ನವದೆಹಲಿ: ಏರ್ ಇಂಡಿಯಾ ವಿಮಾನ ಸಂಸ್ಥೆ ಅವ್ಯವಸ್ಥೆಗಳು ಮುಂದುವರೆದಿವೆ. ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಗುರುವಾರ ಮಧ್ಯಾಹ್ನ 3:30ಕ್ಕೆ ಹೊರಡಬೇಕಿದ್ದ ಬೋಯಿಂಗ್ ವಿಮಾನವು ಎಸಿ ಕೈಕೊಟ್ಟು ಶುಕ್ರವಾರ ರಾತ್ರಿ ಆದರೂ ಹೊರಡದೇ ಪ್ರಯಾಣಿಕರನ್ನು ಕಂಗಾಲಾಗಿಸಿದೆ.
ಇದರಿಂದಾಗಿ ಪ್ರಯಾಣಿಕರು ಸುಮಾರು 50 ಡಿಗ್ರಿ ತಾಪದಲ್ಲಿ ಕುದಿಯುತ್ತಿರುವ ದಿಲ್ಲಿಯಲ್ಲಿ ಪಡಬಾರದ ಪಟ್ಟು ಏರ್ ಇಂಡಿಯಾಗೆ ಹಿಡಿಶಾಪ ಹಾಕಿದ್ದರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಅವಾಂತರದ ಬಗ್ಗೆ ಸ್ಪಷ್ಟನೆ ಕೋರಿ ಏರ್ ಇಂಡಿಯಾಗೆ ನೋಟಿಸ್ ನೀಡಿದೆ.
ಆಗಿದ್ದೇನು?:
‘ತಾಂತ್ರಿಕ ಕಾರಣ’ ನೀಡಿ ಮೊದಲಿಗೆ ವಿಮಾನವನ್ನು ಗುರುವಾರ ರಾತ್ರಿ 8 ಗಂಟೆಗೆ ಮುಂದೂಡಲಾಯಿತು. 7:20ರಿಂದ ಬದಲಿ ವಿಮಾನ ಹತ್ತಿದ ಪ್ರಯಾಣಿಕರಿಗೆ ಭಾರೀ ಉಷ್ಣಹವೆಯ ನಡುವೆ ಹವಾನಿಯಂತ್ರಕ ಕೈಕೊಟ್ಟು ಮಹಿಳೆಯರು, ವೃದ್ಧರು ಸರಿಯಾದ ಗಾಳಿ ಇಲ್ಲದೆ ಉಸಿರಾಡಲೂ ಕಷ್ಟವಾಗುವಂತಾಯಿತು. ಈ ನಡುವೆ ವಿಮಾನ ಟೇಕಾಫ್ ಆಗುವ ಸಮಯವನ್ನು ರಾತ್ರಿ 10ಕ್ಕೆ ಮುಂದೂಡಲಾಯಿತು.
ಏರೋಬ್ರಿಡ್ಜ್‌ನಲ್ಲಿ 2 ತಾಸು:
ಉಸಿರಾಡಲು ಕಷ್ಟವಾಗಿ ವಿಮಾನದಿಂದ ಹೊರಬಂದ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಮರುಪ್ರವೇಶಿಸಲು ಬಂದ್ ಮಾಡಲಾಯಿತು. ಆದ ಕಾರಣ ವೃದ್ಧರು, ಮಹಿಳೆಯರು, ಮಕ್ಕಳು ಸೇರಿ 200 ಪ್ರಯಾಣಿಕರು 2 ತಾಸುಗಳ ಕಾಲ ಏರೋಬ್ರಿ ಡ್ಜ್ಜ್‌ನಲ್ಲೇ ನಿಂತು ಕಾಯುವಂತಾಯಿತು. ಕೊನೆಗೆ ರಾತ್ರಿ 10 ಗಂಟೆಗೆ ವಿಮಾನವನ್ನು ಮರುದಿನ (ಶುಕ್ರವಾರ) ಬೆಳಗ್ಗೆ 8 ಗಂಟೆಗೆ ಮುಂದೂಡಿರುವುದಾಗಿ ಘೋಷಿಸಿ ನಿಲ್ದಾಣದ ಒಳಗೆ ಬಿಡಲಾಯಿತು.
ಪರದಾಟ:
ರಾತ್ರಿ ತಂಗಲು ಸೂಕ್ತ ವ್ಯವಸ್ಥೆ ಮಾಡದ ಕಾರಣ ಪ್ರಯಾಣಿಕರು ಮತ್ತೊಮ್ಮೆ ಭಾರೀ ಕಷ್ಟ ಅನುಭವಿಸಿದರು. ಏರ್‌ಪೋರ್ಟ್‌ನ ನೆಲದ ಮೇಲೇ ಕೂತು ಕಾಲ ಕಳೆದರು. ಈ ನಡುವೆ ಪ್ರಯಾಣವನ್ನು ಬದಲಿಸಲು ಇಲ್ಲವೇ ರದ್ದು ಮಾಡಲೂ ವಿಮಾನಸಂಸ್ಥೆ ಅವಕಾಶ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೂ ಮತ್ತೆ ಎರಡು ಬಾರಿ ಮುಂದೂಡಿಕೆಯಾಗಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಅಮೆರಿಕದತ್ತ ಪ್ರಯಾಣ ಬೆಳೆಸಿತು.
ಡಿಜಿಸಿಎ ನೋಟಿಸ್:
ಅನಿಯಮಿತ ವಿಳಂಬ ಮಾಡಿದ್ದಕ್ಕೆ ಸ್ಪಷ್ಟೀಕರಣ ಕೋರಿ ವಿಮಾನಯಾನ ನಿಯಂತ್ರಣ ಪ್ರಾಧಿಕಾರ (ಡಿಜಿಸಿಎ) ಏರ್ ಇಂಡಿಯಾಗೆ ನೋಟಿಸ್ ನೀಡಿದ್ದು, ಪ್ರಯಾಣಿಕರಿಗೆ ಸೂಕ್ತ ಬದಲಿ ವ್ಯವಸ್ಥೆ ಮಾಡದ ಕಾರಣ ಕ್ರಮ ಕೈಗೊಳ್ಳುವ ಕುರಿತು ಎಚ್ಚರಿಸಿದೆ.