;Resize=(412,232))
ಗುವಾಹಟಿ: ಕಾನೂನು ಬಾಹಿರ ಮದುವೆಗೆ ದಂಡ, ಜೈಲು ಶಿಕ್ಷೆ, ಸರ್ಕಾರಿ ಸೌಲಭ್ಯ ನಿರಾಕರಿಸುವ ಮಹತ್ವದ ಬಹುಪತ್ನಿತ್ವ ನಿಷೇಧ ಕಾಯ್ದೆಯನ್ನು ಅಸ್ಸಾಂ ವಿಧಾನಸಭೆ ಗುರುವಾರ ಅಂಗೀಕರಿಸಿದೆ. ಎರಡನೇ ಮದುವೆ ಆದ ವ್ಯಕ್ತಿಗೆ ಮಾತ್ರವಲ್ಲದೇ ವಿಷಯ ಗೊತ್ತಿದ್ದೂ ಎರಡನೇ ಮದುವೆ ಮಾಡಿಸುವ ಪೋಷಕರು, ಧಾರ್ಮಿಕ ಮುಖಂಡರೂ ಶಿಕ್ಷೆ ಮತ್ತು ದಂಡಕ್ಕೆ ತುತ್ತಾಗಲಿದ್ದಾರೆ. ಆದರೆ 6ನೇ ಪರಿಚ್ಛೇಧದ ಒಳಗೆ ಬರುವ ಪ್ರದೇಶದಲ್ಲಿರುವ ಪರಿಶಿಷ್ಠ ಪಂಗಡ (ಎಸ್‌ಟಿ) ಸಮುದಾಯವನ್ನು ಇದರಿಂದ ಹೊರಗಿಡಲಾಗಿದೆ.
ಗುರುವಾರ ಬಿಲ್ ಅಂಗೀಕಾರಗೊಂಡ ಬಳಿಕ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ‘ಬಹುಪತ್ನಿತ್ವ ಎಂಬುದು ಸಾಮಾಜಿಕ ಪಿಡುಗು. ಧರ್ಮಾತೀತವಾಗಿ ಇದನ್ನು ನಿಷೇಧಿಸಬೇಕು. ಇಲ್ಲಿ ಹಿಂದೂಗಳೇನು ಬಹುಪತ್ನಿತ್ವದಿಂದ ಹೊರಗಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲ ಸಮುದಾಯಗಳಿಗೂ ಕಾನೂನು ಅನ್ವಯಿಸುತ್ತದೆ. ಮುಂದಿನ ಫೆಬ್ರವರಿಯಲ್ಲಿ ‘ಲವ್ ಜಿಹಾದ್’ ನಿಷೇಧಿಸುವ ಬಿಲ್ ಮಂಡಿಸಲಾಗುವುದು. ನಾನು ಮುಂದಿನ ಅವಧಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಏಕರೂಪ ನಾಗರಿಕ ಸಂಹಿತೆ ಜಾರಿ ತರುತ್ತೇನೆ’ ಎಂದು ಹೇಳಿದರು.
ಮೊದಲ ಪತ್ನಿ/ ಪತಿಗೆ ಡೈವೋರ್ಸ್ ನೀಡದೇ ಎರಡನೇ ಮದುವೆ ಆದರೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಮತ್ತೊಂದು ಮದುವೆ ಆದರೆ ಆಗ 10 ವರ್ಷ ಜೈಲು, ದಂಡ ವಿಧಿಸಲಾಗುತ್ತದೆ. ಜೊತೆಗೆ ಇಂಥ ವ್ಯಕ್ತಿ ಸರ್ಕಾರಿ ನೌಕರಿ ಪಡೆಯುವ, ಸರ್ಕಾರದ ಅನುದಾನದಲ್ಲಿ ವಿತರಿಸಲಾಗುವ ಯಾವುದೇ ಸರ್ಕಾರಿ ಸವಲತ್ತು ಪಡೆಯಲು, ಯೋಜನೆಯ ಲಾಭ ಪೆಡಯಲು, ಯಾವುದೇ ನೇಮಕಕ್ಕೆ ಅನರ್ಹನಾಗುತ್ತಾನೆ. ಜೊತೆಗೆ ಯಾವುದೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುತ್ತಾನೆ. ಜೊತೆಗೆ ದೋಷಿಯಿಂದ ವಸೂಲಿ ಮಾಡಿದ ಹಣವನ್ನು ಸಂತ್ರಸ್ತರಿಗೆ ವಿತರಿಸಲಾಗುತ್ತದೆ. ಇದಕ್ಕೆಂದೇ ಪ್ರತ್ಯೇಕ ನಿಧಿ ಸ್ಥಾಪಿಸಲಾಗುತ್ತದೆ.
ಒಂದು ವೇಳೆ ಗ್ರಾಮದ ಮುಖ್ಯಸ್ಥ, ಖ್ವಾಜಿ, ತಂದೆ-ತಾಯಿ, ಕಾನೂನುಬದ್ಧ ಪೋಷಕರು, ಮೊದಲ ಮದುವೆ ಕುರಿತ ಮಾಹಿತಿಯನ್ನು ಮುಚ್ಚಿಟ್ಟರೆ ಅವರಿಗೆ 2 ವರ್ಷ ಜೈಲು 1 ಲಕ್ಷ ರು. ದಂಡ ವಿಧಿಸಲಾಗುತ್ತದೆ.
ಇನ್ನು ವಿಷಯ ಗೊತ್ತಿದ್ದರೂ ವಧು-ವರನಿಗೆ ಯಾರಾದರೂ ಧರ್ಮಗುರುಗಳು ಮದುವೆ ಮಾಡಿಸಿದವರೆ ಅವರಿಗೆ ಕೂಡಾ 2 ವರ್ಷ ಜೈಲು, 1.5 ಲಕ್ಷ ರು. ದಂಡ ವಿಧಿಸಲಾಗುವುದು.