ಭಾರತ ನಿಯೋಗದ ಜಪಾನ್‌, ಯುಎಇ ಭೇಟಿ ಯಶಸ್ವಿ

KannadaprabhaNewsNetwork | Updated : May 23 2025, 04:29 AM IST
ಉಗ್ರ ಪೋಷಕ ಪಾಕಿಸ್ತಾನದ ನೈಜ ಮುಖವಾಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಯಲು ಮಾಡಲು ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿರುವ ಸರ್ವಪಕ್ಷಗಳ ಸಂಸದರ 2 ನಿಯೋಗಗಳು ಗುರುವಾರ ಜಪಾನ್‌, ಯುಇಎಗೆ ಭೇಟಿ ನೀಡಿವೆ ಹಾಗೂ ಪಾಕಿಸ್ತಾನದ ಕೃತ್ಯಗಳ ವಿವರ ನೀಡಿವೆ.
Follow Us

ಅಬುಧಾಬಿ/ಟೋಕಿಯೋ: ಉಗ್ರ ಪೋಷಕ ಪಾಕಿಸ್ತಾನದ ನೈಜ ಮುಖವಾಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಯಲು ಮಾಡಲು ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿರುವ ಸರ್ವಪಕ್ಷಗಳ ಸಂಸದರ 2 ನಿಯೋಗಗಳು ಗುರುವಾರ ಜಪಾನ್‌, ಯುಇಎಗೆ ಭೇಟಿ ನೀಡಿವೆ ಹಾಗೂ ಪಾಕಿಸ್ತಾನದ ಕೃತ್ಯಗಳ ವಿವರ ನೀಡಿವೆ. ಇದಕ್ಕೆ ಎರಡೂ ದೇಶಗಳು ಪೂರಕವಾಗಿ ಸ್ಪಂದಿಸಿ ಉಗ್ರರ ವಿರುದ್ಧದ ಹೋರಾಟಕ್ಕೆ ಬೆಂಬಲ ಘೋಷಿಸಿವೆ. ಹೀಗಾಗಿ ಮೊದಲ ಭೇಟಿಗಳು ಯಶ ಕಂಡಿವೆ.

ಯುಎಇಯಲ್ಲಿ ಸಹಿಷ್ಣುತೆಯ ಸಚಿವ ಶೇಖ್‌ ನಹ್ಯಾನ್‌ ಬಿನ್‌ ಮುಬಾರಕ್‌ ಹಾಗೂ ಜಪಾನ್‌ನ ವಿದೇಶಾಂಗ ಸಚಿವ ತಕೇಶಿ ಇವಾಯಾ ಮತ್ತಿತರರನ್ನು ಭೇಟಿಯಾಗಿ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟ ಕುರಿತು ನಿಯೋಗವು ವಿವರಣೆ ನೀಡಿತು. ಪಹಲ್ಗಾಂ ದಾಳಿ ಹಾಗೂ ಆ ಬಳಿಕ ನಡೆಸಿದ ಆಪರೇಷನ್ ಕಾರ್ಯಾಚರಣೆ ಬಗ್ಗೆಯೂ ಮಾಹಿತಿ ನೀಡಲಾಯಿತು.

ಯುಎಇನಲ್ಲಿ:

ಯುಎಇ ಭಾರತದ ಸರ್ವಪಕ್ಷಗಳ ನಿಯೋಗವನ್ನು ಬರಮಾಡಿಕೊಂಡ ಮೊದಲ ರಾಷ್ಟ್ರವಾಗಿದ್ದು, ಶೇಖ್‌ ನಹ್ಯಾನ್‌ ಬಿನ್‌ ಮುಬಾರಕ್‌ ಅಲ್‌ ನಹ್ಯಾನ್‌ ಅವರ ಜತೆಗೆ ಶಿವಸೇನೆ ಸಂಸದ ಶಶಿಕಾಂತ್‌ ಶಿಂದೆ ನೇತೃತ್ವದ ನಿಯೋಗದ ಸಭೆ ಫಲಪ್ರದವಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾರತದ ಜತೆಗೆ ನಿಲ್ಲುವುದಾಗಿ ಯುಎಇ ತಿಳಿಸಿತು. ಇದೇ ವೇಳೆ ನಿಯೋಗವು ವಿದೇಶಾಂಗ ವ್ಯವಹಾರಗಳ ಸಮಿತಿ ಮುಖ್ಯಸ್ಥ ಡಾ.ಅಲಿ ಅಲ್‌ನುಯೈಮಿ ಅವರ ಜತೆಗೂ ಸಭೆ ನಡೆಸಿತು.

ಶಿಂದೆ ನಿಯೋಗದಲ್ಲಿ ಸಂಸದರಾದ ಮನನ್‌ ಕುಮಾರ್ ಮಿಶ್ರಾ, ಸಂಬಿತ್‌ ಪಾತ್ರ, ಇ.ಟಿ. ಮೊಹಮ್ಮದ್‌ ಬಶೀರ್‌, ಎಸ್‌.ಎಸ್‌. ಅಹ್ಲುವಾಲಿಯಾ, ಅತುಲ್‌ ಗಾರ್ಗ್‌, ಬಾನ್ಸುರಿ ಸ್ವರಾಜ್‌, ಮಾಜಿ ರಾಜಭಾರಿ ಸುಜನ್‌ ಆರ್‌. ಚಿನೋಯ್‌ ಮತ್ತು ಭಾರತದ ಯುಎಇ ರಾಯಭಾರಿ ಸಂಜಯ್‌ ಸುಧೀರ್‌ ಇದ್ದರು.

ಜಪಾನ್‌ನಲ್ಲೂ ಸಭೆ:

ಇನ್ನು ಜೆಡಿಯು ಸಂಸದ ಸಂಜಯ್‌ ಝಾ ನೇತೃತ್ವದ ನಿಯೋಗ ಜಪಾನ್‌ ವಿದೇಶಾಂಗ ಸಚಿವ ಎಚ್‌.ಇ.ತಕೇಶಿ ಇವಾಯ ಅವರ ಜತೆ ಕೆಲಕಾಲ ಮಾತುಕತೆ ನಡೆಸಿತು. ತಕೇಶಿ ಅವರು, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು. ಜಪಾನ್‌ ಮಾಜಿ ಪ್ರಧಾನಿ ಯೊಶಿದೆ ಸುಗಾ, ಜಪಾನ್‌ ಪ್ರಮುಖ ಚಿಂತಕರ ಚಾವಡಿಯ ಪ್ರತಿನಿಧಿಗಳ ಜತೆಗೂ ಈ ಸಂದರ್ಭದಲ್ಲಿ ಮಾತುಕತೆ ನಡೆಸಲಾಯಿತು.

ಝಾ ನಿಯೋಗದಲ್ಲಿ ಸಂಸದರಾದ ಮನನ್‌ ಕುಮಾರ್‌ ಮಿಶ್ರಾ, ಸಸ್ಮಿತ್‌ ಪಾತ್ರ, ಮೊಹಮ್ಮದ್‌ ಬಶೀರ್‌, ಎಸ್‌.ಎಸ್‌.ಅಹ್ಲುಾಲಿಯಾ, ಅತುಲ್‌ ಗಾರ್ಗ್‌, ಬಾನ್ಸುರಿ ಸ್ವರಾಜ್‌, ಮಾಜಿ ರಾಯಭಾರಿ ಸುಜನ್‌ ಚಿನಾಯ್‌, ಭಾರತದ ಯುಎಇ ರಾಯಭಾರಿ ಸಂಜಯ್‌ ಸುಧೀರ್‌ ಇದ್ದರು.

3ನೇ ತಂಡ ಪ್ರಯಾಣ:

ಇನ್ನು ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ 3ನೇ ನಿಯೋಗವು ಗುರುವಾರ ರಷ್ಯಾಗೆ ಪ್ರಯಾಣ ಆರಂಭಿಸಿದೆ. ಈ ನಿಯೋಗವು ರಷ್ಯಾ ಬಳಿಕ ಸ್ಲೋವೇನಿಯಾ, ಗ್ರೀಸ್‌, ಲ್ಯಾಟಿವಾ ಮತ್ತು ಸ್ಪೇನ್‌ಗೆ ಭೇಟಿ ನೀಡಲಿದೆ. ಪಾಕ್‌ ವಿರುದ್ಧ ಭಾರತವು ಸರ್ವಪಕ್ಷಗಳ 7 ನಿಯೋಗಗಳನ್ನು ವಿದೇಶಗಳಿಗೆ ಕಳುಹಿಸಿಕೊಡುತ್ತಿದೆ.

Read more Articles on