ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಗಂಭೀರ ಮಟ್ಟಕ್ಕೆ ಹೋಗಿ ‘ಗ್ಯಾಸ್ ಚೇಂಬರ್’ ಆಗಿ ಬದಲಾವಣೆ ಆಗಿದ್ದರೂ, ರೈತರು ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದನ್ನು ತಡೆಯಲು ವಿಫಲವಾಗಿರುವ ಪಂಜಾಬ್, ಹರ್ಯಾಣ, ಉತ್ತರಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳ ವಿರುದ್ಧ ಸುಪ್ರೀಂಕೋರ್ಟ್ ಕಿಡಿಕಾರಿದೆ. ಏನಾದರೂ ಮಾಡಿ ಇದನ್ನು ಸಂಪೂರ್ಣ ತಡೆಯಿರಿ ಎಂದು ನಾಲ್ಕೂ ರಾಜ್ಯಗಳಿಗೆ ಸೂಚಿಸಿದೆ.
ಮತ್ತೊಂದೆಡೆ ಮಾಲಿನ್ಯ ತಡೆಯಲು ನ.13ರಿಂದ ಸಮ ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ಮುಂದಾಗಿರುವ ದೆಹಲಿ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಈ ಹಿಂದೆ ಜಾರಿ ಮಾಡಿದ್ದ ಈ ಯೋಜನೆ ಫಲ ಕೊಟ್ಟಿದೆಯೇ ಎಂದು ಪ್ರಶ್ನಿಸಿದೆ.ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಹಲವು ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಿರುವ ಬೆಳವಣಿಗೆ ಮುಂದುವರೆದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾ.ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ, ‘ದೆಹಲಿಯಲ್ಲಿನ ಮಾಲಿನ್ಯಕ್ಕೆ ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕಿದ್ದೊಂದೇ ಕಾರಣ ಎನ್ನಲಾಗದು. ಆದರೆ ವರ್ಷದ ಈ ಸಮಯದಲ್ಲಿ ಈ ಬೆಳವಣಿಗೆ ಕೂಡಾ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿದೆ. ಇದನ್ನು ಜನರ ಆರೋಗ್ಯದ ಹತ್ಯೆ ಎನ್ನದೆ ಬೇರೆ ಪದಗಳಿಲ್ಲ. ದೆಹಲಿಯ ಜನತೆ ಪ್ರತಿ ವರ್ಷ ಇದೇ ಸಮಸ್ಯೆ ಎದುರಿಸಲಾಗದು. ಮಾಲಿನ್ಯದಿಂದ ದೆಹಲಿ ಜನರು ಸಾವನ್ನಪ್ಪುವುದಕ್ಕೆ ಬಿಡಲಾಗದು. ಇದನ್ನು ತಡೆಯಲು ರಾಜ್ಯ ಸರ್ಕಾರಗಳು ಏನು ಮಾಡುತ್ತಿವೆ’ ಎಂದು ಪ್ರಶ್ನಿಸಿತು.
ಈ ವೇಳೆ ಪಂಜಾಬ್ ಪರ ವಕೀಲರು ಪ್ರತಿಕ್ರಿಯಿಸಿ, ‘ಕೃಷಿ ತ್ಯಾಜ್ಯ ಸುಡುವಿಕೆ ಕಳೆದ ವರ್ಷಕ್ಕಿಂತ ಶೇ.40ರಷ್ಟು ಕಡಿಮೆ ಆಗಿದೆ’ ಎಂದರು.ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಇದು ಸಂಪೂರ್ಣ ನಿಲ್ಲಬೇಕು. ನೀವು ಏನು ಮಾಡುತ್ತೀರೋ ಗೊತ್ತಿಲ್ಲ. ಅದನ್ನು ನಾವು ಯೋಚಿಸುವುದಿಲ್ಲ. ಅದು ನಿಮಗೆ ಬಿಟ್ಟ ವಿಷಯ. ಬಲವಂತವಾಗಿ ಮಾಡುತ್ತೀರೋ ಅಥವಾ ನೆರವು ನೀಡಿ ಮಾಡುತ್ತೀರೋ ಗೊತ್ತಿಲ್ಲ. ಆದರೆ ಬೆಂಕಿ ಹಚ್ಚುವ ಕೆಲಸ ಇಲ್ಲಿಗೆ ನಿಲ್ಲಬೇಕು. ಈ ವಿಷಯದಲ್ಲಿ ರಾಜ್ಯಗಳು ಪರಸ್ಪರರ ಮೇಲೆ ದೂರುತ್ತಾ ಕೂರಲಾಗದು. ಇದರಲ್ಲಿ ರಾಜಕೀಯ ಸಲ್ಲದು’ ಎಂದು ತಾಕೀತು ಮಾಡಿತು.ಅಲ್ಲದೆ ಈ ವಿಷಯರಲ್ಲಿ ರಾಜ್ಯಗಳಲ್ಲಿ ಮುಖ್ಯ ಕಾರ್ಯದರ್ಶಿಗಳ ನಿಗಾದಲ್ಲಿ ಸ್ಥಳೀಯ ಸ್ಟೇಷನ್ ಹೌಸ್ ಆಫೀಸರ್‌ಗಳು (ಎಸ್‌ಎಚ್‌ಒ) ಇದರ ನಿಗಾ ವಹಿಸಬೇಕು ಎಂದು ಸೂಚಿಸಿತು.ದಿಲ್ಲಿಯಲ್ಲಿ ತೆರೆದ ಮೈದಾನದಲ್ಲಿ ತ್ಯಾಜ್ಯ ಸುಡುವಿಕೆ ತಡೆಗಟ್ಟಬೇಕು ಎಂದೂ ಅದು ತಾಕೀತು ಮಾಡಿತು.
ಸೂಚ್ಯಂಕ ಕೊಂಚ ಸುಧಾರಣೆ:ಈ ನಡುವೆ ದಿಲ್ಲಿಯಲ್ಲಿ ವಾಯುಗುಣಮಟ್ಟ ಸೂಚ್ಯಂಕ ಮಂಗಳವಾರ 395 ಇತ್ತು. ಇದು ಸೋಮವಾರದ 421ಕ್ಕಿಂತ ಕೊಂಚ ಸುಧಾರಿತ ಸೂಚ್ಯಂಕವಾಗಿದೆ.
ಕೋರ್ಟ್ ಹೇಳಿದ್ದೇನು?- ದೆಹಲಿ ಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ಸುಡುವುದೊಂದೇ ಕಾರಣವಲ್ಲ- ಆದರೆ ಈ ಸಮಯದಲ್ಲಿ ಕೃಷಿ ತ್ಯಾಜ್ಯ ದಹನದಿಂದ ಮಾಲಿನ್ಯ ಹೆಚ್ಚಳ- ಇದು ಜನರ ಆರೋಗ್ಯದ ಹತ್ಯೆ: ತ್ಯಾಜ್ಯ ಸುಡುವಿಕೆ ನಿಲ್ಲಿಸಲೇಬೇಕು- ವಾಯು ಮಾಲಿನ್ಯದಿಂದ ದೆಹಲಿಯ ಜನರು ಸಾಯಲು ಬಿಡಬಾರದು- ತ್ಯಾಜ್ಯ ಸುಡುವಿಕೆ ನಿಲ್ಲಿಸಲು ಅಕ್ಕಪಕ್ಕದ ರಾಜ್ಯಗಳು ಏನು ಮಾಡುತ್ತಿವೆ?- ಏನು ಮಾಡುತ್ತೀರೋ ಗೊತ್ತಿಲ್ಲ, ಕೃಷಿ ತ್ಯಾಜ್ಯ ದಹನ ಇಲ್ಲಿಗೇ ನಿಲ್ಲಬೇಕು