ಬಿಹಾರದಲ್ಲಿ ಪಂಚಾಯತ್‌ ಸದಸ್ಯರು, ಅಧ್ಯಕ್ಷರ ಭತ್ಯೆ ದುಪ್ಪಟ್ಟು, 50 ಲಕ್ಷ ವಿಮೆ!

KannadaprabhaNewsNetwork |  
Published : Oct 27, 2025, 12:15 AM ISTUpdated : Oct 27, 2025, 07:00 AM IST
Tejasvi Yadav Bihar

ಸಾರಾಂಶ

 ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಪಂಚಾಯತ್‌ ಸದಸ್ಯರು, ಅಧ್ಯಕ್ಷರ ಭತ್ಯೆ ದುಪ್ಪಟ್ಟು ಮಾಡಲಾಗುವುದು, 50 ಲಕ್ಷ ವಿಮೆ ಹಾಗೂ ಪಿಂಚಣಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಘೋಷಿಸಿದ್ದಾರೆ.

 ಪಟನಾ: ಬಿಹಾರದ ಪ್ರತಿ ಮನೆಗೊಬ್ಬರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ್ದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಇದೀಗ, ಪಂಚಾಯತ್‌ ಪ್ರತಿನಿಧಿಗಳು ಹಾಗೂ ಹಿಂದುಳಿದ ವರ್ಗದವರ ಮತ ಸೆಳೆಯಲು ಮತ್ತಷ್ಟು ಹೊಸ ಘೋಷಣೆಗಳನ್ನು ಮಾಡಿದ್ದಾರೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಪಂಚಾಯತ್‌ ಸದಸ್ಯರು, ಅಧ್ಯಕ್ಷರ ಭತ್ಯೆ ದುಪ್ಪಟ್ಟು ಮಾಡಲಾಗುವುದು, 50 ಲಕ್ಷ ವಿಮೆ ಹಾಗೂ ಪಿಂಚಣಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಘೋಷಿಸಿದ್ದಾರೆ.

ಇದರ ಜತೆಗೆ, ಪಡಿತರ ವಿತರಕರಿಗೆ ಈಗಾಗಲೇ ನೀಡುತ್ತಿರುವ ಕಮಿಷನ್‌ ಹೆಚ್ಚಳ, ಕ್ಷೌರಿಕರು, ಕಂಬಾರರು, ಕಾರ್ಪೆಂಟರ್‌ಗಳಿಗೆ 5 ಲಕ್ಷ ರು. ವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.

ನಿತೀಶ್‌ ಕುಮಾರ್‌ ಸರ್ಕಾರ ಜೂನ್‌ ತಿಂಗಳಲ್ಲಿ ಜಿಲ್ಲಾ ಪರಿಷತ್‌ ಅಧ್ಯಕ್ಷರ ತಿಂಗಳ ಭತ್ಯೆಯನ್ನು 20 ಸಾವಿರದಿಂದ 30 ಸಾವಿರ, ಉಪಾಧ್ಯಕ್ಷರ ಭತ್ಯೆ 10 ಸಾವಿರದಿಂದ 20 ಸಾವಿರ, ಮುಖಿಯಾಗಳ ಭತ್ಯೆ 5 ಸಾವಿರದಿಂದ 7.5 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಇದೀಗ ತೇಜಸ್ವಿ ಯಾದವ್‌, ಪಂಚಾಯತ್‌ ಪ್ರತಿನಿಧಿಗಳ ಮತ ಸೆಳೆಯಲು ಅವರ ವೇತನ ದುಪ್ಪಟ್ಟು ಮಾಡುವ ಘೋಷಣೆ ಮಾಡಿದ್ದಾರೆ.

ಜೊತೆಗೆ, ಪಡಿತರ ವಸ್ತುಗಳ ವಿತರಕರಿಗೆ ಸದ್ಯ ಕ್ವಿಂಟಲ್‌ಗೆ 258.40 ನಂತೆ ರು.ಕಮಿಷನ್ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಈ ಹಿಂದೆ ತೇಜಸ್ವಿ ಯಾದವ್‌ ಅವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರನ್ನು ಕಾಯಂಗೊಳಿಸಲಾಗುವುದು, ಜೀವಿಕಾ ದೀದಿಗಳ ಸುಮಾರು 2 ಲಕ್ಷ ಸಮುದಾಯ ಸಂಘಟಕರಿಗೆ ಸರ್ಕಾರಿ ನೌಕರರ ಸ್ಥಾನ ಮಾನ ನೀಡಿ ಪ್ರತಿ ತಿಂಗಳು 30 ಸಾವಿರ ರು. ವೇತನ ನೀಡುವುದಾಗಿ ಹೇಳಿದ್ದರು.

ಪೊಳ್ಳು ಭರವಸೆ:

ಆದರೆ ಜೆಡಿಯು ಮಾತ್ರ ಆರ್‌ಜೆಡಿ ಭರವಸೆಗಳೆಲ್ಲ ಪೊಳ್ಳು ಎಂದು ಆರೋಪಿಸಿದೆ. ತೇಜಸ್ವಿ ಯಾದವ್‌ ಮೇಲೆ 27 ಭ್ರಷ್ಟಾಚಾರ, ಅಪರಾಧ ಪ್ರಕರಣಗಳಿವೆ. ಬಿಹಾರ, ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಪ್ರಕರಣಗಳಿವೆ. ಸಿಎಂ ನಿತೀಶ್‌ ಕುಮಾರ್‌ ಅವರು ರಾಜ್ಯಕ್ಕೆ ಏನು ಮಾಡಿದ್ದಾರೆಂಬುದು ಜನರಿಗೆ ಗೊತ್ತಿದೆ ಎಂದು ಪಕ್ಷದ ವಕ್ತಾರ ನೀರಜ್‌ ಕುಮಾರ್ ತಿಳಿಸಿದ್ದಾರೆ.

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ್ರೆ ವಕ್ಫ್‌ ಕಾಯ್ದೆ ಕಸದಬುಟ್ಟಿಗೆ: ಆರ್‌ಜೆಡಿ 

ಕಥಿಹಾರ್‌/ಕಿಶನ್‌ಗಂಜ್‌: ಬಿಹಾರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಎನ್‌ಡಿಎ ಸರ್ಕಾರದ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಕಸದಬುಟ್ಟಿಗೆ ಎಸೆಯಲಾಗುವುದು ಎಂದು ಪ್ರತಿಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಘೋಷಿಸಿದ್ದಾರೆ.ಮುಸ್ಲಿಂ ಬಹುಸಂಖ್ಯಾತರಿರುವ ಕಥಿಹಾರ್‌ ಹಾಗೂ ಕಿಶನ್‌ಗಂಜ್‌ ಜಿಲ್ಲೆಗಳಲ್ಲಿ ಭಾನುವಾರ ಸಾರ್ವಜನಿಕ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ತಂದೆ ಲಾಲೂ ಪ್ರಸಾದ್‌ ಯಾದವ್ ಯಾವತ್ತಿಗೂ ಕೋಮು ಶಕ್ತಿಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೆ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಯಾದವ್‌ ಅಂಥ ಶಕ್ತಿಗಳನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಅವರಿಂದಾಗಿಯೇ ಆರೆಸ್ಸೆಸ್‌ ಹಾಗೂ ಅದರ ಸಹಯೋಗಿಗಳು ರಾಜ್ಯ ಹಾಗೂ ದೇಶದಲ್ಲಿ ಕೋಮುದ್ವೇಷ ಹರಡುತ್ತಿವೆ ಎಂದರು.

ಇದೇ ವೇಳೆ ಬಿಜೆಪಿಯನ್ನು ‘ಭಾರತ್ ಜಲಾವೋ ಪಕ್ಷ’ ಎಂದು ಕರೆದಿರುವ ಅವರು, ಒಂದು ವೇಳೆ ರಾಜ್ಯದಲ್ಲಿ ಐಎನ್‌ಡಿಐಎ ಒಕ್ಕೂಟ ಅಧಿಕಾರಕ್ಕೆ ಬಂದರೆ, ನಾವು ವಕ್ಫ್‌ ಕಾಯ್ದೆಯನ್ನು ಕಸದಬುಟ್ಟಿಗೆ ಎಸೆಯಲಿದ್ದೇವೆ ಎಂದರು.

ಈ ಚುನಾವಣೆ ಸಂವಿಧಾನದ ರಕ್ಷಣೆ, ಪ್ರಜಾಪ್ರಭುತ್ವ ಮತ್ತು ಸಹೋದರತ್ವಕ್ಕಾಗಿನ ಹೋರಾಟ. ಬಿಹಾರದ ಜನ 20 ವರ್ಷದ ನಿತೀಶ್‌ ಕುಮಾರ್‌ ಸರ್ಕಾರದಿಂದ ಬೇಸತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು.ಆರ್‌ಜೆಡಿ ಶಾಸಕ ಮೊಹಮ್ಮದ್‌ ಖಾರಿ ಸಾಹಿಬ್‌ ಅವರು ಶನಿವಾರವಷ್ಟೇ ತೇಜಸ್ವಿ ಯಾದವ್‌ ಅವರೇನಾದರೂ ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ, ವಕ್ಫ್‌ ಸೇರಿ ಎಲ್ಲಾ ವಿಧೇಯಕಗಳನ್ನು ಹರಿದು ಹಾಕಲಾಗುವುದು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.

ಸೋನಿಯಾ, ರಾಗಾ, ಖರ್ಗೆ, ಹುಸೇನ್‌, ಸ್ಟಾರ್‌ ಪ್ರಚಾರಕರು

ನವದೆಹಲಿ: ಬಿಹಾರದ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ಇಂಡಿಯಾ ಒಕ್ಕೂಟ 40 ಜನ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ, ಕೆ.ಸಿ. ವೇಣುಗೋಪಾಲ್‌, ರಣದೀಪ್‌ ಸುರ್ಜೇವಾಲಾ ಮುಂತಾದ 40 ಜನರ ಜೊತೆಯಲ್ಲಿ ಕರ್ನಾಟಕದ ರಾಜ್ಯಸಭಾ ಸದಸ್ಯ ಸೈಯದ್‌ ನಾಸಿರ್‌ ಹುಸೇನ್ ಸಹ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಿಹಾರದಲ್ಲಿ ನ.6 ಮತ್ತು 11ರಂದು 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ.

PREV
Read more Articles on

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆರೆ ಪುನರುಜ್ಜೀವನಗೈದ ಬೆಂಗ್ಳೂರಿಗಗೆ ಮನ್‌ ಕಿ ಬಾತ್‌ಲ್ಲಿ ಮೋದಿ ಭೇಷ್‌