ಮಧ್ಯಮ ವರ್ಗದ ಜನರನ್ನು ಸಂತೋಷ ಪಡಿಸುವ ಬಜೆಟ್‌ : , ತೆರಿಗೆ ಸಲಹೆಗಾರ ವಿಜಯ್‌ ರಾಜೇಶ್‌

KannadaprabhaNewsNetwork | Updated : Jul 24 2024, 07:16 AM IST

ಸಾರಾಂಶ

 ವಿತ್ತ ಸಚಿವರು ತಮ್ಮ ಮಾತಿನಂತೆ 2024-25 ನೇ ಸಾಲಿಗೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಹಿಂದಿನ ಬಜೆಟ್‌ಗಳಂತೆ ಹೆಚ್ಚಿನ ಓಲೈಕೆಗಳಿಲ್ಲದ ದೂರದೃಷ್ಟಿಯುಳ್ಳ, ಸರ್ಕಾರದ ಯೋಜನೆಯಂತೆ ಈ ಬಾರಿಯು ಬಜೆಟ್‌ ಮಂಡನೆಯಾಗಿದೆ.

ನವದೆಹಲಿ:  ಚುನಾವಣಾ ವರ್ಷವಾದ್ದರಿಂದ ಫೆಬ್ರವರಿಯಲ್ಲಿ ಪೂರ್ಣಪ್ರಮಾಣದ ಬಜೆಟ್ ಮಂಡಿಸಿ ವಿಶ್ವಾಸದಿಂದ ಮತ್ತೆ ನಾವೇ ಬಜೆಟ್ ಮಂಡಿಸುತ್ತೇವೆ ಎಂದು ಹೇಳಿದ್ದ ವಿತ್ತ ಸಚಿವರು ತಮ್ಮ ಮಾತಿನಂತೆ 2024-25 ನೇ ಸಾಲಿಗೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಹಿಂದಿನ ಬಜೆಟ್‌ಗಳಂತೆ ಹೆಚ್ಚಿನ ಓಲೈಕೆಗಳಿಲ್ಲದ ದೂರದೃಷ್ಟಿಯುಳ್ಳ, ಸರ್ಕಾರದ ಯೋಜನೆಯಂತೆ ಈ ಬಾರಿಯು ಬಜೆಟ್‌ ಮಂಡನೆಯಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಪ್ರಪಂಚದ ಯಾವುದೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಮುಂದುವರೆದ ರಾಷ್ಟ್ರಗಳಾದ ಜಪಾನ್, ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ದೇಶದ ಆರ್ಥಿಕ ಪರಿಸ್ಥಿತಿ ಕಳವಳಕಾರಿಯಾಗಿದೆ. ಆದರೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಇತರ ದೇಶಗಳಿಗೆ ಹೋಲಿಸಿದಾಗ ಉತ್ತಮವಾಗಿದೆ. ಆರ್ಥಿಕ ಉತ್ತೇಜನಕ್ಕೆ ಅನುಕೂಲಕರವಾಗಿ ಬಜೆಟ್ ಮಂಡನೆಯಾಗಿದೆ. ಗ್ರಾಮೀಣ, ಗೃಹ ನಿರ್ಮಾಣ, ಮೂಲಸೌಕರ್ಯ, ಸೌರಶಕ್ತಿ ಮುಂತಾದ ಭವಿಷ್ಯಕ್ಕೆ ಅನುಕೂಲವಾಗುವ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ. ಹೊಸದಾಗಿ ರಚನೆಯಾಗಿರುವ ಈ ಸರ್ಕಾರಕ್ಕೆ ಸದ್ಯಕ್ಕೆ ಯಾವ ಮುಲಾಜುಗಳಿಲ್ಲ. ಹಾಗೆ ನೋಡಿದರೆ ಚುನಾವಣ ಸಂದರ್ಭಗಳಲ್ಲಿ ಕೂಡ ಈಗಿರುವ ಸರ್ಕಾರ ಜನಪ್ರಿಯ ಯೋಜನೆಗಳನ್ನು ಕೈಗೊಂಡಿಲ್ಲ. ಕೇವಲ ದೇಶದ ಆರ್ಥಿಕ ಭವಿಷ್ಯಕ್ಕೆ ಪೂರಕವಾಗಿ ಯೋಜನೆಗಳನ್ನು ಕೈಗೊಂಡಿದೆ ಎಂದರೆ ತಪ್ಪಾಗಲಾರದು.

ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ರಿಯಾಯಿತಿಗಳಿಗಿಂತ ತೆರಿಗೆ ಸುಧಾರಣೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಬಹಳಷ್ಟು ಜನ ಉಪಯೋಗಿ ವಸ್ತುಗಳು, ಯಂತ್ರಗಳ ಮೇಲೆ ಸೀಮಾ ಸುಂಕ (custom duty) ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಮುಖ್ಯವಾಗಿ ಕ್ಯಾನ್ಸರ್ ಔಷಧಿಗಳು, ವೈದ್ಯಕೀಯ ಉಪಕರಣಗಳ ಮೇಲೆ ಕಡಿತಗೊಳಿಸಲಾಗಿದೆ. ಮೊಬೈಲ್ ಫೋನ್‌ಗಳ ಬಿಡಿಭಾಗಗಳ ಮೇಲೆ ಕೂಡ ಕಡಿತಗೊಳಿಸಲಾಗಿದೆ. ಚಿನ್ನ ಮತ್ತು ಬೆಳ್ಳಿ ಆಮದಿನ ಮೇಲೆ ಕೂಡ ಶೇ.10ರಷ್ಟು ಸುಂಕವನ್ನು ಶೇ.6ಕ್ಕೆ ಇಳಿಸಲಾಗಿದೆ. ಇದು ಆಭರಣ ಪ್ರಿಯರಿಗೆ ಸಂತಸದ ಸುದ್ದಿ.

ಇನ್ನು ಆದಾಯ ತೆರಿಗೆಯಲ್ಲಿ ಜನರ ಬಹುದಿನದ ನಿರೀಕ್ಷೆಯಂತೆ ಸ್ಟಾಂಡರ್ಡ್‌ ಡಿಡಕ್ಷನ್ (Standard deduction) ರು.50,000ದಿಂದ ರು.75,000ಕ್ಕೆ ಏರಿಸಲಾಗಿದೆ. ಅಂದರೆ 25,000 ರುಪಾಯಿ ಹೆಚ್ಚುವರಿ ಉಳಿತಾಯವಾಗುತ್ತದೆ. ಇನ್ನು ಹೊಸ ತೆರಿಗೆ ಪದ್ಧತಿಯಲ್ಲಿ ಕೂಡ ತೆರಿಗೆ ಸ್ತರಗಳನ್ನು ಹೆಚ್ಚಿಸಿದ್ದಾರೆ. ಹಾಗಾಗಿ ಹಳೆ ತೆರಿಗೆ ಪದ್ಧತಿಯನ್ನು ಇನ್ನು ಜನ ಬಿಟ್ಟುಬಿಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆಯಾಗಿ ಸ್ಟಾಂಡರ್ಡ್‌ ಡಿಡಕ್ಷನ್ ಮತ್ತು ತೆರಿಗೆ ಸ್ತರಗಳಲ್ಲಿನ ಹೆಚ್ಚಳ ರು.17,500 ವರೆಗೆ ಸಂಬಳದಾರರಿಗೆ ಉಳಿಯುತ್ತದೆ.

ಷೇರು ವ್ಯವಹಾರದಲ್ಲಿ ದೀರ್ಘ ಕಾಲಿನ ಕ್ಯಾಪಿಟಲ್ ಗೇನ್ಸ್‌ ಟ್ಯಾಕ್ಸ್‌ ಶೇ. 10 ರಿಂದ ಶೇ. 12.5ಕ್ಕೆ ಏರಿಸಲಾಗಿದೆ. ಹಾಗೆಯೇ ಈ ವರೆಗೆ ಒಂದು ಲಕ್ಷ ರು. ವರೆಗಿನ ಕ್ಯಾಪಿಟಲ್‌ ಗೇನ್ಸ್‌ ಆದಾಯಕ್ಕೆ ತೆರಿಗೆ ವಿನಾಯಿತಿ ಇತ್ತು. ಈ ಮಿತಿಯನ್ನು ₹1.25 ಲಕ್ಷಕ್ಕೆ ಏರಿಸಲಾಗಿದೆ. ಅದಲ್ಲದೆ ಬಹಳಷ್ಟು ತೆರಿಗೆ ಸುಧಾರಣೆಗಳನ್ನು ಕೈಗೊಂಡಿದ್ದಾರೆ.ಈ ವರೆಗೆ ಫ್ಯಾಮಿಲಿ ಪೆನಷನ್‌ 15 ಸಾವಿರ ರು. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇತ್ತು. ಈ ಮಿತಿಯನ್ನು 25 ಸಾವಿರಕ್ಕೆ ಹೆಚ್ಚಿಸಲಾಗಿದೆ.ಕಳೆದ ವರ್ಷದಲ್ಲಿ ಒಟ್ಟಾರೆ ಆದಾಯ ಸ್ಟಾಂಡರ್ಡ್‌ ಡಿಡಕ್ಷನ್‌ ನಂತರ ₹7 ಲಕ್ಷವಿದ್ದರೆ ಅದಕ್ಕೆ ತೆರಿಗೆ ವಿನಾಯಿತಿ ಇತ್ತು. ಈ ಬಾರಿ 25 ಸಾವಿರ ಹೆಚ್ಚಿಸಿರುವುದರಿಂದ ಒಬ್ಬರ ವ್ಯಕ್ತಿಯು ಒಟ್ಟಾರೆ ಆದಾಯ ರು. ₹7.75 ಲಕ್ಷ ವಿದ್ದರೆ ಯಾವುದೇ ತೆರಿಗೆ ಇರುವುದಿಲ್ಲ.ಒಟ್ಟಾರೆಯಾಗಿ ಹೇಳುವುದಾದರೆ ಸರ್ಕಾರದ ಮೊದಲ ವರ್ಷದಲ್ಲಿ ಯಾವುದೇ ರೀತಿಯ ಆತುರ ತೋರಿಸದೆ, ಮಧ್ಯಮ ವರ್ಗದ ಜನರಿಗೆ ಸಂತೋಷ ಪಡಿಸುವ ಬಜೆಟ್‌ ಮಂಡನೆಯಾಗಿದೆ.

ವಿಜಯ್‌ ರಾಜೇಶ್‌, ತೆರಿಗೆ ಸಲಹೆಗಾರರು

Share this article