ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ-2 ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ : 3 ದಿನದಲ್ಲಿ ಭರ್ಜರಿ 449 ಕೋಟಿ ಗಳಿಕೆ

KannadaprabhaNewsNetwork | Updated : Dec 08 2024, 05:42 AM IST

ಸಾರಾಂಶ

ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ-2 ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಲಭಿಸುತ್ತಿದ್ದು, ಎರಡೇ ದಿನದಲ್ಲಿ ವಿಶ್ವಾದ್ಯಂತ ಬರೋಬ್ಬರಿ 449 ಕೋಟಿ ರು. ಗಳಿಸಿದೆ.

ಹೈದರಾಬಾದ್‌: ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ-2 ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಲಭಿಸುತ್ತಿದ್ದು, ಎರಡೇ ದಿನದಲ್ಲಿ ವಿಶ್ವಾದ್ಯಂತ ಬರೋಬ್ಬರಿ 449 ಕೋಟಿ ರು. ಗಳಿಸಿದೆ.

ಹಿಂದಿ, ತಮಿಳು, ಕನ್ನಡ, ಬೆಂಗಾಲಿ, ಮಲಯಾಳಂ ಭಾಷೆಗಳಲ್ಲಿ ಶುಕ್ರವಾರ ತೆರೆಕಂಡ ಪುಷ್ಪ-2 ಮೊದಲ ದಿನವೇ 294 ಕೋಟಿ ರು. ಗಳಿಸಿತ್ತು. ಈ ಮೂಲಕ ಮೊದಲ ದಿನವೇ 223.5 ಕೋಟಿ ರು. ಗಳಿಸಿದ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರವನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿತ್ತು. ಇದು ಹೀಗೆಯೇ ಮುಂದುವರೆಯುವ ನಿರೀಕ್ಷೆ ಇದೆ.

2021ರಲ್ಲಿ ಬಿಡುಗಡೆಯಾಗಿದ್ದ ಪುಷ್ಪ ಚಿತ್ರದ ಮೊದಲ ಭಾಗ ವಿಶ್ವಾದ್ಯಂತ 326.6 ಕೋಟಿ ರು. ಗಳಿಕೆ ಕಂಡಿತ್ತು.

ಡಾಲರ್‌ಗೆ ಪರ್ಯಾಯವಾಗಿ ಬೇರೆ ಕರೆನ್ಸಿ ಇಲ್ಲ: ಜೈಶಂಕರ್‌

ದೋಹಾ: ಅಮೆರಿಕ ಡಾಲರ್‌ಗೆ ಪೈಪೋಟಿ ನೀಡಲು ಹೊಸ ಕರೆನ್ಸಿಯನ್ನು ಪ್ರಾರಂಭಿಸಲು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.ಡಾಲರ್‌ಗೆ ಪರ್ಯಾಯವಾಗಿ ಮತ್ತೊಂದು ಕರೆನ್ಸಿ ಹುಟ್ಟುಹಾಕಿದೆ ಬ್ರಿಕ್ಸ್‌ ದೇಶಗಳ ವಸ್ತುಗಳ ಮೇಲೆ ಶೇ.100ರಷ್ಟು ತೆರಿಗೆ ಹೇರುವುದಾಗಿ ಟ್ರಂಪ್‌ ಹೇಳಿದ್ದರು. ಈ ಬಗ್ಗೆ ಕತಾರ್‌ನ ದೋಹಾದಲ್ಲಿ ಅವರು ಮಾತನಾಡಿದ ಜೈಶಂಕರ್, ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್‌ ನಡುವೆ ಉತ್ತಮ ಸಂಬಂಧವಿದೆ. ಅಮೆರಿಕ ನಮ್ಮ ಮೌಲ್ಯಯುತ ಪಾಲುದಾರ ಕೂಡ. ಇಂಥ ಸಂದರ್ಭದಲ್ಲಿ ಡಾಲರ್‌ಗೆ ಪರ್ಯಾಯವಾಗಿ ಹೊಸ ಕರೆನ್ಸಿ ಸೃಷ್ಟಿಸುವ ಇರಾದೆ ಇಲ್ಲ’ ಎಂದರು.

ವಾಗ್ದಂಡನೆಗೆ ಸೋಲು: ದ.ಕೊರಿಯಾ ಅಧ್ಯಕ್ಷ ಬಚಾವ್‌

ಸಿಯೋಲ್‌: ತುರ್ತುಸ್ಥಿತಿ ಹೇರಿ ತೀವ್ರ ಜನಾಕ್ರೋಶಕ್ಕೆ ಗುರಿಯಾಗಿದ್ದ ದ.ಕೊರಿಯಾ ಅಧ್ಯಕ್ಷ ಯೂನ್‌ ಸುಕ್‌ ಯೋಲ್‌, ಶನಿವಾರ ವಿಪಕ್ಷಗಳು ಮಂಡಿಸಿದ ವಾಗ್ದಂಡನೆ (ಪದಚ್ಯುತಿ) ನಿಲುವಳಿಯಿಂದ ಪಾರಾಗಿದ್ದಾರೆ. ಆಡಳಿತ ಪಕ್ಷದವರೆಲ್ಲ ಮತದಾನಕ್ಕೆ ಬಹಿಷ್ಕಾರ ಹಾಕಿದ ಕಾರಣ, 3ನೇ 2ರಷ್ಟು ಬಹುಮತ ಹೊಂದಿರದ ವಿಪಕ್ಷಗಳ ವಾಗ್ದಂಡನೆ ನಿಲುವಳಿಗೆ ಸೋಲಾಗಿದೆ.ಇದೇ ವೇಳೆ, ಯೋಲ್‌ ಅವರು ತುರ್ತುಸ್ಥಿತಿ ಹೇರಿದ್ದಕ್ಕೆ ಕ್ಷಮೆ ಕೋರಿ, ಜನಾಕ್ರೋಶದಿಂದ ಬಚಾವಾಗಲು ಯತ್ನಿಸಿದ್ದಾರೆ.300 ಸದಸ್ಯ ಬಲದ ದ. ಕೊರಿಯಾ ಸಂಸತ್ತಿನಲ್ಲಿ ವಾಗ್ದಂಡನೆ ಅಂಗೀಕಾರಕ್ಕೆ 3ನೇ 2ರಷ್ಟು ಬಹುಮತ- ಎಂದರೆ 200 ಸೀಟು ಬೇಕಿತ್ತು. ವಿಪಕ್ಷಗಳ ಬಳಿ 192 ಸೀಟು ಮಾತ್ರ ಇದ್ದವು. ಬಾಕಿ 8 ಮತಕ್ಕೆ ಸೋಲ್‌ ವಿರುದ್ಧ ಇದ್ದ ಆಡಳಿತಾರೂಢ ಸಂಸದರ ಬೆಂಬಲವನ್ನು ವಿಪಕ್ಷಗಳು ಕೋರಿದ್ದವು. ಆದರೆ ಆಡಳಿತಾರೂಢ ಸಂಸದರು ಸದನಕ್ಕೆ ಬರಲಿಲ್ಲ. ಹೀಗಾಗಿ ನಿಲುವಳಿ ಬಿದ್ದು ಹೋಯಿತು.

2025ರ ಬಳಿಕ ಭಾರತಕ್ಕೆ ಪೋಪ್‌ ಫ್ರಾನ್ಸಿಸ್‌ ಭೇಟಿ ಸಾಧ್ಯತೆ

ತಿರುವನಂತಪುರಂ: ಪೋಪ್‌ ಫ್ರಾನ್ಸಿಸ್‌ ಅವರು, ಕ್ಯಾಥೋಲಿಕ್‌ ಚರ್ಚ್‌ನಿಂದ ‘ಜುಬ್ಲಿ ವರ್ಷ’ ಎಂದು ಘೋಷಿಸಲ್ಪಟ್ಟಿರುವ 2025ರ ನಂತರ ಭಾರತಕ್ಕೆ ಭೇಟಿ ನೀಡಬಹುದು ಎಂದು ಕೇಂದ್ರ ಸಚಿವ ಜಾರ್ಜ್‌ ಕುರಿಯನ್‌ ತಿಳಿಸಿದ್ದಾರೆ.ಆರ್ಚ್‌ಬಿಶಪ್‌ ಜಾರ್ಜ್ ಜಾಕೋಬ್ ಕೂವಕಾಡ್ ಅವರು ಕಾರ್ಡಿನಲ್ ಆಗಿ ದೀಕ್ಷೆ ಪಡೆಯುವ ಸಮಾರಂಭದಲ್ಲಿ ಭಾಗವಹಿಸಲು ವ್ಯಾಟಿಕನ್‌ಗೆ ತೆರಳಿರುವ ಸಚಿವ ಕುರಿಯನ್‌ ‘2025 ಅನ್ನು ಯೇಸುಕ್ರಿಸ್ತರ ಜನ್ಮ ಜಯಂತಿ ವರ್ಷವಾಗಿ ಆಚರಿಸಲು ಚರ್ಚ್‌ ನಿರ್ಧರಿಸಿದೆ. ಆಗ ಪೋಪ್‌ ವ್ಯಸ್ತರಾಗಿರುತ್ತಾರೆ. ಅದರ ಬಳಿಕ ಅವರು ಭಾರತಕ್ಕೆ ಬರುವ ನಿರೀಕ್ಷೆ ಇದೆ. ಭಾರತ ಈಗಾಗಲೇ ಪೋಪ್‌ರನ್ನು ಅಧಿಕೃತವಾಗಿ ಆಹ್ವಾನಿಸಿದ್ದು, ಸ್ವತಃ ಪ್ರಧಾನಿ ಮೋದಿಯವರೇ ಅವರಿಗೆ ಆಮಂತ್ರಣ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

17 ರಾಜ್ಯಗಳ 85,000 ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ: ಪಿಐಎಲ್‌

ನವದೆಹಲಿ: 17 ರಾಜ್ಯಗಳಲ್ಲಿನ 1.59 ಲಕ್ಷ ಸ್ಥಳೀಯ ಸಂಸ್ಥೆಗಳಲ್ಲಿ 85,392ರಲ್ಲಿ ಚುನಾವಣೆಯು ವಿಳಂಬವಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದು ಸಂವಿಧಾನದ ವಿಧಿ 243ಇ ಮತ್ತು 243 ಯು ಉಲ್ಲಂಘನೆಯಾಗಿದೆ ಪಿಐಎಲ್‌ ವಾದಿಸಿದೆ.ಸರ್ಕಾರೇತರ ಸಂಸ್ಥೆ ಇಷಾದ್‌, ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಪೀಠ, ಚುನಾವಣೆ ವಿಳಂಬಕ್ಕೆ ಕಾರಣಗಳನ್ನು ವಿಂಗಡಿಸುವಂತೆ ಸೂಚಿಸಿತು.

ವಿಚಾರಣೆ ವೇಳೆ ಅರ್ಜಿದಾರ ವಕೀಲರು ದೇಶದಲ್ಲಿ 2.83 ಲಕ್ಷ ಪಂಚಾಯ್ತಿ, ಮಹಾನಗರ ಪಾಲಿಕೆಗಳಿದ್ದು, ಅದರಲ್ಲಿ 17 ರಾಜ್ಯಗಳ ಮಾಹಿತಿಯು ಆರ್‌ಟಿಐನಲ್ಲಿ ಲಭಿಸಿವೆ. ಈ ರಾಜ್ಯಗಳ 85,392ರಲ್ಲಿ ಚುನಾವಣೆ 9 ತಿಂಗಳಿಂದ ಸುಮಾರು 5 ವರ್ಷದ ತನಕ ವಿಳಂಬವಾಗಿದೆ. ಇನ್ನು ಕೆಲವು ರಾಜ್ಯ ಸರ್ಕಾರಗಳು ರಾಜಕೀಯದಿಂದಾಗಿ ಚುನಾವಣೆ ವಿಳಂಬ ಮಾಡುತ್ತಿವೆ. ಹೀಗಾಗಿ ಸುಪ್ರೀಂ ಕೋರ್ಟ್‌ ರಾಜ್ಯಗಳಿಗೆ ಕೂಡಲೇ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಬೇಕು ಎಂದು ಕೋರಿದರು.

Share this article