ಕಾಲ್ತುಳಿತದಿಂದ ಅಭಿಮಾನಿಯೊಬ್ಬರ ಸಾವಾದ ಸಂಬಂಧ ಬಂಧಿತರಾಗಿದ್ದ ಅಲ್ಲು ಅರ್ಜುನ್‌ ಬಿಡುಗಡೆ

KannadaprabhaNewsNetwork |  
Published : Dec 15, 2024, 02:03 AM ISTUpdated : Dec 15, 2024, 04:30 AM IST
ಅಲ್ಲು ಅರ್ಜುನ್‌ | Kannada Prabha

ಸಾರಾಂಶ

  ಅಭಿಮಾನಿಯೊಬ್ಬರ ಸಾವಾದ ಸಂಬಂಧ ಬಂಧಿತರಾಗಿದ್ದ ಖ್ಯಾತ ತೆಲುಗು ನಟ ಅಲ್ಲು ಅರ್ಜುನ್‌ ಶನಿವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೊತೆಗೆ, ತಾವು ಕಾನೂನಿಗೆ ಬದ್ಧವಾಗಿದ್ದು ತನಿಖೆಯಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಹಾಗೂ ಮೃತಳ ಕುಟುಂಬಕ್ಕೆ ಸಹಾಯ ಮಾಡುವ ಮಾತನ್ನು ಪುನರುಚ್ಚರಿಸಿದ್ದಾರೆ.

ಹೈದರಾಬಾದ್‌: ಕಾಲ್ತುಳಿತದಿಂದ ಅಭಿಮಾನಿಯೊಬ್ಬರ ಸಾವಾದ ಸಂಬಂಧ ಬಂಧಿತರಾಗಿದ್ದ ಖ್ಯಾತ ತೆಲುಗು ನಟ ಅಲ್ಲು ಅರ್ಜುನ್‌ ಶನಿವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೊತೆಗೆ, ತಾವು ಕಾನೂನಿಗೆ ಬದ್ಧವಾಗಿದ್ದು ತನಿಖೆಯಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಹಾಗೂ ಮೃತಳ ಕುಟುಂಬಕ್ಕೆ ಸಹಾಯ ಮಾಡುವ ಮಾತನ್ನು ಪುನರುಚ್ಚರಿಸಿದ್ದಾರೆ.

ಶುಕ್ರವಾರವೇ ಅಲ್ಲುಗೆ ಜಾಮೀನು ಸಿಕ್ಕಿತ್ತು. ಆದರೆ ಜಾಮೀನು ಆದೇಶವು ಅಲ್ಲು ಇದ್ದ ಚಂಚಲ್‌ಗುಡ ಜೈಲಿಗೆ ಸಂಜೆಯೊಳಗೆ ತಲುಪಿರಲಿಲ್ಲ. ಹೀಗಾಗಿ ಅವರು ರಾತ್ರಿ ಇಡೀ ಜೈಲಲ್ಲೇ ಕಳೆದರು. ಶನಿವಾರ ಬೆಳಗ್ಗೆ 6.30ರ ಸುಮಾರಿಗೆ ಬಿಡುಗಡೆ ಆದರು. ನಂತರ ಅವರನ್ನು ಸೆಲೆಬ್ರಿಟಿಗಳು, ನಟರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಬಿಡುಗಡೆಯ ಬಳಿಕ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸ ಜುಬಿಲಿ ಹಿಲ್ಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ಲು, ‘ಆತಂಕಗೊಳ್ಳುವಂಥದ್ದೇನೂ ಆಗಿಲ್ಲ. ಅಭಿಮಾನಿ ಮಹಿಳೆಯ ಸಾವು ಆಕಸ್ಮಿಕ. ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ಕಳೆದ 20 ವರ್ಷಗಳಿಂದ ಸಂಧ್ಯಾ ಥೇಟರ್‌ಗೆ ಹೋಗುತ್ತಿದ್ದರೂ ಇಂತಹ ಘಟನೆ ಸಂಭವಿಸಿರಲಿಲ್ಲ. ಈ ಘಟನೆ ನಡೆದಾಗ ನಾನು ಥೇಟರ್‌ನ ಒಳಗೆ ಪರಿವಾರದೊಂದಿಗೆ ಸಿನಿಮಾ ವೀಕ್ಷಿಸುತ್ತಿದ್ದೆ. ಮೃತ ಮಹಿಳೆಯ ಪರಿವಾರಕ್ಕೆ ನಾನು ಮತ್ತೊಮ್ಮೆ ಸಂತಾಪ ಸೂಚಿಸುತ್ತೇನೆ ಹಾಗೂ ಅವರೊಂದಿಗೆ ಸದಾ ಇದ್ದು ಸಹಾಯ ಮಾಡಲು ಸಿದ್ಧನಿದ್ದೇನೆ’ ಎಂದರು. ಜೊತೆಗೆ, ಈ ಸಮುದಲ್ಲಿ ತಮ್ಮ ಬೆಂಬಲಕ್ಕೆ ನಿಂತ ಅಭಿಮಾನಿಗಳಿಗೆ ಅಲ್ಲು ಕೃತಜ್ಞತೆ ಸಲ್ಲಿಸಿದರು.

ಅತ್ತ ಅಲ್ಲು ಅರ್ಜುನ್‌ರ ಸಲಹೆಗಾರ ಅಶೋಕ್‌ ರೆಡ್ಡಿ ಮಾತನಾಡಿ, ‘ಆದೇಶ ನಿಮ್ಮ ಕೈಗೆ ಸಿಗುತ್ತಿದ್ದಂತೆ ಆರೋಪಿಯನ್ನು ಬಿಡುಗಡೆಗೊಳಿಸಬೇಕು ಎಂದು ಹೈಕೋರ್ಟ್‌ ಆದೇಶದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಆದರೂ ಬಿಡುಗಡೆ ಮಾಡದ ಬಗ್ಗೆ ಜೈಲಿನ ಅಧಿಕಾರಿಗಳು ಹಾಗೂ ಸರ್ಕಾರ ಇದಕ್ಕೆ ಉತ್ತರಿಸಬೇಕು. ಇದೊಂದು ಅಕ್ರಮ ಬಂಧನವಾಗಿದ್ದು, ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ಅಲ್ಲು ಬಂಧನವಾಗುತ್ತಿದ್ದಂತೆ ಮಾತನಾಡಿದ ಮೃತ ಮಹಿಳೆಯ ಪತಿ, ‘ನನ್ನ ಪತ್ನಿ ಸಾವಿಗೆ ಕಾರಣವಾದ ಕಾಲ್ತುಳಿತದಲ್ಲಿ ಅವರದದ್ದೇನೂ ತಪ್ಪಿಲ್ಲ. ಅಲ್ಲು ಅವರನ್ನು ಬಂಧಿಸಲಾಗಿರುವ ಬಗ್ಗೆಯೂ ನನಗೆ ಮಾಹಿತಿ ಇರಲಿಲ್ಲ. ಈಗಲೂ ಕೇಸ್‌ ಹಿಂಪಡೆಯಲು ಸಿದ್ಧನಿದ್ದೇನೆ’ ಎಂದಿದ್ದರು.

ಘಟನೆಯ ಹಿನ್ನೆಲೆ:

ಸಂಧ್ಯಾ ಥೇಟರ್‌ನಲ್ಲಿ ಪುಷ್ಪ-2 ಚಿತ್ರದ ಪ್ರೀಮಿಯರ್‌ ಪ್ರದರ್ಶನದ ವೇಳೆ ನಟ ಅಲ್ಲು ಅರ್ಜುನ್‌ ಹಾಗೂ ಚಿತ್ರತಂಡ ಅನಿರೀಕ್ಷಿತವಾಗಿ ಅಲ್ಲಿಗೆ ಆಗಮಿಸಿದ್ದರು. ನೆರೆದಿದ್ದ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಾಗ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಘಟನೆ ಸಂಬಂಧ ಅಲ್ಲು ಅರ್ಜುನ್‌ ವಿರುದ್ಧ ಮೃತಳ ಕುಟುಂಬ ದೂರು ದಾಖಲಿಸಿತ್ತು. ಅದರ ಆಧಾರದಲ್ಲಿ ನಟನ ಬಂಧನವಾಗಿತ್ತು. ನಂತರ ತೆಲಂಗಾಣ ಕೋರ್ಟ್‌ ಅವರಿಗೆ ಜಾಮೀನು ನೀಡಿದ್ದು, ಅಲ್ಲು ಅಜುರ್ನ್‌ರ ಬಿಡುಗಡೆಯಾಗಿದೆ.

ಅಲ್ಲು ಬಂಧನಕ್ಕೆ ರೇವಂತ ರೆಡ್ಡಿ ರಾಜಕೀಯ ಸೇಡು ಕಾರಣ?

ಹೈದರಾಬಾದ್‌: ಖ್ಯಾತ ತೆಲುಗು ನಟ ಅಲ್ಲು ಅರ್ಜುನ್‌ ಅವರ ಬಂಧನದವಾದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯವೂ ಜೋರಾಗಿದ್ದು, ಇದರ ಹಿಂದೆ ತೆಲಂಗಾಣ ಸಿಎಂ ರೇವಂತ ರೆಡ್ಡಿ ಕೈವಾಡ ಇದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆದಿದೆ.

ಈ ಹಿಂದೆ ಚಿತ್ರವೊಂದರ ಸಕ್ಸಸ್ ಪ್ರೆಸ್ ಮೀಟ್‌ನಲ್ಲಿ ನಟ ಅಲ್ಲು ಮಾತನಾಡುತ್ತಿದ್ದ ವೇಳೆ, ‘ತೆಲಂಗಾಣದ ಮುಖ್ಯಮಂತ್ರಿ..’ ಎಂದಷ್ಟೇ ಹೇಳಿ ರೇವಂತ್‌ ರೆಡ್ಡಿ ಅವರ ಹೆಸರನ್ನೇ ಮರೆತಿದ್ದರು. ಇದರಿಂದ ರೇವಂತ್‌ ಅವರು ಅವಮಾನಿತರಾಗಿದ್ದರು ಎನ್ನಲಾಗಿದೆ.ಅಂತೆಯೇ, ಅಲ್ಲು ಮೇಲೆ ಚುನಾವಣೆಯ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪವೂ ಇದ್ದು, ಆ ಪ್ರಕರಣದಲ್ಲಿ ಅವರಿಗೆ ಇತ್ತೀಚೆಗೆ ಕ್ಲೀನ್‌ಚಿಟ್‌ ದೊರಕಿತ್ತು. ಇದು ಕಾಂಗ್ರೆಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದಲೇ ಸಮಯ ಸಾಧಿಸಿ ಅವರನ್ನು ಬಂಧಿಸಲಾಗಿತ್ತು ಎಂದ ವಿಶ್ಲೇಷಣೆಗಳು ಸದ್ದು ಮಾಡುತ್ತಿವೆ.

ಭಾರತ- ಪಾಕ್ ಯುದ್ಧದಲ್ಲಿ ಹೋರಾಡಿದ್ದಾರಾ?: ರೇವಂತ್‌ ರೆಡ್ಡಿ ಪ್ರಶ್ನೆ

ಹೈದರಾಬಾದ್: ತೆಲಂಗಾಣದಲ್ಲಿ ನಟ ಅಲ್ಲು ಅರ್ಜುನ್ ಬಂಧನದ ಬೆನ್ನಲ್ಲೇ ಅವರ ನಡೆಗಳನ್ನು ಪ್ರಶ್ನಿಸಿದ್ದ ತೆಲಂಗಾಣ ಸಿಎಂ ರೇವಂತ ರೆಡ್ಡಿ ಮತ್ತೆ ವಾಗ್ದಾಳಿ ನಡೆಸಿದ್ದು, ‘ಅಲ್ಲು ಅರ್ಜುನ್ ಒಬ್ಬ ಸಿನಿಮಾ ನಟ. ಗಡಿಯಲ್ಲಿ ಯಾವುದಾದರೂ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿ ದೇಶವನ್ನು ಗೆಲ್ಲಿಸಿದ್ದಾರಾ?’ ಎಂದು ಪ್ರಶ್ನಿಸಿದ್ದಾರೆ

ಆಜ್‌ ತಕ್ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ರೆಡ್ಡಿ ಅಲ್ಲು ಅರ್ಜುನ್ ಬಂಧನದ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ‘ಅಲ್ಲು ಅರ್ಜುನ್ ಸಿನಿಮಾ ನಟ. ಅವರು ಗಡಿಯಲ್ಲಿ ಯಾವುದಾದರೂ ಭಾರತ- ಪಾಕಿಸ್ತಾನ ಯುದ್ಧ ಮಾಡಿ ಗೆದ್ದಿದ್ದಾರಾ? ಅವರು ಸಿನಿಮಾ ಮಾಡಿ, ಹಣ ಕಟ್ಟಿಕೊಂಡು ಮನೆಗೆ ಹೋದರು’ ಎಂದರು. ಈ ಮೂಲಕ ಅಲ್ಲು ದುಡ್ಡು ಮಾಡಿಕೊಂಡರೆ ಜನರಿಗೇನು ಸಿಕ್ಕಿತು ಎಂಬರ್ಥದಲ್ಲಿ ಪ್ರಶ್ನಿಸಿದರು.ಅಲ್ಲದೇ, ‘ಸಂವಿಧಾನ ಎಲ್ಲರಿಗೂ ಒಂದೇ. ಒಬ್ಬ ಮಹಿಳೆ ಅವರ ಚಿತ್ರ ಪ್ರದರ್ಶನದ ವೇಳೆ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದರೆ ಕ್ರಮ ಕೈಗೊಳ್ಳದೇ ಸುಮ್ಮನೇ ಕೂರಬೇಕಿತ್ತೇ? ಜನಸಾಮಾನ್ಯ ಆದರೆ ಒಂದೇ ದಿನದಲ್ಲಿ ಬಂಧಿತನಾಗುತ್ತಿದ್ದ. ಸೆಲೆಬ್ರಿಟಿಗಳಿಗೆ ಬೇರೆ ಕಾನೂನಿಲ್ಲ. ಎಲ್ಲರ ವಿಷಯದಲ್ಲಿ ನಮ್ಮ ಸರ್ಕಾರ ನಿಷ್ಪಕ್ಷವಾಗಿ ನಡೆದುಕೊಳ್ಳುತ್ತಿದೆ’ ಎಂದರು.

ಜೈಲಲ್ಲಿ ಅಲ್ಲು ಸಾಧಾರಣ ಕೈದಿಯಂತೆ ಅನ್ನ, ಸಾಂಬಾರ್‌ ಸೇವನೆ

ಹೈದರಾಬಾದ್‌: ಥೇಟರ್‌ ಕಾಲ್ತುಳಿತ ಪ್ರಕರಣ ಸಂಬಂಧ ಶುಕ್ರವಾರ ಸೆರೆವಾಸ ಅನುಭವಿಸಿದ ನಟ ಅಲ್ಲು ಅರ್ಜುನ್‌ ಚಂಚಲಗುಡ ಜೈಲಲ್ಲಿ ಸಾಧಾರಣ ಕೈದಿಯಂತೆ ಇದ್ದು, ಅನ್ನ ಹಾಗೂ ಸಾಂಬಾರ್‌ (ಕರಿ) ಸೇವಿಸಿದರು ಎಂದು ಚಂಚಲ್‌ಗುಡ ಜೈಲಿನ ಹಿರಿಯ ಅಧಿಕಾರಿ ತಿಳಿಸಿದರು.ನಟನನ್ನು ಜೈಲಲ್ಲಿ ಯಾವ ರೀತಿ ನಡೆಸಿಕೊಳ್ಳಲಾಗಿತ್ತು ಎಂಬ ಮಾಹಿತಿ ನೀಡಿರುವ ಅವರು, ‘ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಅನ್ಯರಿಂದ ಅಲ್ಲು ಅರ್ಜುನ್‌ರನ್ನು ಪ್ರತ್ಯೇಕವಾಗಿಡಲಾಗಿತ್ತು. ಅಂತೆಯೇ, ನ್ಯಾಯಾಲಯದ ಆದೇಶಾನುಸಾರ ಅವರನ್ನು ವಿಶೇಷ ಕೈದಿಯಂತೆ ನೋಡಿಕೊಳ್ಳಲಾಯಿತು. ಅವರು ಖಿನ್ನತೆಗೊಳಗಾಗದೆ ಸಾಮಾನ್ಯವಾಗಿದ್ದರು. ಜೈಲಲ್ಲಿ ಸಂಜೆ 5:30ಕ್ಕೆ ಊಟ ಕೊಡುವ ಪದ್ಧತಿಯಿದ್ದರೂ, ಅವರು ತಡವಾಗಿ ಬಂದ ಕಾರಣ ನಂತರ ಊಟ ಬಡಿಸಲಾಯಿತು. ಅವರಿಗೆ ಮಂಚ, ಮೇಜು ಹಾಗೂ ಕುರ್ಚಿಯನ್ನೂ ಒದಗಿಸಲಾಯಿತು. ಇದನ್ನು ಹೊರತುಪಡಿಸಿ ಅವರು ಅಧಿಕಾರಿಗಳ ಬಳಿ ಬೇರಾವ ಸೌಲಭ್ಯಕ್ಕೂ ಬೇಡಿಕೆ ಇಡಲಿಲ್ಲ’ ಎಂದರು.

ನಟ ಅಲ್ಲುಗೆ ಮಡದಿ, ಮಕ್ಕಳ ಕಣ್ಣೀರ ಸ್ವಾಗತ!

ಹೈದರಾಬಾದ್‌: ಬಿಡುಗಡೆಯ ಬಳಿಕ ಹೈದರಾಬಾದ್‌ನ ತಮ್ಮ ನಿವಾಸಕ್ಕೆ ಆಗಮಿಸಿದ ಅಲ್ಲು ಅರ್ಜುನ್‌ರನ್ನು ಅವರ ಪತ್ನಿ ಸ್ನೇಹಾ ರೆಡ್ಡಿ ಕಣ್ತುಂಬಿಕೊಂಡು ಬಿಗಿದಪ್ಪಿ ಸ್ವಾಗತಿಸಿದರು. ಪುತ್ರ ಅಯಾನ್‌ ಕೂಡ ಅವರತ್ತ ಧಾವಿಸಿದ್ದು, ಅಲ್ಲು ತಮ್ಮ ಪುತ್ರಿ ಆರ್ಹಾಳನ್ನು ಎತ್ತಿಕೊಂಡು ಸಂತೈಸಿದರು. ನಂತರ ಮನೆಯೊಳಗೆ ಹೋಗುವ ಮುನ್ನ ತಾಯಿಯ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದರು.

ಅಲ್ಲು ಭೇಟಿ ಮಾಡಿದ ಉಪೇಂದ್ರ, ಲಹರಿ ವೇಲು

ಹೈದರಾಬಾದ್: ಜೈಲಿಂದ ಬಿಡುಗಡೆ ಹೊಂದಿದ ನಟ ಅಲ್ಲು ಅರ್ಜುನ್‌ ಅವರನ್ನು ಕನ್ನಡದ ನಟ ಉಪೇಂದ್ರ ಹಾಗೂ ಲಹರಿ ಮ್ಯೂಸಿಕ್‌ನ ಲಹರಿ ವೇಲು ಅವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ