ವಿಧಾನಸಭೆಗೆ 2 ಬಣವಾಗಿ ಆಗಮಿಸಿದ ಶಾಸಕರು
ವಿಜಯ್ ವಿಶ್ವಾಸಮತ ವೇಳೆ ಅಡ್ಡಮತದಾನ ಖಚಿತ?ಎಡಪ್ಪಾಡಿ ಪದಚ್ಯುತಿಗೆಎಡಿಎಂಕೆ ಶಾಸಕರ ಒತ್ತಾಯ
ವಿಜಯ್‌ಗೆ ಬೆಂಬಲ ವಿಷಯದಲ್ಲಿ ಪಕ್ಷದಲ್ಲಿ ಭಿನ್ನಮತಚೆನ್ನೈ: ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಬೆಂಬಲಿಸುವ ವಿಷಯದಲ್ಲಿ ಎಐಎಡಿಎಂಕೆ ಪಕ್ಷದಲ್ಲಿ ಕಾಣಿಸಿಕೊಂಡಿರುವ ಭಿನ್ನಮತ ಇದೀಗ ಪಕ್ಷದ ಅಧ್ಯಕ್ಷ ಎಡಪ್ಪಾಡಿ ಪಳನಿಸ್ವಾಮಿ ಅವರ ಸ್ಥಾನಕ್ಕೆ ಕುತ್ತು ತರತೊಡಗಿದೆ. ಒಂದು ವೇಳೆ ಎಡಪ್ಪಾಡಿ ಹುದ್ದೆ ಬಿಡದೇ ಹೋದರೆ ಪಕ್ಷವೇ ಹೋಳಾಗುವ ಭೀತಿಗೆ ತುತ್ತಾಗಿದೆ.
ಇದರ ಮುಂದುವರೆದ ಭಾಗವಾಗಿ, ಎಡಪ್ಪಾಡಿ ಮತ್ತು ಷಣ್ಮುಗಂ ಬಣದ ಶಾಸಕರು ಸೋಮವಾರ ವಿಧಾನಸಭೆಗೆ ಪ್ರತ್ಯೇಕವಾಗಿಯೇ ಆಗಮಿಸಿ ಆಸೀನರಾಗಿದ್ದಾರೆ. ಜೊತೆಗೆ ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಪರಿಗಣಿಸಬೇಕು ಎಂದು ಒಂದು ಬಣ, ಹಂಗಾಮಿ ಸ್ಪೀಕರ್‌ಗೆ ಮನವಿ ಮಾಡಿದ್ದರೆ, ಮತ್ತೊಂದು ಬಣ ಷಣ್ಮುಗಂ ಅವರ ನಾಯಕತ್ವ ಮಾನ್ಯ ಮಾಡಲು ಮನವಿ ಮಾಡಿದೆ. ಪಳನಿಗೆ 17 ಶಾಸಕರ ಬೆಂಬಲ ಇದ್ದರೆ, ಷಣ್ಮುಗಂ ಅವರಿಗೆ 30 ಶಾಸಕರ ಬೆಂಬಲ ಇದೆ ಎನ್ನಲಾಗಿದೆ.
ಬುಧವಾರ ಸಿಎಂ ವಿಜಯ್ ವಿಶ್ವಾಸಮತ ಯಾಚನೆ ಮಾಡಲಿದ್ದು, ಈ ವೇಳೆ ಷಣ್ಮುಗಂ ಅವರ ಬಣ ವಿಜಯ್ ಪರವಾಗಿ ಅಡ್ಡ ಮತದಾನ ಮಾಡಲಿದೆ. ಈ ವೇಳೆ ಅದನ್ನು ಅಸಿಂಧು ಎಂದು ಪರಿಗಣಿಸಲು ಎಡಪ್ಪಾಡಿ ಬಣ ಮನವಿ ಮಾಡಿದರೆ ತಮ್ಮದೇ ನಿಜವಾದ ಎಐಎಡಿಎಂಕೆ ಎಂದು ಪರಿಗಣಿಸುವಂತೆ ಷಣ್ಮುಗಂ ಬಣ ಮನವಿ ಮಾಡಲಿದೆ ಎನ್ನಲಾಗಿದೆ. ಹೀಗಾಗಿ ಬುಧವಾರದ ಬೆಳವಣಿಗೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
==
ಚೆನ್ನೈ: ಯಾವುದೇ ರಾಜಕೀಯ ಪಕ್ಷದ ನಾಯಕರ ಮನೆಯಲ್ಲಿ ಕೆಲಸ ಮಾಡುವವರು ಅವರಿಗೇ ಮತ ಹಾಕುವುದು ಸಾಮಾನ್ಯ. ಆದರೆ ಎಂಡಿಎಂಕೆ ಸ್ಥಾಪಕ ವೈಕೋ ಅವರ ಮನೆಕೆಲಸದಾಕೆ ತಾವು ವಿಜಯ್‌ಗೆ ಮತ ಹಾಕಿದ್ದನ್ನು ಬಹಿರಂಗಪಡಿಸಿದ್ದಾರೆ. ಸೋಮವಾರ ವಿಜಯ್ ವೈಕೋ ಮನೆಗೆ ಬಂದಿದ್ದ ವೇಳೆ ಆಕೆಯೇ ಈ ವಿಷಯ ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ವೈಕೋ ಮತ್ತು ವಿಜಯ್ ಇಬ್ಬರೂ ಕಿಸಕ್ಕೆಂದಿದ್ದಾರೆ.
ಮಾಜಿ ಸಿಎಂ ಸ್ಟಾಲಿನ್ ಭೇಟಿಯಾದ ವಿಜಯ್
ಚೆನ್ನೈ: ತಮಿಳುನಾಡು ನೂತನ ಮುಖ್ಯಮಂತ್ರಿ ವಿಜಯ್, ಸೋಮವಾರ ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ನಿವಾಸಕ್ಕೆ ಸೌಜನ್ಯದ ಭೇಟಿ ನೀಡಿದರು. ಈ ವೇಳೆ ಪರಸ್ಪರ ನಾಯಕರು ಒಬ್ಬರೊಬ್ಬರನೊಬ್ಬರು ಆಲಂಗಿಸಿಕೊಂಡು ಶಾಲು ಹೊದಿಸಿ ಸನ್ಮಾನಿಸಿದರು. ಬುಧವಾರ ವಿಧಾನಸಭೆಯಲ್ಲಿ ವಿಜಯ್ ಬಹುಮತ ಸಾಬೀತು ಪಡಿಸಬೇಕಿದ್ದು ಅದಕ್ಕೆ ಮುನ್ನ ಈ ಭೇಟಿ ನೀಡಿದೆ. ಪ್ರಸಕ್ತ ಟಿವಿಕೆಗೆ ಬೆಂಬಲ ನೀಡಿರುವ ವಿಸಿಕೆ, ಐಯುಎಂಎಲ್ ಹಾಗೂ ಎಡಪಕ್ಷಗಳು ಚುನಾವಣೆ ವೇಳೆ ಡಿಎಂಕೆ ಮೈತ್ರಿ ಕೂಟದ ಭಾಗವಾಗಿದ್ದವು.