಪಘಾತಕ್ಕೂ ಮೊದಲು ವಿಮಾನದ ವೇಗ, ಎತ್ತರ, ಮಾರ್ಗ, ನಕ್ಷೆ ಸೇರಿದಂತೆ ಎಲ್ಲ ತಾಂತ್ರಿಕ ವಿವರಗಳನ್ನೂ ದಾಖಲಿಸುತ್ತಿರುತ್ತದೆ. ಬೆಂಕಿ, ಸ್ಫೋಟ ಸೇರಿದಂತೆ ಯಾವುದೇ ಸ್ವರೂಪದ ಅವಘಡ ನಡೆದರೂ ಹಾನಿಗೀಡಾಗದ ರೀತಿಯಲ್ಲಿ ಇದನ್ನು ರೂಪಿಸಲಾಗಿರುತ್ತದೆ. ಸಾಮಾನ್ಯವಾಗಿ ಒಂದು ವಿಮಾಣದಲ್ಲಿ 2 ಕಪ್ಪು ಪೆಟ್ಟಿಗೆಗಳಿರುತ್ತವೆ. ಡಿವಿಆರ್ ಎಂಬುದು ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಸಿಸಿಟಿವಿ ಕ್ಯಾಮೆರಾಗಳಿಂದ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ಸಂಗ್ರಹಿಸಿಡುತ್ತದೆ.

ಎನ್‌ಐಎ ತನಿಖೆ:ಈ ನಡುವೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಕೇಂದ್ರದ ಇತರ ಸಂಸ್ಥೆಗಳ ಅಧಿಕಾರಿಗಳ ತಂಡ ಗುಜರಾತ್‌ ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವಿಮಾನ ಪತನವಾದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಯಾವುದಾದರೂ ಭಯೋತ್ಪಾದಕರ ಅಥವಾ ದುಷ್ಕರ್ಮಿಗಳ ದುಷ್ಕೃತ್ಯ ಇದೆಯಾ ಎಂಬುದರ ಬಗ್ಗೆ ಎನ್‌ಎಐ ಮಾಹಿತಿ ಕಲೆಹಾಕಲಿದೆ.

ತನಿಖೆಗೆ ಅಮೆರಿಕ, ಬ್ರಿಟನ್‌ ಸಾಥ್‌:ಘಟನೆಯಲ್ಲಿ ಬ್ರಿಟನ್‌ನ 53 ಪ್ರಜೆಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮತ್ತು ವಿಮಾನ ತಯಾರಿಸಿ ಕಂಪನಿ ಬೋಯಿಂಗ್‌ ಅಮೆರಿಕದ್ದಾದ ಹಿನ್ನೆಲೆಯಲ್ಲಿ ಈ ಎರಡೂ ದೇಶಗಳ ತನಿಖಾ ತಂಡಗಳು ಕೂಡಾ ಶುಕ್ರವಾರ ಅಹಮದಾಬಾದ್‌ಗೆ ಆಗಮಿಸಿ ತಮ್ಮ ತನಿಖೆ ಆರಂಭಿಸಿವೆ.

ಗುಜರಾತ್‌ ವಿಮಾನ ದುರಂತಕ್ಕೆ₹2000 ಕೋಟಿ ವಿಮಾ ಪರಿಹಾರ?

ನವದೆಹಲಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರ್ಘಟನೆಯು ಭಾರತದ ಇತಿಹಾಸದಲ್ಲಿ ಈವರೆಗಿನ ಅತಿ ದುಬಾರಿ ವಿಮಾನ ದುರಂತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಕಾರಣ, ದುರಂತದಲ್ಲಿ ಮೃತಪಟ್ಟವರ ಇನ್ಶೂರೆನ್ಸ್‌ ಕ್ಲೇಮ್‌ 2000 ಕೋಟಿ ರು. ತಲುಪುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.ಬೋಯಿಂಗ್‌ ಕಂಪನಿಯ ಡ್ರೀಮ್‌ಲೈನರ್‌ ವಿಮಾನಕ್ಕೆ 2,410 ಕೋಟಿ ರು.ವರೆಗೆ ವಿಮೆ ಮಾಡಿಸಲಾಗುತ್ತದೆ. ಆದರೆ ವಿಮಾನ ಹಳೆಯದಾಂದಂತೆ ಅದರ ಮೌಲ್ಯವೂ ಕಡಿಮೆಯಾಗುವ ಕಾರಣ ಕ್ಲೇಮಿನ ಮೊತ್ತ ಇಳಿಯಬಹುದು ವಿಮಾನ 11 ವರ್ಷದ ಹಳೆಯದಾದ ಕಾರಣ ಅದರ ಮೌಲ್ಯ ಇದೀಗ 500-1000 ಕೋಟಿ ರು.ವರೆಗೂ ಇಳಿದಿರಬಹುದು. ಇಷ್ಟು ಮೊತ್ತವನ್ನು ವಿಮಾ ಕಂಪನಿಗಳು ಪಾವತಿಸಬೇಕಾಗಿ ಬರಬಹುದು.

ಇನ್ನು ವಿಮಾನದಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಂತಾರಾಷ್ಟ್ರೀಯ ನಿಯಮಗಳ ಅನ್ವಯ ಇವರಿಗೆಲ್ಲಾ ಕನಿಷ್ಠ ತಲಾ 1.4 ಕೋಟಿ ರು. ಪರಿಹಾರ ನೀಡಬೇಕಾಗುತ್ತದೆ. ಅಂದರೆ ಅಂದಾಜು 350 ಕೋಟಿ ರು. ಪರಿಹಾರ ನೀಡಬೇಕಾಗಿ ಬರಬಹುದು. ಇನ್ನು ವಿದೇಶಿ ಪ್ರಜೆಗಳೇ 61 ಜನರು ಇರುವ ಕಾರಣ ಅವರಿಗೆ ನೀಡಬೇಕಾದ ಮೊತ್ತವೂ ಹೆಚ್ಚಾಗಬಹುದು.ಇದರ ಜೊತೆಗೆ ವಿಮಾನ ಪತನದ ವೇಳೆ ಹಲವು ಕಟ್ಟಡಗಳು ನಾಶವಾಗಿವೆ ಮತ್ತು ನಾಗರಿಕರು ಕೂಡಾ ಸಾವನ್ನಪ್ಪಿದ್ದಾರೆ. ಇವರಿಗೂ ವಿಮೆ ಹಣವನ್ನು ವಿಮಾ ಕಂಪನಿಗಳು ಪಾವತಿ ಮಾಡಬೇಕಾಗುತ್ತದೆ.

ಹೊಣೆಗಾರಿಕೆ ವಿಮಾ ಕ್ಲೈಮ್‌ಗಳು ಬೇರೆ ಬೇರೆ ವಿಚಾರಗಳನ್ನು ಅವಲಂಬಿಸಿರುತ್ತವೆ. ಮೃತರ ವಯಸ್ಸು, ಶಿಕ್ಷಣ, ಉದ್ಯೋಗ, ವೇತನ, ಮದುವೆ ಆಗಿದೆಯೋ ಇಲ್ಲವೋ? ಸಾಮಾನ್ಯ ಆರ್ಥಿಕ ಸ್ಥಿತಿಗತಿ, ಅವಲಂಬಿತರು ಸೇರಿ ವಿವಿಧ ವಿಚಾರಗಳನ್ನು ಆಧರಿಸಿ ಪರಿಹಾರ ಕ್ಲೈಮ್‌ ಮಾಡಲಾಗುತ್ತದೆ. ಹೀಗಾಗಿ ಕ್ಲೇಮಿನ ಮೊತ್ತ 2000 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆ ಇದೆ ಎಂದು ವಿಮಾ ಕ್ಷೇತ್ರದ ತಜ್ಞರು ಅಂದಾಜಿಸಿದ್ದಾರೆ.ಏರಿಂಡಿಯಾ ಭಾರತ ಸೇರಿದಂತೆ ಜಾಗತಿಕ ವಿಮಾ ಕಂಪನಿಗಳ ಜೊತೆ ಬೇರೆ ಬೇರೆ ಸ್ತರದ ವಿಮಾ ಒಪ್ಪಂದ ಮಾಡಿಕೊಂಡಿರುವ ಕಾರಣ ಒಂದೇ ವಿಮಾ ಕಂಪನಿಗೆ ಇಷ್ಟು ಹೊರೆ ಬೀಳುವುದಿಲ್ಲ. ಹಲವು ಕಂಪನಿಗಳು ಈ ಹೊರೆ ಹೊರಬೇಕಾಗಿ ಬರಲಿದೆ ಎನ್ನಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ