ಯೋಧನ ಕಂಬಕ್ಕೆ ಕಟ್ಟಿ ಟೋಲ್ ಸಿಬ್ಬಂದಿಯಿಂದ ಮಾರಣಾಂತಿಕ ಹಲ್ಲೆ

KannadaprabhaNewsNetwork |  
Published : Aug 19, 2025, 01:00 AM IST
ಥಳಿತ | Kannada Prabha

ಸಾರಾಂಶ

ಇಲ್ಲಿನ ಟೋಲ್ ಪ್ಲಾಜಾ಼ ಸಿಬ್ಬಂದಿಯು ಸೈನಿಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ. ಹಲ್ಲೆ ಮಾಡಿದ ಆರೋಪದ ಮೇಲೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ

ಮೇರಠ್‌ (ಯುಪಿ): ಇಲ್ಲಿನ ಟೋಲ್ ಪ್ಲಾಜಾ಼ ಸಿಬ್ಬಂದಿಯು ಸೈನಿಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ. ಹಲ್ಲೆ ಮಾಡಿದ ಆರೋಪದ ಮೇಲೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಗ್ರಾಮಸ್ಥರು ಟೋಲ್‌ ಪ್ಲಾಜಾ಼ಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. 

ಕಪಿಲ್‌ ಕಾವಡ್‌ ಎಂಬ ಯೋಧ ತಮ್ಮ ರಜೆ ಮುಗಿಸಿ, ಕಾರಿನಲ್ಲಿ ದೆಹಲಿಯತ್ತ ತೆರಳುತ್ತಿದ್ದರು. ಈ ವೇಳೆ ಟೋಲ್ ಪ್ಲಾಜಾ಼ದಲ್ಲಿ ಭಾರಿ ಸಾಲು ಮತ್ತು ತಮಗೆ ಕಡಿಮೆ ಸಮಯವಿದ್ದ ಕಾರಣ ಸಿಬ್ಬಂದಿ ಬಳಿ ಬೇಗನೆ ಕಳಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕಾಗಿ ಸಿಬ್ಬಂದಿ ಮತ್ತು ಕಪಿಲ್ ಅವರ ನಡುವೆ ವಾಗ್ವಾದ ಶುರುವಾಗಿ ಸಿಬ್ಬಂದಿಯು ಕಪಿಲ್‌ರನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಗ್ರಾಮಸ್ಥರು ಟೋಲ್‌ ಸಿಬ್ಬಂದಿ ಮೇಲೆ ಆಕ್ರೋಶಗೊಂಡು, ದಾಳಿ ಮಾಡಿ ದಾಂಧಲೆ ಎಬ್ಬಿಸಿದ್ದಾರೆ.

ರೈಲು ದುರಂತಕ್ಕೆ ಕಳೆದ 5 ವರ್ಷದಲ್ಲಿ 79 ಆನೆ ಬಲಿ

ನವದೆಹಲಿ: ಕಳೆದ 5 ವರ್ಷದಲ್ಲಿ ರೈಲಿಗೆ ಸಿಕ್ಕಿ 79 ಆನೆಗಳು ಸಾವನ್ನಪ್ಪಿವೆ ಎಂದು ಕೇಮದ್ರ ಸರ್ಕಾರ ತಿಳಿಸಿದೆ. ಕೇಂದ್ರ ಅರಣ್ಯ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್‌ ಸಿಂಗ್‌ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರವು ಅಧಿಕೃತ ದಾಖಲೆಯನ್ನು ಮಾಡಿಲ್ಲ. ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ದತ್ತಾಂಶ ಆಧರಿಸಿ 2020-25ರವರೆಗೆ 79 ಆನೆಗಳು ಬಲಿಯಾಗಿವೆ. 2023 ಮತ್ತು 2024ರಲ್ಲಿ ರೈಲ್ವೆ ಅಧಿಕಾರಿಗಳಿಗೆ ಭಾರತೀಯ ವನ್ಯಜೀವಿ ಸಂಸ್ಥೆಯಲ್ಲಿ ಅರಿವು ಕಾರ್ಯಾಗಾರಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಬ್ರಿಟಿಷರಿಗೆ ಹೆದರಿ ನೇತಾಜಿ ವಿದೇಶಕ್ಕೆ ಪಲಾಯನ: ಕೇರಳ ಪಠ್ಯ ವಿವಾದ

ತಿರುವನಂತಪುರ: ಶಿಕ್ಷಕರಿಗೆ ಕೊಡುವ ಕೈಪಿಡಿಯಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ‘ಬ್ರಿಟೀಷರಿಗೆ ಹೆದರಿ ಜರ್ಮನಿಗೆ ಓಡಿಹೋದರು’ ಎಂದು ಮುದ್ರಿಸಿ ಕೇರಳ ಸರ್ಕಾರ ವಿವಾದಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ ಇದಕ್ಕೆ ಜವಾಬ್ದಾರನಾದ ಶಿಕ್ಷಕನನ್ನು ಶೈಕ್ಷಣಿಕ ಮಂಡಳಿಯಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಫೇಸ್ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇರಳ ಶಿಕ್ಷಣ ಸಚಿವ ಸಿವನ್‌ಕುಟ್ಟಿ, ‘ನಾವು ಕೇಂದ್ರದ ರೀತಿಯಲ್ಲಿ ರಾಜಕೀಯಕ್ಕಾಗಿ ತಪ್ಪಾದ ಇತಿಹಾಸವನ್ನು ಬೋಧಿಸುವುದಿಲ್ಲ. ಶಿಕ್ಷಕರು ಮಾಡಿದ ತಪ್ಪನ್ನು ಸರಿಪಡಿಸಿ, ಸರಿಯಾದ ಕ್ರಮವನ್ನು ಮರುಮುದ್ರಣ ಮಾಡಲಾಗಿದ್ದು, ಆನ್ಲೈನ್‌ನಲ್ಲಿಯೂ ಸರಿಯಾಗಿರುವುದನ್ನು ಅಪ್‌ಡೇಟ್ ಮಾಡಲಾಗಿದೆ. ಶಿಕ್ಷಕರನ್ನು ಕೇರಳ ಶಿಕ್ಷಣ ಮಂಡಳಿಯಿಂದ ವಜಾಗೊಳಿಸಲಾಗಿದೆ. ಮುಂದಿನ ಯಾವುದೇ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗಿಗೆ ಅವಕಾಶವಿರುವುದಿಲ್ಲ’ ಎಂದು ತಿಳಿಸಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ರಥಕ್ಕೆ ವಿದ್ಯುತ್‌ ತಂತಿ ತಗುಲಿ ಅವಘಡ: 5 ಜನರ ಸಾವು

ಹೈದರಾಬಾದ್‌: ಕೃಷ್ಣಾಷ್ಟಮಿಯಂದು ರಥ ಎಳೆಯುವಾಗ ವಿದ್ಯುತ್‌ ತಂತಿ ತಗುಲಿ ಐವರು ಮೃತಪಟ್ಟಿರುವ ದಾರುಣ ಘಟನೆ ಹೈದರಾಬಾದ್‌ನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ. ಇಲ್ಲಿನ ರಾಮಂಥಪುರ ಎಂಬಲ್ಲಿ ಭಾನುವಾರ ರಾತ್ರಿ ರಥ ಎಳೆಯಲಾಗುತ್ತಿತ್ತು. ಈ ವೇಳೆ ರಥ ಎಳೆಯುವ ವಾಹನದಲ್ಲಿ ಇಂಧನ ಖಾಲಿಯಾಗಿದೆ. ಅದಕ್ಕಾಗಿ ಜನರೇ ರಥವನ್ನು ದೂಡಿ ಮುನ್ನಡೆಸುತ್ತಿದ್ದರು. ಈ ವೇಳೆ ಕೇಬಲ್‌ ವೈರ್‌ವೊಂದು ತುಂಡಾಗಿ ವಿದ್ಯುತ್‌ ತಂತಿ ಮೇಲೆ ಬಿದ್ದಿದೆ. ಈ ವೇಳೆ ವಿದ್ಯುತ್‌ ತಂತಿಯು ರಥದ ಹಿತ್ತಾಳೆ ಕಳಶಕ್ಕೆ ತಗುಲಿ ಭಾರಿ ಅವಘಢ ಸಂಭವಿಸಿದೆ. ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಲ್ವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಆನೆ, ಹುಲಿ ರೀತಿ ಶಿಮ್ಲಾ ಬೀದಿ ನಾಯಿಗಳ ಪತ್ತೆಗೆ ರೇಡಿಯೋ ಕಾಲರ್‌!

ಶಿಮ್ಲಾ: ಕಾಡಿನಲ್ಲಿ ಆನೆ, ಹುಲಿಗಳ ಚಲನವಲನಗಳ ಮೇಲೆ ನಿಗಾಕ್ಕೆ ರೇಡಿಯೋ ಕಾಲರ್‌ ಅಳವಡಿಸುವ ರೀತಿಯಲ್ಲೇ ಬೀದಿ ನಾಯಿಗಳ ಮೇಲೆ ನಿಗಾ ಇಡಲು ಕ್ಯುಆರ್‌ ಕೋಡ್‌ ಒಳಗೊಂಡ ರೇಡಿಯೋ ಕಾಲರ್‌ ಅಳವಡಿಕೆಗೆ ಹಿಮಾಚಲಪ್ರದೇಶದ ರಾಜಧಾನಿ ಶಿಮ್ಲಾ ಮುಂದಾಗಿದೆ. ಇದರ ಮೂಲಕ ನಾಯಿಗಳ ದೈಹಿಕ ಸ್ಥಿತಿಗತಿ, ಅವುಗಳಿಗೆ ನೀಡಿದ ಲಸಿಕೆ ಮಾಹಿತಿ, ಅವುಗಳ ಚಲನವಲನದ ಬಗ್ಗೆ ನಿಗಾ ಇಡಬಹುದಾಗಿದೆ. ಸಾರ್ವಜನಿಕರು ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ನಾಯಿಗಳ ಕುರಿತ ಮಾಹಿತಿ ಅರಿತುಕೊಳ್ಳಬಹುದು.

PREV
Read more Articles on

Recommended Stories

ದಿಲ್ಲಿ ಬೀದಿ ನಾಯಿ ಶೆಡ್‌ಗೆ : ಇಂದು ಸುಪ್ರೀಂನಲ್ಲಿ ತೀರ್ಪು
ಹೊಡೆದಿದ್ದಕ್ಕೆ ಗನ್‌ ತಂದು ಶಿಕ್ಷಕರ ಮೇಲೆ ವಿದ್ಯಾರ್ಥಿ ಗುಂಡಿನ ದಾಳಿ