ಪಿಟಿಐ ಅಯೋಧ್ಯೆ
‘ರಾಮನೇ ನನ್ನ ರಕ್ಷಕ. ತನ್ನ ಮೂರ್ತಿಯನ್ನು ರೂಪಿಸಿಕೊಳ್ಳಲು ಆತನೇ ನನ್ನನ್ನು ಆಯ್ಕೆ ಮಾಡಿದ’ ಎಂದು ಅಯೋಧ್ಯೆ ರಾಮಪ್ರತಿಮೆ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಹರ್ಷಿಸಿದ್ದಾರೆ.
ಮಂಗಳವಾರ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ರಾಮನು ನನ್ನನ್ನು ಮತ್ತು ನನ್ನ ಕುಟುಂಬವನ್ನು ಎಲ್ಲಾ ಕೆಟ್ಟ ಸಮಯಗಳಿಂದ ರಕ್ಷಿಸುತ್ತಿದ್ದಾನೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ.
ಆತನೇ ನನ್ನನ್ನು ಈ ಶುಭ ಕಾರ್ಯಕ್ಕೆ ಆಯ್ಕೆ ಮಾಡಿದ್ದಾರೆ ಎಂದು ನಾನು ಬಲವಾಗಿ ನಂಬುತ್ತೇನೆ’ ಎಂದರು.‘ವಿಗ್ರಹವನ್ನು ಕೆತ್ತಲು ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ.
ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದೆ. ಆದರೆ ಇದು ವ್ಯರ್ಥವಲ್ಲ. ಅವು ಅತ್ಯಂತ ಮೌಲ್ಯಯುತ ಕ್ಷಣಗಳು. ನಾನು ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಮತ್ತು ಇದು ನನ್ನ ಜೀವನದ ಅತ್ಯುತ್ತಮ ದಿನ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದರು.
’ನಾನು ನನ್ನ ತಂದೆಯಿಂದ ಶಿಲ್ಪಕಲೆ ಕಲೆಯನ್ನು ಕಲಿತಿದ್ದೇನೆ. ಅವರು ಇಂದು ಇಲ್ಲಿ ಇದ್ದಿದ್ದರೆ ನನ್ನ ವಿಗ್ರಹವನ್ನು ನೋಡಿ ತುಂಬಾ ಹೆಮ್ಮೆ ಪಡುತ್ತಿದ್ದರು’ ಎಂದು ಅವರು ಹೇಳಿದರು.
ಮೂರು ವಿಗ್ರಹಗಳಲ್ಲಿ ಒಂದು ಆಯ್ಕೆ: ಭವ್ಯ ದೇವಾಲಯಕ್ಕೆ ರಾಮ ಲಲ್ಲಾ ಮೂರ್ತಿಗಳನ್ನು ಗಣೇಶ್ ಭಟ್, ಅರುಣ್ ಯೋಗಿರಾಜ್ ಮತ್ತು ಸತ್ಯನಾರಾಯಣ ಪಾಂಡೆ ಎಂಬ ಮೂವರು ಶಿಲ್ಪಿಗಳು ತಯಾರಿಸಿದ್ದರು.
ಮೂವರಲ್ಲಿ ಅರುಣ್ ಕೆತ್ತಿದ ಪ್ರತಿಮೆ ಆಯ್ಕೆಯಾಗಿದ್ದು, ಅದನ್ನು ಗರ್ಭಗುಡಿಯಲ್ಲಿ ಇರಿಸಲಾಗಿದೆ. ಇನ್ನೆರಡನ್ನು ಮಂದಿರದ ಇತರ ಭಾಗಗಳಲ್ಲಿ ಇರಿಸಲಾಗುವುದು ಎಂದು ದೇವಸ್ಥಾನದ ಟ್ರಸ್ಟ್ ತಿಳಿಸಿದೆ.