ರಾಜ್ಯದಲ್ಲಿ ಹೂಡಿಕೆಗೆ ಭಯದ ವಾತಾವರಣ ಕಾಂಗ್ರೆಸ್ ಸರ್ಕಾರ ಸೃಷ್ಟಿ ಮಾಡಿದೆ : ಸಚಿವೆ ನಿರ್ಮಲಾ ಕಿಡಿ

KannadaprabhaNewsNetwork |  
Published : Jul 29, 2024, 12:50 AM ISTUpdated : Jul 29, 2024, 04:40 AM IST
ಪತ್ರಿಕಾಗೋಷ್ಠಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ | Kannada Prabha

ಸಾರಾಂಶ

‘ಕೈಗಾರಿಕೆ, ಉದ್ಯಮ, ಹೂಡಿಕೆಗಳು ರಾಜ್ಯದಿಂದ ಹೊರ ಹೋಗುವಂತಹ ‘ಭೀತಿಯ ವಾತಾವರಣ’ವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಸೃಷ್ಟಿ ಮಾಡಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.

 ಬೆಂಗಳೂರು :  ‘ಕೈಗಾರಿಕೆ, ಉದ್ಯಮ, ಹೂಡಿಕೆಗಳು ರಾಜ್ಯದಿಂದ ಹೊರ ಹೋಗುವಂತಹ ‘ಭೀತಿಯ ವಾತಾವರಣ’ವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಸೃಷ್ಟಿ ಮಾಡಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.ಭಾನುವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಸರ್ಕಾರದ ಒಂದೊಂದೇ ಹಗರಣಗಳು ಬಯಲಾಗುತ್ತಿವೆ. 2 ವರ್ಷಗಳ ಹಿಂದಷ್ಟೇ ರಾಜ್ಯವು ‘ಹೆಚ್ಚಿನ ಆದಾಯ’ ಹೊಂದಿರುವ ರಾಜ್ಯವಾಗಿತ್ತು. ಹೀಗಾಗಿ, ಬಂಡವಾಳ ವೆಚ್ಚಗಳ ಮೇಲೆ ಹೂಡಿಕೆ ಮಾಡಲಾಗುತ್ತಿತ್ತು. ರಾಜ್ಯಕ್ಕೆ ಹೂಡಿಕೆಗಳನ್ನು ಸೆಳೆಯುತ್ತಿತ್ತು. ಆದರೆ, ಇಂದು ರಾಜ್ಯದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿರುವುದರಿಂದ ಹೂಡಿಕೆಗಳು ರಾಜ್ಯದಿಂದ ಹೊರ ಹೋಗುತ್ತಿವೆ. ಕೈಗಾರಿಕೆ, ಉದ್ಯಮಗಳೊಂದಿಗೆ ಚರ್ಚಿಸದೇ ಹೂಡಿಕೆ ಸ್ನೇಹಿಯಲ್ಲದ ಹೆಜ್ಜೆಗಳನ್ನು ಸರ್ಕಾರ ಇಡುತ್ತಿದೆ ಎಂದು ಹರಿಹಾಯ್ದರು.ಹಣದುಬ್ಬರ ಏರಿಕೆ:

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಹಣದುಬ್ಬರ ಶೇ.5.3 ಇತ್ತು. ಆದರೆ, ಇಂದು ಶೇ.6.1ಕ್ಕೆ ಏರಿದೆ. ಪೆಟ್ರೋಲ್, ಡೀಸಲ್, ಹಾಲು, ಆಸ್ತಿ ನೋಂದಣಿ, ವಾಹನ ನೋಂದಣಿ ಶುಲ್ಕ, ಸ್ಯ್ಟಾಂಪ್ ಡ್ಯೂಟಿ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಹಣ ದುಬ್ಬರ ಹೆಚ್ಚಿದೆ. ಬಂಡವಾಳ ವೆಚ್ಚ ಕಡಿಮೆಯಾಗಿದೆ. ಇಂತಹ ಹಿಮ್ಮುಖ ನಿರ್ಧಾರಗಳಿಂದ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಉದ್ಯಮಗಳು ಬರುವುದಿಲ್ಲ. ವಸ್ತುಗಳಿಗೆ ಬೇಡಿಕೆ ಮತ್ತು ಬಳಕೆ ಹೆಚ್ಚುವುದಿಲ್ಲ. ಈ ಸರ್ಕಾರದ ಅವಧಿಯಲ್ಲಿ ಖಾಸಗಿ ಸಾಲದ ಮೊತ್ತ ಒಂದು ಲಕ್ಷ ಕೋಟಿ ರು. ಹೆಚ್ಚಾಗಿದೆ. ಆದಾಯ ಮತ್ತು ಖರ್ಚಿನ ನಡುವಿನ ಅಂತರ ಹೆಚ್ಚಳವಾಗಿದೆ ಎಂದು ಟೀಕಿಸಿದರು.ಕಾನೂನು ಸುವ್ಯವಸ್ಥೆ ದುಸ್ಥಿತಿ:

ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ದಿನೇ ದಿನೇ ಮತ್ತಷ್ಟು ಹಾಳಾಗುತ್ತಿದೆ. ಇದರಿಂದ ಉದ್ಯಮಗಳು ರಾಜ್ಯಕ್ಕೆ ಬರುವ ಬದಲು ಹೊರ ಹೋಗುವುದಕ್ಕೆ ಯೋಚನೆ ಮಾಡುತ್ತಿವೆ. ಎಸ್‌ಸಿ-ಎಸ್ಟಿ ಅನುದಾನವನ್ನು ದೋಚಲಾಗಿದೆ. ಅಭಿವೃದ್ಧಿಗೆ ಅನುದಾನ ಬಳಸದೇ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನುದಾನ ನೀಡಿಲ್ಲ ಎಂಬ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷದ ನಾಯಕರು ನಿರಂತರವಾಗಿ ಕೇಂದ್ರದ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಈ ಬಜೆಟ್‌ನಲ್ಲಿ 45,485 ಕೋಟಿ ರು. ಅನುದಾನ ಮತ್ತು ಹಲವು ಯೋಜನೆಗಳನ್ನು ರಾಜ್ಯಕ್ಕೆ ನೀಡಲಾಗಿದೆ. ಕಳೆದ ಎರಡ್ಮೂರು ವರ್ಷಗಳ ಅವಧಿಯಲ್ಲಿ 10,041 ಕೋಟಿ ರು. ಬಡ್ಡಿರಹಿತ ಸಾಲ ನೀಡಲಾಗಿದೆ. ಯುಪಿಎನ ಯಾವುದೇ ಅವಧಿಗೆ ಹೋಲಿಸಿದರೆ ಎನ್‌ಡಿಎ ಅವಧಿಯ ಅನುದಾನ ಅತಿ ಹೆಚ್ಚು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ಉಪಸ್ಥಿತರಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!