‘ಅಮೆರಿಕವು ತನ್ನ ಗುರಿ ಸಾಧನೆಗೆ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ಗಿಂತಲೂ ಕಡೆಯಾಗಿ ಬಳಸಿಕೊಂಡಿತು’ ಎಂದು ಪಾಕ್ ಸಂಸತ್ತಿನಲ್ಲಿ ಮಾತನಾಡಿದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಗಂಭೀರ ಆರೋಪ ಮಾಡಿದ್ದಾರೆ.
ಇಸ್ಲಾಮಾಬಾದ್: ‘ಅಮೆರಿಕವು ತನ್ನ ಗುರಿ ಸಾಧನೆಗೆ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ಗಿಂತಲೂ ಕಡೆಯಾಗಿ ಬಳಸಿಕೊಂಡಿತು’ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಗಂಭೀರ ಆರೋಪ ಮಾಡಿದ್ದಾರೆ.
ಅಫ್ಘಾನಿಸ್ತಾನ ಯುದ್ಧಗಳಲ್ಲಿ ಭಾಗಿಯಾಗುವ ನಿರ್ಧಾರ ಪಾಕಿಸ್ತಾನ ಮಾಡಿದ ಮಹಾ ತಪ್ಪು
ಪಾಕ್ ಸಂಸತ್ತಿನಲ್ಲಿ ಮಾತನಾಡಿದ ಅವರು, ‘ಅಫ್ಘಾನಿಸ್ತಾನ ಯುದ್ಧಗಳಲ್ಲಿ ಭಾಗಿಯಾಗುವ ನಿರ್ಧಾರ ಪಾಕಿಸ್ತಾನ ಮಾಡಿದ ಮಹಾ ತಪ್ಪುಗಳಲ್ಲೊಂದು. ಪಾಕಿಸ್ತಾನ ಇದೀಗ ಎದುರಿಸುತ್ತಿರುವ ಭಯೋತ್ಪಾದನೆ ಈ ಹಿಂದೆ ಮಾಡಿದ ಈ ತಪ್ಪಿನ ಪ್ರತಿಫಲವಾಗಿದೆ’ ಎಂದರು.
‘1999ರ ಬಳಿಕ ಪಾಕಿಸ್ತಾನವು ಅಫ್ಘಾನಿಸ್ತಾನದ ವಿಚಾರವಾಗಿ ಅಮೆರಿಕದ ಜತೆಗೆ ಹೊಂದಾಣಿಕೆ ಮಾಡಿಕೊಂಡಿತು. ಇದು ಪಾಕಿಸ್ತಾನದ ಪಾಲಿಗೆ ದೀರ್ಘಕಾಲೀನ ಹಾನಿ ಮಾಡಿತು. 2001ರ ಅಫ್ಘಾನಿಸ್ತಾನ ಯುದ್ಧದಲ್ಲೂ ಅಮೆರಿಕಕ್ಕೆ ಪಾಕಿಸ್ತಾನ ಜತೆಯಾಗಿ ತಾಲಿಬಾನಿಗಳ ವಿರುದ್ಧ ನಿಲ್ಲಬೇಕಾಯಿತು. ಆ ಬಳಿಕ ಈ ಪ್ರದೇಶದಿಂದ ಅಮೆರಿಕ ತನ್ನ ಸೇನೆ ಹಿಂಪಡೆಯಿತು. ಪಾಕಿಸ್ತಾನವನ್ನು ಮಾತ್ರ ದೀರ್ಘಕಾಲೀನ ಹಿಂಸಾಚಾರ, ಮೂಲಭೂತವಾದ ಮತ್ತು ಆರ್ಥಿಕ ಸಂಕಷ್ಟದ ನಡುವೆ ಏಕಾಂಗಿಯಾಗಿ ಬಿಟ್ಟು ಬಿಡಲಾಯಿತು. ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ಗಿಂತಲೂ ಕಡೆಯಾಗಿ ಬಳಸಿಕೊಳ್ಳಲಾಯಿತು. ಅವರ ಗುರಿ ಸಾಧನೆಗಾಗಿ ನಾವು ಬಳಕೆಯಾದೆವು. ಆ ಬಳಿಕ ನಮ್ಮನ್ನು ಎತ್ತಿ ಎಸೆಯಲಾಯಿತು’ ಎಂದು ಕಿಡಿಕಾರಿದರು.
‘ಆಫ್ಘನ್ ಯುದ್ಧದ ವೇಳೆ ಪಾಕಿಸ್ತಾನೀಯರನ್ನು ಜಿಹಾದ್ ಹೆಸರಿನಲ್ಲಿ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಡಲಾಯಿತು. ಆದರೆ ಜಿಹಾದ್‌ನ ಈ ರೀತಿಯ ವಿಶ್ಲೇಷಣೆ ದಾರಿತಪ್ಪಿಸುವಂಥದ್ದು ಮತ್ತು ಭಾರೀ ಹಾನಿ ಸೃಷ್ಟಿಸುವಂಥದ್ದಾಗಿದೆ’ ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು.
ಜಿಯಾ, ಮುಷರ್ರಫ್ ವಿರುದ್ಧ ಕಿಡಿ:
‘ಅಫ್ಘಾನಿಸ್ತಾನ ಯುದ್ಧದಲ್ಲಿ ಭಾಗಿಯಾಗುವ ನಿರ್ಧಾರಕ್ಕೆ ಹಿಂದಿನ ಇಬ್ಬರು ಮಾಜಿ ಸೇನಾ ನಿರಂಕುಶವಾದಿಗಳತ್ತ (ಜಿಯಾ ಉಲ್ ಹಕ್ ಮತ್ತು ಪರ್ವೇಜ್ ಮುಷರ್ರಫ್) ಬೊಟ್ಟು ಮಾಡಿದ ಆಸಿಫ್, ಎರಡು ದಶಕಗಳ ಕಾಲ ನಮ್ಮನ್ನು ನಾವು ಬೇರೆಯವರಿಗೆ ಮಾರಿಕೊಂಡೆವು. ಆಗ ನಮ್ಮ ಉದ್ದೇಶ ಇಸ್ಲಾಂ ರಕ್ಷಣೆ ಅಥವಾ ಜಿಹಾದ್ ಖಂಡಿತವಾಗಿಯೂ ಆಗಿರಲಿಲ್ಲ. ಬದಲಾಗಿ ರಾಜಕೀಯ ಅಸ್ತಿತ್ವ ಮತ್ತು ಸೂಪರ್ ಪವರ್ (ಅಮೆರಿಕ) ಓಲೈಕೆ ಅಷ್ಟೇ ಆಗಿತ್ತು’ ಎಂದು ಆಸಿಫ್ ನುಡಿದರು.
‘ನಾವು ನಮ್ಮ ಇತಿಹಾಸ, ತಪ್ಪುಗಳನ್ನು ನಿರಾಕರಿಸುತ್ತಲೇ ಬಂದಿದ್ದೇವೆ. ಆದರೆ, ಭಯೋತ್ಪಾದನೆ ಎಂಬುದು ನಮ್ಮ ಹಿಂದಿನ ನಿರಂಕುಶವಾದಿಗಳು ಮಾಡಿದ ತಪ್ಪಿನ ಫಲ. ಅದರಿಂದ ಆದ ಹಾನಿ ಭರಿಸಲು ಯಾವತ್ತಿಗೂ ಸಾಧ್ಯವಿಲ್ಲ, ಪಾಕಿಸ್ತಾನ ಮಾಡಿದ ಆ ತಪ್ಪನ್ನು ಸರಿ ಮಾಡಲು ಸಾಧ್ಯವೇ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯನ್ನೂ ಈ ಯುದ್ಧಗಳನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಬದಲಿಸಲಾಗಿದೆ. ಈ ಸೈದ್ಧಾಂತಿಕ ಬದಲಾವಣೆಗಳು ಇಂದಿಗೂ ಹಾಗೆಯೇ ಉಳಿದುಕೊಂಡಿವೆ’ ಎಂದು ಬೇಸರಿಸಿದರು.
- ಅಫ್ಘಾನಿಸ್ತಾನ ವಿಚಾರವಾಗಿ ಅಮೆರಿಕ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಪಾಕ್‌ಗೆ ಹಾನಿ
- ಅಮೆರಿಕದ ಜತೆಗೂಡಿ ನಾವ ತಾಲಿಬಾನ್‌ಗಳ ವಿರುದ್ಧ ನಿಂತೆವು. ಆದರೆ ಅಮೆರಿಕ ಅಲ್ಲಿಂದ ತೆರಳಿತು
- ಹಿಂಸಾಚಾರ, ಮೂಲಭೂತವಾದ ಮಧ್ಯೆ ನಮ್ಮನ್ನು ಒಂಟಿಯಾಗಿ ಬಿಟ್ಟು ಅಮೆರಿಕ ಹೊರಟುಬಿಟ್ಟಿತು
- ಅಮೆರಿಕ ಗುರಿ ಸಾಧನೆಗೆ ಬಳಕೆಯಾದೆವು. ಅನಂತರ ನಮ್ಮನ್ನು ಎತ್ತಿ ಎಸೆಯಲಾಯಿತು: ರಕ್ಷಣಾ ಸಚಿವ

