ಮುಂಬೈ: ಪ್ರತ್ಯೇಕತೆಯ ವದಂತಿಗಳ ಮಧ್ಯೆ, ಗುರುವಾರ ರಾತ್ರಿ ಮುಂಬೈನ ಸನ್-ಎನ್-ಸ್ಯಾಂಡ್ ಹೋಟೆಲ್‌ನಲ್ಲಿ ನಡೆದ ವಿವಾಹದ ಆರತಕ್ಷತೆಯಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ನಟ ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ. ಇತ್ತೀಚೆಗೆ ಪತಿ ಹಾಗೂ ಪತ್ನಿ ಇಬ್ಬರೂ ಸಾರ್ವಜನಿಕವಾಗಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿರಲಿಲ್ಲ. ಇದು ನಾನಾ ಊಹಾಪೋಹಗಳಿಗೆ ನಾಂದಿ ಹಾಡಿತ್ತು.
ಪಾಕ್‌ನಲ್ಲಿ ಉಗ್ರ ಮೌಲಾನಾ ಅಜರ್ ಬಹಿರಂಗ ಭಾಷಣ: ಭಾರತ ಕಿಡಿ
ನವದೆಹಲಿ: ವಿಶ್ವಸಂಸ್ಥೆಯಿಂದ ನಿಷೇಧಕ್ಕೆ ಒಳಗಾಗಿರುವ ಪಾಕ್ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ 2 ದಶಕದ ಬಳಿಕ ಇದೇ ಮೊದಲ ಬಾರಿ ಪಾಕ್‌ನಲ್ಲಿ 2 ಬಹಿರಂಗ ಸಭೆಯಲ್ಲಿ ಭಾಷಣ ಮಾಡಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಈ ವೇಳೆ ಆತ ಭಾರತ ಮತ್ತು ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಜಿಹಾದಿ ಕಾರ್ಯಾಚರಣೆ ನವೀಕರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.ಇದಕ್ಕೆ ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಕಿಡಿಕಾರಿದ್ದು, ‘ದೇಶದಲ್ಲಿ ಅಜರ್ ಇರುವುದನ್ನು ಪಾಕಿಸ್ತಾನ ಯಾವಾಗಲೂ ನಿರಾಕರಿಸುತ್ತದೆ, ಆದರೆ ಅಜರ್ ಭಾಷಣದ ವರದಿಗಳನ್ನು ನಂಬಿದರೆ, ಅದು ಪಾಕಿಸ್ತಾನದ ದ್ವಂದ್ವವನ್ನು ಬಹಿರಂಗಪಡಿಸುತ್ತದೆ ಈ ಬಗ್ಗೆ ಕ್ರಮ ಅಗತ್ಯ’ ಎಂದರು.
ಬಾದಲ್ ಮೇಲೆ ಉಗ್ರ ಚೌರಾ ದಾಳಿ ಸ್ವಯಂಪ್ರೇರಿತ: ಪೊಲೀಸ್
ಚಂಡೀಗಢ: ಸಿಖ್ಖರ ಧಾರ್ಮಿಕ ಸ್ಥಳವಾದ ಗುರುದ್ವಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಮಾಜಿ ಪಂಜಾಬ್ ಡಿಸಿಎಂ ಸುಖಬೀರ್ ಸಿಂಗ್ ಬಾದಲ್ ಅವರ ಮೇಲೆ ಉಗ್ರ ನರೈನ್ ಸಿಂಗ್ ಚೌರಾ ನಡೆಸಿದ ವಿಫಲ ದಾಳಿ ಸ್ವಯಂಪ್ರೇರಿತ ಎಂದು ಪ್ರಾರ್ಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ದಾಳಿ ಯತ್ನದ ಬಳಿಕ ಚೌರಾನನ್ನು 3 ದಿನ ಪೊಲೀಸ್ ವಶದಲ್ಲಿಡಲಾಗಿತ್ತು.
ಸಿಖ್ಖರ ಪರಮೋಚ್ಚ ನ್ಯಾಯಮಂಡಳಿ ಅಕಾಲ್ ತಖ್ತ್, ಬಾದಲ್‌ಗೆ ಸ್ವರ್ಣಮಂದಿರದಲ್ಲಿ ವಿವಿಧ ಸೇವೆಗಳನ್ನು ಮಾಡುವ ಶಿಕ್ಷೆ ವಿಧಿಸಿದ್ದು ತಿಳಿಯುತ್ತಿದ್ದಂತೆ ಚೌರಾ ಹತ್ಯೆಯ ಸಂಚು ರೂಪಿಸಿದ್ದ ಎನ್ನಲಾಗಿದ್ದು, ಆತ ಬಳಸಿದ್ದ 9ಎಂಎಂ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ. ಶಿಕ್ಷೆಯ ಭಾಗವಾಗಿ ಬಾದಲ್ ಸ್ವರ್ಣಮಂದಿರದ ದ್ವಾರಪಾಲಕನಾಗಿ ಸೇವೆ ಸಲ್ಲಿಸುತ್ತಿದ್ದಾಗ ದಾಳಿಕೋರ ಚೌರಾ ಅವರತ್ತ ಗುಂಡು ಹಾರಿಸಲು ಯತ್ನಿಸಿದ್ದ. ಆಗ ಬಳಿಯಲ್ಲಿದ್ದ ಪೊಲೀಸ್ ಸಂಭವಿಸಲಿದ್ದ ಅನಾಹುತವನ್ನು ತಪ್ಪಿಸಿದ್ದರು.
ಮೃತಳ ಕುಟುಂಬಕ್ಕೆ ಅಲ್ಲು 25 ಲಕ್ಷ ರು. ಪರಿಹಾರ
ಹೈದರಾಬಾದ್: ತಮ್ಮ ಪುಷ್ಪ-2 ಚಿತ್ರ ನೋಡಲು ಬಂದು ಕಾಲ್ತುಳಿತಕ್ಕೆ ಬಲಿಯಾದ ಹೈದರಾಬಾದ್ ಮಹಿಳೆಯ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಶುಕ್ರವಾರ 25 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ಮಹಿಳೆಯ ಮಗ ಕೂಡ ಘಟನೆಯಲ್ಲಿ ಗಾಯಗೊಂಡಿದ್ದು, ಆತ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ.
ಪುಷ್ಪ-2 ಪ್ರದರ್ಶನದ ವೇಳೆ ನಿಗೂಢ ದ್ರಾವಣ ಸ್ಪ್ರೇ: ಥೇಟರಲ್ಲಿ ಗೊಂದಲ
ಮುಂಬೈ: ಬಾಂದ್ರಾದ ಗಯೆಟಿ ಗ್ಯಾಲಕ್ಸಿ ಚಿತ್ರಮಂದಿರದಲ್ಲಿ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಟ-2 ಚಿತ್ರ ಪ್ರದರ್ಶನದ ವೇಳೆ ನಿಗೂಢ ದ್ರಾವಣ ಸ್ಪ್ರೇ ಮಾಡಲಾಗಿದ್ದು, ಸಿನಿಮಾ ವೀಕ್ಷಿಸಲು ಬಂದವರು ಆತಂಕಕ್ಕೊಳಗಾದ ಘಟನೆ ಗುರುವಾರ ರಾತ್ರಿ ನಡೆದಿದೆ.ಹೈದರಾಬಾದ್‌ನ ಚಿತ್ರಮಂದಿರದಲ್ಲಿ ಇದೇ ಚಿತ್ರದ ಪ್ರೀಮಿಯಂ ಪ್ರದರ್ಶನದ ವೇಳೆ ನೂಕುನುಗ್ಗಲು ಉಂಟಾಗಿ ಮಹಿಳೆಯೊಬ್ಬರು ಉಸಿರುಗಟ್ಟ ಸಾವನ್ನಪ್ಪಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಚಿತ್ರಮಂದಿರದಲ್ಲಿ ಸಿಂಪಡಿಸಲಾದ ನಿಗೂಢ ದ್ರವದಿಂದಾಗಿ ಅಲ್ಲಿದ್ದವರಲ್ಲಿ ಕೆಮ್ಮು ಹಾಗೂ ಗಂಟಲು ಸಮಸ್ಯೆ ಶುರುವಾಗಿದ್ದು, ಚಿತ್ರಪ್ರದರ್ಶನವನ್ನು ನಿಲ್ಲಿಸಲಾಯಿತು. ಈ ಕುರಿತ ವಿಡಿಯೋ ಹರಿದಾಡುತ್ತಿದ್ದು, ಗೊಂದಲದಲ್ಲಿ ಜನ ತಮ್ಮ ಮುಖವನ್ನು ಮುಚ್ಚಿಕೊಂಡಿರುವುದನ್ನು ಕಾಣಬಹುದಾಗಿದೆ.ವಿಷಯ ತಿಳಿಯುತ್ತಿದ್ದಂತೆ ಪೊಲಿಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ಜನವರಿಯಿಂದ ಮಾರುತಿ ಕಾರು ದರ ಶೇ.4, ಮಹೀಂದ್ರಾ ಶೇ.3 ಹೆಚ್ಚಳ
ನವದೆಹಲಿ: ಹ್ಯುಂಡೈ, ಆಡಿ ಬೆನ್ನಲ್ಲೇ ವಾಹನಗಳ ತಯಾರಿಕಾ ಕಂಪನಿ ಮಾರುತಿ ಸುಜುಕಿ, ತನ್ನ ಕಾರುಗಳ ಬೆಲೆಯನ್ನು ಶೇ.4ರವರೆಗೆ ಏರಿಸುವ ಘೋಷಣೆ ಮಾಡಿದೆ. 2025ರ ಜನವರಿಯಿಂದ ದರ ಶೇ.4ರಷ್ಟು ಹೆಚ್ಚಲಿದೆ ಎಂದಿದೆ.
ಮಹೀಂದ್ರಾ ಕೂಡ ಶೇ.3ರಷ್ಟು ಏರಿಕೆ ಘೋಷಣೆ ಮಾಡಿದೆ.‘ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳ ದೃಷ್ಟಿಯಿಂದ, ಕಾರುಗಳ ಬೆಲೆಯನ್ನು ಜನವರಿ ಅಂತ್ಯದಿಂದ ಹೆಚ್ಚಿಸಲಾಗುತ್ತದೆ ಮತ್ತು ವಾಹನಗಳ ಮಾದರಿಯನ್ನು ಅವಲಂಬಿಸಿ ಅದರಲ್ಲಿ ಬದಲಾಗುತ್ತದೆ’ ಎಂದು ಕಂಪನಿಗಳು ಹೇಳಿವೆ.ಡಿ.5ರಂದು ಮತ್ತೊಂದು ವಾಹನ ತಯಾರಿಕಾ ಕಂಪನಿ ಹ್ಯುಂಡೈ ಮೋಟಾರ್ ಇಂಡಿಯಾ 2025ರ ಜನವರಿ 1 ರಿಂದ ಮಾಡೆಲ್ ಶ್ರೇಣಿಯಾದ್ಯಂತ ತನ್ನ ವಾಹನಗಳ ಬೆಲೆಯನ್ನು 25 ಸಾವಿರದವರೆಗೆ ಹೆಚ್ಚಿಸುವುದಾಗಿ ಘೋಷಿಸಿತ್ತು.