ಢಾಕಾ: ಬಾಂಗ್ಲಾದೇಶ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಹೊರಡಿಸುವಂತೆ ಜಾಗತಿಕ ತನಿಖಾ ಸಂಸ್ಥೆ ಆಗಿರುವ ಇಂಟರ್‌ಪೋಲ್‌ಗೆ ಬಾಂಗ್ಲಾ ಪೊಲೀಸರು ಮನವಿ ಮಾಡಿದ್ದಾರೆ.
ವಿದ್ಯಾರ್ಥಿ ದಂಗೆ ಹಿನ್ನೆಲೆಯಲ್ಲಿ ಹಸೀನಾ ಅವರು ಆ.5ರಂದು ಭಾರತಕ್ಕೆ ಪಲಾಯನ ಮಾಡಿದ್ದರು. ಭಾರತದಿಂದ ಹಸೀನಾ ಅವರನ್ನು ಗಡೀಪಾರು ಮಾಡುವಂತೆ ಅಂದಿನಿಂದಲೂ ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾ ಮಧ್ಯಂತರ ಸರ್ಕಾರ ಒತ್ತಾಯಿಸುತ್ತಲೇ ಇದೆ. ಆದರೆ ಅದು ಫಲ ನೀಡಿಲ್ಲ. ಇದರ ಬೆನ್ನಲ್ಲೇ ಯೂನಸ್ ಸರ್ಕಾರ ಪತನಕ್ಕೆ ಷಡ್ಯಂತ್ರ ರೂಪಿಸಿದ ಆರೋಪದ ಮೇರೆಗೆ ಹಸೀನಾ ಹಾಗೂ ಇತರ 11 ಮಂದಿ ವಿರುದ್ಧ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಬಾಂಗ್ಲಾ ಪೊಲೀಸರು ಈಗಾಗಲೇ ಶೇಖ್ ಹಸೀನಾ ಮತ್ತು ಇತರೆ 72 ಮಂದಿ ವಿರುದ್ಧ ನಾಗರಿಕ ದಂಗೆ ಮತ್ತು ಮಧ್ಯಂತರ ಸರ್ಕಾರ ಪತನಕ್ಕೆ ಸಂಚು ರೂಪಿಸಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದೆ. ಹಸೀನಾ ವಿರುದ್ಧ ಸಾಮೂಹಿಕ ಹತ್ಯೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ 100ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಾಗಿದೆ.
ಬಾಂಗ್ಲಾ ಹಿಂದುಗಳ ಹತ್ಯೆ ಮಾನವೀಯತೆಗೆ ಕಳಂಕ: ಸದ್ಗುರು
ನವದೆಹಲಿ: ಬಾಂಗ್ಲಾದೇಶದ ಪ್ರಭಾವಿ ಹಿಂದೂ ನಾಯಕ ಭಾವೇಶ್ ಚಂದ್ರ ರಾಯ್ ಅವರನ್ನು ಅಪಹರಿಸಿ ಭೀಕರವಾಗಿ ಹತ್ಯೆಗೈದ ಘಟನೆಯನ್ನು ಆಧ್ಯಾತ್ಮಿಕ ಗುರು, ಈಶ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಖಂಡಿಸಿದ್ದಾರೆ. ಇದನ್ನು ಮಾನವೀಯತೆಯ ಮೇಲಿನ ಕಳಂಕ ಎಂದಿದ್ದಾರೆ.‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲಿನ ಈ ಕ್ರೂರ ಕಿರುಕುಳ ನಿಲ್ಲಬೇಕು. ಇದು ಉಪಖಂಡ ಮತ್ತು ಮಾನವೀಯತೆಯ ಮೇಲೆ ಒಂದು ಕಪ್ಪುಚುಕ್ಕೆ. ಇದು ಸ್ವೀಕಾರಾರ್ಹವಲ್ಲ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಒಂದು ದಿನ ಮೊದಲಷ್ಟೆ ಘಟನೆಯನ್ನು ಖಂಡಿಸಿದ ಭಾರತ, ಬಾಂಗ್ಲಾ ಅಲ್ಪಸಂಖ್ಯಾತರ ರಕ್ಷಣೆಯ ಖಾತ್ರಿ ನೀಡಬೇಕು ಎಂದು ಒತ್ತಾಯಿಸಿತ್ತು.
ಬಾಂಗ್ಲಾ ಕಿರಿಕ್: ತ್ರಿಪುರ ಬಳಿ ಅಣೆಕಟ್ಟು ನಿರ್ಮಾಣ
ಗುವಾಹಟಿ: ಬಾಂಗ್ಲಾದೇಶ ಭಾರತದ ವಿರುದ್ಧ ಕಿರಿಕ್‌ಗೆ ಮುಂದುವರಿಸಿದೆ. ತ್ರಿಪುರ ಗಡಿಯಿಂದ ಕೇವಲ 45 ಮೀ. ದೂರದಲ್ಲಿ ಅದು ಅಣೆಕಟ್ಟು ನಿರ್ಮಿಸುತ್ತಿದೆ. ಇದು ಭಾರತದ ತ್ರಿಪುರಾದ 500 ಕುಟುಂಬಗಳಿಗೆ ಪ್ರವಾಹ ಭೀತಿಯನ್ನು ತಂದೊಡ್ಡಲಿದೆ ಎಂದು ಸ್ಥಳೀಯರು ಆತಂಕ ಹೊರಹಾಕಿದ್ದಾರೆ.ಬಾಂಗ್ಲಾದೇಶ ಮುಹುರಿ ನದಿ ಅಡ್ಡವಾಗಿ ಈಗಾಗಲೇ ಮೆಹು ಅಣೆಕಟ್ಟು ನಿರ್ಮಿಸುವ ಕಾಮಗಾರಿಯನ್ನು ಆರಂಭಿಸಿದ್ದು, ಹಗಲಿರುಳು ಹತ್ತಾರು ಜೆಸಿಬಿಗಳ ಮೂಲಕ ನಿರ್ಮಿಸುತ್ತಿದೆ. ಅಣೆಕಟ್ಟು 20 ಅಡಿ ಎತ್ತರ, 1-1.5 ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದು ಗಡಿಯಿಂದ 140 ಮೀಟರ್ ದೂರದಲ್ಲಿ ಯಾವುದೇ ದೊಡ್ಡ ಕಾಮಗಾರಿಯನ್ನು ಮಾಡಬಾರದು ಎಂಬ ಅಂತಾರಾಷ್ಟ್ರೀಯ ನಿಯಮದ ವಿರುದ್ಧವಾಗಿದೆ.
ಇದೇ ರೀತಿ ಉಣಕೋಟಿ ಜಿಲ್ಲೆಯ ಸಮೀಪವೂ ಅಣೆಕಟ್ಟು ನಿರ್ಮಿಸುತ್ತಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಮನೆ ಮಾಡಿದೆ. ಈ ಸಂಬಂಧ ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಈಗಾಗಲೇ ಅಧ್ಯಯನ ನಡೆಸಿ ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ.ಹೀಗಾಗಿ ಜನರು ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಮುಂದಾಗಬಹುದಾದ ಆತಂಕವನ್ನು ಶಮನ ಮಾಡಬೇಕು. ಒಂದೇ ಅಣೆಕಟ್ಟು ನಿರ್ಮಿಸುವುದನ್ನು ನಿಲ್ಲಿಸಿ ಒಡೆಸಬೇಕು. ಇಲ್ಲವಾದರೆ ಅದಕ್ಕೆ ಸರಿಯಾದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಬಾಂಗ್ಲಾದೇಶಕ್ಕೆ ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದಾರೆ.