ಆಂಧ್ರ ಕಾಲ್ತುಳಿತ ದೇವರ ಆಟ : ದೇಗುಲದ ಸ್ಥಾಪಕ!

| N/A | Published : Nov 03 2025, 03:15 AM IST / Updated: Nov 03 2025, 04:40 AM IST

Andhra Stampede

ಸಾರಾಂಶ

ಜಿಲ್ಲೆಯ ಕಾಶಿಬುಗ್ಗ ಗ್ರಾಮದಲ್ಲಿರುವ, ‘ಮಿನಿ ತಿರುಪತಿ’ ಎಂದೇ ಖ್ಯಾತಿ ಪಡೆದಿದ್ದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿ 9 ಭಕ್ತರು ಸಾವಿಗೀಡಾಗಿದ್ದರೂ ಈ ಬಗ್ಗೆ ದೇಗುಲ ಸಂಸ್ಥಾಪಕ ಹರಿಮುಕುಂದ ಪಾಂಡಾ (94) ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ.  

 ಶ್ರೀಕಾಕುಳಂ (ಆಂಧ್ರಪ್ರದೇಶ): ಜಿಲ್ಲೆಯ ಕಾಶಿಬುಗ್ಗ ಗ್ರಾಮದಲ್ಲಿರುವ, ‘ಮಿನಿ ತಿರುಪತಿ’ ಎಂದೇ ಖ್ಯಾತಿ ಪಡೆದಿದ್ದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿ 9 ಭಕ್ತರು ಸಾವಿಗೀಡಾಗಿದ್ದರೂ ಈ ಬಗ್ಗೆ ದೇಗುಲ ಸಂಸ್ಥಾಪಕ ಹರಿಮುಕುಂದ ಪಾಂಡಾ (94) ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ಅದರ ಬದಲಾಗಿ ‘ಇದೆಲ್ಲ ದೇವರ ಆಟ’ ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಘಟನೆ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಭಾರಿ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆ ಇದ್ದರೂ ಕಾರ್ತಿಕ ಏಕಾದಶಿ ವಿಶೇಷ ದರ್ಶನದ ಬಗ್ಗೆ ಪೊಲೀಸರಿಗೇಕೆ ಮಾಹಿತಿ ನೀಡಿರಲಿಲ್ಲ?’ ಎಂಬ ಪ್ರಶ್ನೆಗೆ ಉತ್ತರಿಸುವಾಗ ಹಾರಿಕೆ ಉತ್ತರಗಳನ್ನು ನೀಡಿದರು,

ಕಾಲ್ತುಳಿತ ದುರಂತ ಒಂದು ದೇವರ ಆಟ

‘ಕಾಲ್ತುಳಿತ ದುರಂತ ಒಂದು ದೇವರ ಆಟ. ಇದಕ್ಕೆ ದೇಗುಲದ ಯಾರೂ ಜವಾಬ್ದಾರರಲ್ಲ. ನಾನು ನನ್ನ ಖಾಸಗಿ ಜಾಗದಲ್ಲಿ ದೇವಾಲಯ ನಿರ್ಮಿಸಿದ್ದೇನೆ. ನಾನೇಕೆ ಕಾರ್ತಿಕ ಏಕಾದಶಿ ದಿನದ ವೆಂಕಟೇಶ್ವರನ ದರ್ಶನದ ಏರ್ಪಾಡಿಗೆ ಪೊಲೀಸರು, ಆಡಳಿತದ ಅನುಮತಿ ಪಡೆಯಬೇಕು?’ ಎಂದು ತಿರುಗೇಟು ನೀಡಿದರು.

‘ನೀವು ನನ್ನ ವಿರುದ್ಧ ಅನೇಕ ಪ್ರಕರಣ ದಾಖಲಿಸಬಹುದು. ನನಗೆ ಯಾವುದೇ ಸಮಸ್ಯೆಯಿಲ್ಲ. ಸಾಮಾನ್ಯವಾಗಿ ದೇವಾಲಯಕ್ಕೆ ಸೀಮಿತ ಸಂಖ್ಯೆಯ ಜನ ಬರುತ್ತಿದ್ದರು. ಆದರೆ ನಿನ್ನೆ ಭಾರಿ ಸಂಖ್ಯೆಯ ಜನ ಅನಿರೀಕ್ಷಿತವಾಗಿ ಬಂದರು. ಒಂದೇ ಬಾರಿಗೆ ಇಷ್ಟೊಂದು ಜನರು ಬಂದರೆ ನಾನು ಏನು ಮಾಡಬೇಕು?’ ಎಂದು ಪ್ರಶ್ನಿಸಿದರು.

‘ಬಂದ ಭಕ್ತರಿಗೆ ನನ್ನ ಸ್ವಂತ ಖರ್ಚಿನಿಂದ ಪ್ರಸಾದ ನೀಡುತ್ತೇನೆ. ಅವರಿಂದ ಏನೂ ಕೇಳುವುದಿಲ್ಲ. ಆದರೆ ಶನಿವಾರ ಬೆಳಿಗ್ಗೆ 9ರ ಹೊತ್ತಿಗೆ ಇದ್ದಕ್ಕಿದ್ದಂತೆ ಭಕ್ತರ ಸಂಖ್ಯೆ ಹೆಚ್ಚಾಯಿತು. ನಾವು ತಯಾರಿಸಿದ ಪ್ರಸಾದ ಕೂಡ ಬೇಗ ಖಾಲಿ ಆಯಿತು. ಮತ್ತೆ ಪ್ರಸಾದ ಸಿದ್ಧಪಡಿಸಲು ಕೂಡ ಅವಕಾಶ ಸಿಗದಷ್ಟು ಭಕ್ತರು ಏಕಾಏಕಿ ಬಂದರು. ಕಾಲ್ತುಳಿತ ಆಯಿತು. ಈ ಘಟನೆಯ ಕಾರಣ ಮಧ್ಯಾಹ್ನ 3ರವರೆಗೆ ಊಟ ಮಾಡದೇ ನಾನೂ ಕೂಡ ಅಲ್ಲೇ ಇದ್ದೆ’ ಎಂದರು.

ಅಂದಾಜಿನ ಪ್ರಕಾರ 2000ರ ಬದಲು ಏಕಾಏಕಿ 25000 ಭಕ್ತರು ದೇಗುಲಕ್ಕೆ ಬಂದಿದ್ದೇ ಘಟನೆಗೆ ಕಾರಣ ಎನ್ನಲಾಗಿತ್ತು.

ದೇಗುಲಕ್ಕೆ ಭಕ್ತರ ಪ್ರವೇಶ ಬಂದ್‌:

9 ಭಕ್ತರು ಕಾಲ್ತುಳಿತದಿಂದ ಮೃತಪಟ್ಟ ಕಾರಣ, ರಾಜ್ಯ ಪೊಲೀಸರು ಭಾನುವಾರ ದೇಗುಲವನ್ನು ಬಂದ್ ಮಾಡಿಸಿದ್ದಾರೆ ಹಾಗೂ ಭಕ್ತರು ದೇವಾಲಯಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದಾರೆ.

- ಆಂಧ್ರದ ಶ್ರೀಕಾಕುಳಂನಲ್ಲಿರುವ, ಮಿನಿ ತಿರುಪತಿಯಲ್ಲಿ ಕಾಲ್ತುಳಿತಕ್ಕೆ 9 ಜನರು ಬಲಿ ಆಗಿದ್ದರು

- ಈ ದುರ್ಘಟನೆ ಬಗ್ಗೆ ಖಾಸಗಿ ದೇಗುಲದ ಸಂಸ್ಥಾಪಕನ ಪ್ರತಿಕ್ರಿಯೆ ಬಯಸಿದ ವರದಿಗಾರರು

- ನನ್ನ ವಿರುದ್ಧ ಕೇಸ್‌ ದಾಖಲಿಸಿ, ನನಗೆ ಯಾವುದೇ ಸಮಸ್ಯೆ ಇಲ್ಲ ಎಂದ ಸಂಸ್ಥಾಪಕ ಪಾಂಡಾ

- 9 ಮಂದಿ ಭಕ್ತರು ಬಲಿಯಾಗಿದ್ದರೂ ಘಟನೆಯ ಬಗ್ಗೆ ಅತ್ಯಂತ ಉದ್ಧಟತನದಿಂದ ಪಾಂಡಾ ಹೇಳಿಕೆ

Read more Articles on