ಸಂದೇಶ್‌ ಖಾಲಿಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ

KannadaprabhaNewsNetwork |  
Published : Apr 27, 2024, 01:20 AM ISTUpdated : Apr 27, 2024, 05:15 AM IST
ಸಂದೇಶ್‌ಖಾಲಿ | Kannada Prabha

ಸಾರಾಂಶ

ಶೇಖ್‌ ಶಾಜಹಾನ್‌ ಆಪ್ತರು ನಡೆಸಿದ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಶುಕ್ರವಾರ ಇಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬನ ಮನೆ ಮೇಲೆ ದಾಳಿ ಮಾಡಿ ವಿದೇಶಿ ಪಿಸ್ತೂಲುಗಳು ಸೇರಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದೆ.

ಕೋಲ್ಕತಾ: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಉಚ್ಚಾಟಿತ ಟಿಎಂಸಿ ಮುಖಂಡ ಶೇಖ್‌ ಶಾಜಹಾನ್‌ ಆಪ್ತರು ನಡೆಸಿದ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಶುಕ್ರವಾರ ಇಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬನ ಮನೆ ಮೇಲೆ ದಾಳಿ ಮಾಡಿ ವಿದೇಶಿ ಪಿಸ್ತೂಲುಗಳು ಸೇರಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದೆ. 

ಈ ದಾಳಿಗೆ ಸಿಬಿಐ ಅಧಿಕಾರಿಗಳ ಜೊತೆಗೆ ಎನ್‌ಐಎ, ಎನ್‌ಎಸ್‌ಜಿ ಮತ್ತು ಸ್ಥಳೀಯ ಪೊಲೀಸರೂ ಸಾಥ್‌ ನೀಡಿದ್ದಾರೆ. ಜೊತೆಗೆ ನೆಲದಾಳದಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಿರಬಹುದಾದ ಶಂಕೆ ಮೇಲೆ ಅದನ್ನು ಪರಿಶೀಲಿಸಲು ರೋಬೋಟ್‌ಗಳ ನೆರವನ್ನೂ ಪಡೆದುಕೊಳ್ಳಲಾಗಿದೆ.ಇ.ಡಿ. ಅಧಿಕಾರಿಗಳ ಮೇಲಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಶಜಹಾನ್‌ನ ಆಪ್ತ ಅಬು ತಲೇಬ್‌ ಮೊಲ್ಹಾ ಎಂಬಾತನ ಮನೆಯಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು. ಈ ವೇಳೆ ಬಾಕ್ಸ್‌ಗಳಲ್ಲಿ ಸಂಗ್ರಹಿಸಲಾಗಿದ್ದ 12 ಬಂದೂಕು, 4 ವಿದೇಶಿ ಪಿಸ್ತೂಲ್‌, ಸ್ಫೋಟಕಗಳು. ಶಂಕಿತ ಸ್ವದೇಶಿ ನಿರ್ಮಿತ ಬಾಂಬ್‌ ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿದೆ. ಶಾಜಹಾನ್‌ಗೆ ಸಂಬಂಧಿಸಿದ ಕೆಲವು ಶಂಕಾಸ್ಪದ ದಾಖಲೆಗಳನ್ನು ವಶಪಡಿಕೊಳ್ಳಲಾಗಿದೆ. ಸ್ಫೋಟಗಳನ್ನು ಎನ್‌ಎಸ್‌ಜಿ ತಂಡಗಳು ವಿಲೇವಾರಿ ಮಾಡಿವೆ ಎಂದು ಸಿಬಿಐ ಹೇಳಿದೆ.

ಮನೆಯಲ್ಲಿ ಇಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಯಾಕಾಗಿ ಸಂಗ್ರಹಿಸಲಾಗಿತ್ತು ಎಂಬುದು ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಂದೇಶ್‌ಖಾಲಿ ದ್ವೀಪದ ಹಿಂದೂಗಳು, ಆದಿವಾಸಿಗಳ ಮೇಲೆ ಟಿಎಂಸಿ ನಾಯಕ ಶಹಜಹಾನ್ ಮತ್ತು ಆತನ ಬೆಂಬಲಿಗರು ಲೈಂಗಿಕ ದೌರ್ಜನ್ಯ ನಡೆಸಿದ್ದೂ ಅಲ್ಲದೆ ಅವರ ಆಸ್ತಿಯನ್ನು ಬಲವಂತವಾಗಿ ಕಬಳಿಸಿದ್ದ. ಈ ಪ್ರಕರಣದ ಕುರಿತು ತನಿಖೆಗೆ ತೆರಳಿದ್ದ ಇ.ಡಿ. ತಂಡದ ಮೇಲೆ ಕಳೆದ ಜ.5ರಂದು. ಆತನ ಆಪ್ತರು ಹಿಂಸಾತ್ಮಕ ದಾಳಿ ಮಾಡಿದ್ದರು. ಬಳಿಕ ಇಡೀ ಪ್ರಕರಣದ ತನಿಖೆಯನ್ನು ಕಲ್ಕತ್ತಾ ಹೈಕೋರ್ಟು ಸಿಬಿಐ ವಶಕ್ಕೆ ಒಪ್ಪಿಸಿತ್ತು.

ಸಿಬಿಐ ತನಿಖೆ ವಿರುದ್ಧ ಸುಪ್ರೀಂಗೆ ಬಂಗಾಳ ಸರ್ಕಾರ ಮೊರೆ ದೇಶವನ್ನೇ ಬೆಚ್ಚಿ ಬೀಳಿಸಿದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಿರುವುದನ್ನು ವಿರೋಧಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಘಟನೆಯ ತನಿಖೆಯನ್ನು ಸಿಬಿಐನಿಂದ ಹಿಂಪಡೆಯಬೇಕು ಎಂದು ಆಗ್ರಹಿಸಿದೆ. ಈ ವರ್ಷದ ಜನವರಿಯಿಂದ ಆರಂಭವಾದ ಸಂದೇಶ್‌ಖಾಲಿ ಘಟನೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ಮಾಡಬೇಕು ಎಂದು ಕಲ್ಕತಾ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶದನ್ವಯ ಅತ್ಯಾಚಾರ, ಭೂ ಕಬಳಿಕೆ, ಸುಲಿಗೆ, ಇ.ಡಿ. ಅಧಿಕಾರಿಗಳ ಮೇಲೆ ನಡೆದ ದಾಳಿಗಳನ್ನು ಸಿಬಿಐ ತನಿಖೆ ನಡೆಸಬೇಕಿತ್ತು. ಆದರೆ ಈ ಆದೇಶವನ್ನು ತೆರವುಗೊಳಿಸಲು ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಫಾಸ್ಟ್ಯಾಗ್‌ ದಂಡದಲ್ಲಿ ಕರ್ನಾಟಕ ನಂ.1
ರೈಲ್ವೆ ಟಿಕೆಟ್‌ ದರ ಅಲ್ಪ ಹೆಚ್ಚಳ