;Resize=(412,232))
ನವದೆಹಲಿ: ಇತ್ತೀಚಿನ ಇಂಡಿಗೋ ಸಂಸ್ಥೆಯ ಬಿಕ್ಕಟ್ಟಿನಿಂದ ಎಚ್ಚೆತ್ತುಕೊಂಡು ತರಾತುರಿಯಲ್ಲಿ ಎರಡು ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೇವೆ ಆರಂಭಕ್ಕೆ ಅಗತ್ಯವಾದ ನಿರಾಕ್ಷೇಪಣಾ ಪತ್ರ ನೀಡಿತ್ತು. ಆದರೆ ಈ ಪೈಕಿ ಕೇರಳ ಮೂಲದ ಅಲ್ ಹಿಂದ್, ಸೇವೆ ಆರಂಭಕ್ಕೂ ಮುನ್ನವೇ ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಸಂಸ್ಥೆಯ 120 ಸಿಬ್ಬಂದಿಗೆ ನ.15ರಿಂದಲೇ ವೇತನರಹಿತ ಕಡ್ಡಾಯ ರಜೆ ನೀಡಿರುವ ವಿಷಯ ಬೆಳಕಿಗೆ ಬಂದಿದೆ.
ಕೇರಳದ ಕೊಚ್ಚಿ ಮೂಲದ ಅಲ್ ಹಿಂದ್ ಎಂಬ ಸ್ಟಾರ್ಟಪ್, ನಾಗರಿಕ ವಿಮಾನಯಾನ ಸಚಿವಾಲಯದಿಂದ ( ಡಿಜಿಸಿಎ) ನಿರಾಕ್ಷೇಪಣಾ ಪತ್ರ ಪಡೆದಿತ್ತು. ಆದರೆ ಇದರ ಜೊತೆಗೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ಏರ್ ಆಪರೇಟರ್ ಪ್ರಮಾಣಪತ್ರ (ಎಒಸಿ) ಕೂಡಾ ಪಡೆಯಬೇಕಿದೆ. ಆದರೆ ಈ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ ಸೇವೆ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾನು ಆರ್ಥಿಕ ನಷ್ಟಕ್ಕೆ ಒಳಗಾಗಿರುವುದಾಗಿ ಹೇಳಿ 120 ಸಿಬ್ಬಂದಿಗೆ ವೇತನವಿಲ್ಲದೆ ರಜೆ ನೀಡಿದೆ.
ಮೂಲಗಳ ಪ್ರಕಾರ ಕಂಪನಿಗೆ ಸಿಬ್ಬಂದಿ ವೆಚ್ಚ ಸೇರಿದಂತೆ ಇನ್ನಿತರ ವೆಚ್ಚಗಳಿಗೆ ಮಾಸಿಕ 2ಕೋಟಿ ರು. ತಗಲುತ್ತದೆ. ಇದರ ಜತೆಗೆ ಎಒಸಿ ಪಡೆಯುವ ಪ್ರಕ್ರಿಯೆಗೆ ಹಣದ ಅಗತ್ಯ ಇರುವುದರಿಂದ ಅಲ್ ಹಿಂದ್‌ಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಕಳೆದ ನ.15ರಿಂದ ಮುಂದಿನ ಆದೇಶದವರೆಗೂ ಉದ್ಯೋಗಿಗಳಿಗೆ ವೇತನವಿಲ್ಲದೆ ಕಂಪನಿ ರಜೆ ನೀಡಿ ಆದೇಶಿಸಿದೆ.
ಕೇಂದ್ರ ಸರ್ಕಾರ ನೀಡಿರುವ ಎನ್‌ಒಸಿ, ಕೇವಲ ಕಾರ್ಯಾಚರಣೆಗೆ ಅಗತ್ಯವಾದ ಪ್ರಕ್ರಿಯೆ ನಡೆಸಲು ಅನುಮತಿ ನೀಡಿದಂತೆ. ಆದರೆ ಎಒಸಿ ಸಿಕ್ಕ ಬಳಿಕವಷ್ಟೇ ಕಂಪನಿ ವಿಮಾನಗಳ ಸೇರ್ಪಡೆ, ಸಿಬ್ಬಂದಿಗೆ ತರಬೇತಿ, ಪ್ರಾಯೋಗಿಕ ಹಾರಾಟ, ವಿಮಾನ ಹಾರಾಟ ವೇಳಾಪಟ್ಟಿ ಮೊದಲಾದ ಪ್ರಕ್ರಿಯೆಗಳಿಗೆ ಹೆಜ್ಜೆ ಇಡಬಹುದು.