ಇನ್ನೂ ಮಾನಸಿಕ ಹಿಂಸೆ ಆಗುತ್ತಿದೆ: ಏರಿಂಡಿಯಾ ಸಂತ್ರಸ್ತ

| N/A | Published : Nov 04 2025, 04:15 AM IST / Updated: Nov 04 2025, 04:56 AM IST

Ramesh

ಸಾರಾಂಶ

241 ಜನರನ್ನು ಬಲಿಪಡೆದ ಜೂ.12ರ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ವಿಶ್ವಾಸ್‌ಕುಮಾರ್‌ ರಮೇಶ್‌, ‘ನಾನಿನ್ನೂ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದೇನೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ಅಹಮದಾಬಾದ್‌: 241 ಜನರನ್ನು ಬಲಿಪಡೆದ ಜೂ.12ರ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ವಿಶ್ವಾಸ್‌ಕುಮಾರ್‌ ರಮೇಶ್‌, ‘ನಾನಿನ್ನೂ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದೇನೆ’ ಎಂದು ಅಳಲು ತೋಡಿಕೊಂಡಿದ್ದಾರೆ. ಬಿಬಿಸಿ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ರಮೇಶ್‌, ‘ನಾನು ಅದೃಷ್ಟವಂತ. ಆದರೆ ಆ ದುರ್ಘಟನೆ ನಡೆದ ಬಳಿಕ ಒಬ್ಬಂಟಿಯಾಗಿ ಇರುತ್ತಿದ್ದೇನೆ. 

ಹೆಂಡತಿ, ಮಗನೊಂದಿಗೂ ಮಾತಾಡುತ್ತಿಲ್ಲ. ಒಂದೊಂದು ದಿನವೂ ನನ್ನ ಹಾಗೂ ಪರಿವಾರದ ಪಾಲಿಗೆ ಕಷ್ಟದಿಂದ ಕಳೆಯುತ್ತಿದೆ. ನಾನೂ ದೈಹಿಕ ಹಾಗೂ ಮಾನಸಿಕವಾಗಿ ಇನ್ನೂ ಸುಧಾರಿಸಿಲ್ಲ. ಆರ್ಥಿಕವಾಗಿಯೂ ಕಂಗೆಟ್ಟಿದ್ದೇನೆ’ ಎಂದು ತಮ್ಮ ದುಃಸ್ಥಿತಿಯನ್ನು ವಿವರಿಸಿದ್ದಾರೆ. 

ಅಪಘಾತದಲ್ಲಿ ರಮೇಶ್‌ ಅವರು ಸಹೋದರ ಅಜಯ್‌ನನ್ನೂ ಕಳೆದುಕೊಂಡಿದ್ದರು. ಈ ಬಗ್ಗೆ ಮಾತನಾಡಿ, ‘ಹಲವು ವರ್ಷಗಳಿಂದ ನನ್ನ ಬೆನ್ನೆಲುಬಾಗಿದ್ದ ತಮ್ಮನೂ ಅಗಲಿದ್ದಾನೆ. ಅವನೊಂದಿಗೆ ಸೇರಿ ಮಾಡುತ್ತಿದ್ದ ಮೀನುಗಾರಿಕೆ ಉದ್ಯಮವೂ ನೆಲಕ್ಕಚ್ಚಿದೆ’ ಎಂದಿದ್ದಾರೆ. ಅವಘಡದ ವೇಳೆ ರಮೇಶ್‌ ತುರ್ತು ನಿರ್ಗಮನದ ಬಳಿ ಇರುವ 11ಎ ಸೀಟ್‌ನಲ್ಲಿ ಕುಳಿತಿದ್ದರಿಂದ ಬಚಾವಾಗಲು ಸಾಧ್ಯವಾಗಿತ್ತು. ಆಬಳಿಕ ಅವರು ಯಾವುದೇ ಚಿಕಿತ್ಸೆ ಪಡೆದಿಲ್ಲ.

‘ವಂಶ ರಾಕೀಯ ಅಪಾಯ’ ಎಂದ ತರೂರ್‌: ಗಾಂಧಿ ಕುಟುಂಬಕ್ಕೆ ಟಾಂಗ್?

ನವದೆಹಲಿ: ‘ದೇಶದಲ್ಲಿ ವಂಶ ರಾಜಕಾರಣ ಎಂಬುದು ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯ ತಂದೊಡುತ್ತದೆ’ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಪತ್ರಿಕಾ ಲೇಖನವೊಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಈ ಮೂಲಕ ಸ್ವಪಕ್ಷೀಯರ ವಿರುದ್ದವೇ ಮತ್ತೆ ಕುಟುಕಿದ್ದಾರೆ,ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದಕ್ಕೆ ಬರೆದ ‘ಭಾರತೀಯ ರಾಜಕಾರಣವು ಕುಟುಂಬ ವ್ಯವಹಾರ’ ಎಂಬ ಲೇಖನದಲ್ಲಿ ತರೂರ್‌, ‘ದೇಶದ ರಾಜಕೀಯವು ವಂಶ ರಾಜಕಾರಣದತ್ತ ಗಮನ ಹರಿಸಿದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿ ಹೋಗುತ್ತದೆ. ನೆಹರು-ಗಾಂಧಿ ಕುಟುಂಬವು ಕಾಂಗ್ರೆಸ್‌ ನಂಟು ಹೊಂದಿದೆ. ಇದೇ ರೀತಿ ಕುಟುಂಬ ರಾಜಕೀಯವು ದೇಶದೆಲ್ಲೆಡೆ ಇದೆ’ ಎಂದಿದ್ದಾರೆ.ತರೂರ್‌ ಇತರ ಪಕ್ಷಗಳಲ್ಲಿರುವ ವಂಶ ರಾಜಕಾರಣದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿದ್ದುಕೊಂಡೇ ಆ ಪಕ್ಷದವರ ಹೆಸರನ್ನೇ ಉಲ್ಲೇಖಿಸಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಭಾರತ-ಪಾಕ್ ಸಂಭಾವ್ಯ ಅಣ್ವಸ್ತ್ರ ಯುದ್ಧ ತಡೆದೆ: ಟ್ರಂಪ್‌

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸುವುದಾಗಿ ಪುನಃ ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡೂ ದೇಶಗಳು ಅಣ್ವಸ್ತ್ರ ಯುದ್ಧಕ್ಕೆ ಸಿದ್ಧವಾಗಿದ್ದವು. ಅವುಗಳ ಮೇಲೆ ತೆರಿಗೆ ಹಾಕುವ ಬೆದರಿಕೆ ಹಾಕಿ ಯುದ್ದ ನಿಲ್ಲಿಸಿದೆ ಎಂದಿದ್ದಾರೆ. ಅಲ್ಲದೆ, ತಾವು ನಿಲ್ಲಿಸಿದ ಒಟ್ಟು ಯುದ್ಧಗಳಲ್ಲಿ ಶೇ.60ರಷ್ಟು ಯುದ್ಧಗಳನ್ನು ತೆರಿಗೆ ಬೆದರಿಕೆ ಹಾಕಿ ಸ್ಥಗಿತಗೊಳಿಸಿದೆ ಎಂದು ಸಿಬಿಎಸ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಮ್ಮುಟ್ಟಿಗೆ ಕೇರಳ ರಾಜ್ಯ ಸಿನಿಮಾ ಪ್ರಶಸ್ತಿ: ಶ್ರೇಷ್ಠ ನಟ

ತ್ರಿಶೂರ್‌: ಕೇರಳ ಸರ್ಕಾರವು 2024ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಿದ್ದು, ನಿರ್ದೇಶಕರೂ ಆಗಿರುವ ಮಮ್ಮುಟ್ಟಿಗೆ ಬ್ರಹ್ಮಯುಗಂ ಚಿತ್ರಕ್ಕಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ಲಭಿಸಲಿದೆ. ‘ಫೆಮಿನಿಚಿ ಫಾತಿಮಾ’ದಲ್ಲಿ ನಟಿಸಿದ ಶಾಮ್ಲಾ ಹಮ್ಜಾ ಅವರು ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.ಚಿದಂಬರಂ ಅವರ ಅತ್ಯಂತ ಜನಪ್ರಿಯ ‘ಮಂಜುಮೇಲ್‌ ಬಾಯ್ಸ್‌’ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರಕಿದೆ ಎಂದು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಘೋಷಿಸಿದ್ದಾರೆ. ಚಿದಂಬರಂ ಅವರಿಗೆ ಅತ್ಯುತ್ತಮ ನಟ ಹಾಗೂ ಆ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯೂ ದಕ್ಕಿದೆ. ಗಿರೀಶ್ ಎ. ಡಿ. ನಿರ್ದೇಶನದ ನಸ್ಲೆನ್ ಮತ್ತು ಮಮಿತಾ ಬೈಜು ನಟನೆಯ ''''''''ಪ್ರೇಮಲು'''''''' ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.7 ನಿರ್ಣಾಯಕರ ತಂಡದಲ್ಲಿ ನಟ ಪ್ರಕಾಶ್‌ ರೈ ಕೂಡ ಇದ್ದರು.

ಕಾನೂನು ಸಮರದ ಹಾದಿ ಹಿಡಿದ ಟಾಟಾ ಟ್ರಸ್ಟ್‌ನ ಆಂತರಿಕ ತಿಕ್ಕಾಟ

 ಮುಂಬೈ: ಟಾಟಾ ಟ್ರಸ್ಟ್‌ನೊಳಗಿನ ಆಂತರಿಕ ಬಿಕ್ಕಟ್ಟು ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಟಾಟಾ ಟ್ರಸ್ಟ್‌ನ ಬೋರ್ಡ್‌ಗೆ ತಮ್ಮ ಮರುನೇಮಕ ಪ್ರಸ್ತಾಪ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಉದ್ಯಮಿ ಮೆಹ್ಲಿ ಮಿಸ್ತ್ರಿ ಅವರು ಮುಂಬೈನ ಚಾರಿಟಿ ಕಮಿಷನರ್‌ಗೆ ಕೇವಿಯಟ್‌ ಸಲ್ಲಿಸಿದ್ದಾರೆ. ಟ್ರಸ್ಟ್‌ನಲ್ಲಿ ಯಾವುದೇ ಬದಲಾವಣೆ ಮಾಡುವ ಮೊದಲು ತಮ್ಮ ವಾದ ಆಲಿಸುವಂತೆ ಮನವಿ ಮಾಡಿದ್ದಾರೆ.ನಿಯಮದ ಪ್ರಕಾರ ಟ್ರಸ್ಟ್‌ನಲ್ಲಿ ಯಾವುದೇ ಬದಲಾವಣೆ ಮಾಡಬೇಕಿದ್ದರೂ 90 ದಿನದೊಳಗೆ ಆ ಕುರಿತು ಚಾರಿಟಿ ಕಮಿಷನರ್‌ಗೆ ಮಾಹಿತಿ ನೀಡಬೇಕು. ಚಾರಿಟಿ ಕಮಿಷನರ್‌ ಒಪ್ಪಿಗೆ ಸೂಚಿಸಿದ ಬಳಿಕ ಟ್ರಸ್ಟ್‌ಗಳು ಬದಲಾವಣೆ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಆದರೆ ಇಲ್ಲಿ ಮಿಸ್ತ್ರಿ ಕೇವಿಯಟ್‌ ಹಾಕಿರುವ ಕಾರಣ ಏಕಪಕ್ಷೀಯ ಬದಲಾವಣೆ ಸಾಧ್ಯವಿಲ್ಲ. ಅವರ ಅಭಿಪ್ರಾಯ ಕೇಳಿಯೇ ಮುಂದುವರಿಯಬೇಕಾಗುತ್ತದೆ.ಟಾಟಾ ಟ್ರಸ್ಟ್‌ನಲ್ಲಿ ಯಾವುದೇ ಟ್ರಸ್ಟಿಯ ಮರು ನೇಮಕಕ್ಕೆ ಸರ್ವಾನುಮತದ ಒಪ್ಪಿಗೆ ಅಗತ್ಯ. ಮಿಸ್ತ್ರಿ ಅವರು ಅಕ್ಟೋಬರ್‌, 2022ರಂದು ಟ್ರಸ್ಟಿಯಾಗಿ ನೇಮಕಗೊಂಡಿದ್ದು, ಅವರ ಅಧಿಕಾರಾವಧಿ ಅ.28ಕ್ಕೆ ಕೊನೆಗೊಂಡಿದೆ. ಈ ಸಂಬಂಧ ಅವರ ಮರು ನೇಮಕಕ್ಕೆ ನೊಯೆಲ್‌ ಟಾಟಾ ಮತ್ತು ಇತರ ಇಬ್ಬರು ಟ್ರಸ್ಟಿಗಳು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮರು ನೇಮಕ ಪ್ರಸ್ತಾಪ ವಿಫಲವಾಗಿತ್ತು.

ಸೂಡಾನ್‌ನಲ್ಲಿ ಉಗ್ರರಿಂದ ಭಾರತೀಯ ಕಾರ್ಮಿಕನ ಅಪಹರಣ

ಖಾರ್ಟೋಂ: ಆಂತರಿಕ ಯುದ್ಧಪೀಡಿತ ಆಫ್ರಿಕನ್ ರಾಷ್ಟ್ರವಾದ ಸೂಡಾನ್‌ನಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ನಡುವೆ, ಅಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಪ್ರಜೆಯನ್ನು ಆರ್‌ಎಸ್‌ಎಫ್‌ ಸಂಘಟನೆ ಉಗ್ರರು ಅಪಹರಿಸಿದ್ದಾರೆ.ಈ ಬಗ್ಗೆ ಬಿಡುಗಡೆ ಆಗಿರುವ ವೀಡಿಯೊದಲ್ಲಿ ಒಡಿಶಾದ ಜಗತ್ಸಿಂಗ್‌ಪುರ ಜಿಲ್ಲೆಯ ನಿವಾಸಿ 36 ವರ್ಷದ ಆದರ್ಶ್ ಬೆಹೆರಾ ಇಬ್ಬರು ಶಸ್ತ್ರಸಜ್ಜಿತ ಆರ್‌ಎಸ್‌ಎಫ್‌ ಉಗ್ರರ ನಡುವೆ ಕುಳಿತಿರುವುದನ್ನು ತೋರಿಸಲಾಗಿದೆ.

ಇದರಲ್ಲಿ ಉಗ್ರನೊಬ್ಬ ‘ನಿನಗೆ ಶಾರುಖ್ ಖಾನ್ ಗೊತ್ತಾ?’ ಎಂದು ಬೆಹೆರಾನನ್ನು ಕೇಳುವುದು ದಾಖಲಾಗಿದೆ. ಬೆಹೆರಾನನ್ನು ಸುಡಾನ್ ರಾಜಧಾನಿ ಖಾರ್ಟೋಂನಿಮದ 1,000 ಕಿ.ಮೀ. ದೂರದ ಅಲ್ ಫಶೀರ್‌ನಿಂದ ಅಪಹರಿಸಲಾಗಿದೆ.ಬೆಹೆರಾನನ್ನು ರಕ್ಷಿಸಲು ಸಹಾಯ ಮಾಡಿ ಎಂದು ಭಾರತ ಸರ್ಕಾರಕ್ಕೆ ಆತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.

Read more Articles on