ಭಾರತದ ಸಂವಿಧಾನ ಪೀಠಿಕೆ ಬದಲಾವಣೆ ಜಟಾಪಟಿ

KannadaprabhaNewsNetwork |  
Published : Jun 28, 2025, 12:19 AM ISTUpdated : Jun 28, 2025, 05:10 AM IST
RSS General Secretary Dattatreya Hosabale

ಸಾರಾಂಶ

ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಪದ ಕಿತ್ತುಹಾಕಲು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ನೀಡಿದ ಕರೆಯು ಸಂಘ ಪರಿವಾರ ಮತ್ತು ವಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.

ನವದೆಹಲಿ: ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಪದ ಕಿತ್ತುಹಾಕಲು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ನೀಡಿದ ಕರೆಯು ಸಂಘ ಪರಿವಾರ ಮತ್ತು ವಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಸಂಘ ಪರಿವಾರ ಹೊಸಬಾಳೆ ಹೇಳಿಕೆ ಬೆಂಬಲಿಸಿದ್ದರೆ, ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ‘ಸರಿಯಾಗಿ ಯೋಚಿಸುವ ನಾಗರಿಕರು ಆ ಕರೆಯನ್ನು ಬೆಂಬಲಿಸುತ್ತಾರೆ’ ಎಂದು ಹೇಳಿಕೆ ಬೆಂಬಲಿಸಿದ್ಧಾರೆ.ಮತ್ತೊಂದೆಡೆ ಈ ಹೇಳಿಕೆಯನ್ನು ಲೋಕಸಭೆಯಲ್ಲಿನ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ಆರ್‌ಜೆಡಿ ಮುಖ್ಯಸ್ಥ ಲಾಲು, ಸಿಪಿಎಂ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ.

ಹೊಸಬಾಳೆ ಹೇಳಿದ್ದೇನು?:

‘ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಸಂವಿಧಾನದಿಂದ ಕಿತ್ತೆಸೆದು, ಅದನ್ನು ತುರ್ತುಸ್ಥಿತಿಯ ಮೊದಲಿದ್ದಂತೆ ಮಾಡಬೇಕು. ಅಂತೆಯೇ ಅವುಗಳ ಸೇರ್ಪಡೆಗೆ ಕಾಂಗ್ರೆಸ್‌ ಕ್ಷಮೆ ಯಾಚಿಸಬೇಕು’ ಎಂದು ಗುರುವಾರ ಕಾರ್ಯಕ್ರಮವೊಂದರಲ್ಲಿ ಹೊಸಬಾಳೆ ಅವರು ಕರೆ ನೀಡಿದ್ದರು.

ಸಂಘ ಸ್ಪಷ್ಟನೆ:ಕಾಂಗ್ರೆಸ್‌ ಹಾಗೂ ಇತರೆ ವಿಪಕ್ಷಗಳ ಟೀಕೆ ಬೆನ್ನಲ್ಲೇ, ’ಹೊಸಬಾಳೆ ಅವರ ಆಶಯ ಅವುಗಳನ್ನು ಕಿತ್ತುಹಾಕಬೇಕೆಂದಲ್ಲ, ಬದಲಿಗೆ ಅದರ ಮೂಲ ಚೈತನ್ಯವನ್ನು ಪುನಃಸ್ಥಾಪಿಸಲು ನೀಡಿದ ಕರೆಯಾಗಿದೆ’ ಎಂದು ಆರ್‌ಎಸ್‌ಎಸ್‌ ತನ್ನ ಮುಖವಾಣಿ ಆರ್ಗನೈಸರ್‌ನಲ್ಲಿ ಸಮರ್ಥಿಸಿಕೊಂಡಿದೆ. ಆರ್ಗನೈಸರ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ, ‘1948ರಲ್ಲಿ ಭಾರತವನ್ನು ಜಾತ್ಯತೀತ, ಫೆಡರಲ್, ಸಮಾಜವಾದಿ ರಾಜ್ಯಗಳ ಒಕ್ಕೂಟ ಎಂದು ವಿವರಿಸುವ ಪ್ರಸ್ತಾಪವನ್ನು ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ಸಭೆ ಒಪ್ಪಿರಲಿಲ್ಲ. 42ನೇ ತಿದ್ದುಪಡಿ ಮೂಲಕ ಆ ಪದಗಳ ಸೇರ್ಪಡೆಯು ರಾಜಕೀಯ ತಂತ್ರವಾಗಿತ್ತು. ಇದನ್ನೇ ಹೊಸಬಾಳೆ ಅವರ ಮಾತು ಪ್ರತಿಪಾದಿಸುತ್ತದೆ. ಅವರ ಕರೆಯು, ಕಾಂಗ್ರೆಸ್‌ ತುರ್ತು ಸ್ಥಿತಿ ವೇಳೆ ನೀತಿಗಳ ವಿರೂಪಗಳಿಂದ ಮುಕ್ತವಾದ ಹಾಗೂ ಮೂಲ ಚೈತನ್ಯ ಪುನಃಸ್ಥಾಪಿಸಲ್ಪಟ್ಟ ಸಂವಿಧಾನ ಹೊಂದು ಬಗ್ಗೆಯಾಗಿದೆ’ ಎಂದು ಬರೆಯಲಾಗಿದೆ.

ಕಾಂಗ್ರೆಸ್‌ ಕಿಡಿ:

ಹೊಸಬಾಳೆ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್‌, ‘ಆರ್‌ಎಸ್‌ಎಸ್‌ ಸಂವಿಧಾನವನ್ನು ಎಂದೂ ಒಪ್ಪಿಕೊಂಡೇ ಇರಲಿಲ್ಲ. ಪ್ರಜಾಪ್ರಭುತ್ವ ಮತ್ತು ದೇಶದ ಬಗೆಗಿನ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಕೆಡವುವ ದೀರ್ಘಕಾಲದ ಪಿತೂರಿಯ ಭಾಗ ಇದು, ಜೊತೆಗೆ ಇದು ಸಂವಿಧಾನದ ಆತ್ಮದ ಮೇಲಿನ ಉದ್ದೇಶಪೂರ್ವಕ ದಾಳಿ’ ಎಂದು ಟೀಕಿಸಿದೆ.

‘ಸಂವಿಧಾನವನ್ನು ತಿರಸ್ಕರಿಸಿ ಮನುಸ್ಮೃತಿಯನ್ನು ಜಾರಿಗೆ ತರಲು ಬಯಸುವ ಸಂಘದ ಮುಖವಾಡ ಇಂದು ಕಳಚಿದೆ. ಸಮಾನತೆ, ಜಾತ್ಯತೀತತೆ ಮತ್ತು ನ್ಯಾಯದ ಬಗ್ಗೆ ಮಾತನಾಡುವ ಕಾರಣ ಅವರಿಗೆ ಸಂವಿಧಾನ ಹಿಡಿಸದು. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಬಡವರು, ಹಿಂದುಳಿದವರ ಹಕ್ಕುಗಳನ್ನು ಕಸಿದು ಅವರನ್ನು ಮತ್ತೆ ಗುಲಾಮರಾಗಿಸಿಕೊಳ್ಳಲು ಬಯಸಿದ್ದಾರೆ. ಆದರೆ ಹೀಗಾಗಲು ನಾವು ಬಿಡುವುದಿಲ್ಲ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಪ್ರತಿಕ್ರಿಯಿಸಿ, ‘ಹೊಸಬಾಳೆಯವರ ಹೇಳಿಕೆ, ಅಂಬೇಡ್ಕರ್‌, ನೆಹರು ಸೇರಿದಂತೆ ಸಂವಿಧಾನ ರಚನೆಯ ಭಾಗವಾಗಿದ್ದ ಹಲವರ ಮೇಲಿನ ದಾಳಿಯಾಗಿದೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಹಲವು ಬಾರಿ ಹೊಸ ಸಂವಿಧಾನದ ಕರೆ ನೀಡಿವೆ. 2024ರ ಲೋಕಸಭೆ ಚುನಾವಣೆ ವೇಳೆಯೂ ಪ್ರಧಾನಿ ನರೇಂದ್ರ ಮೋದಿಯವರು ಇದನ್ನೇ ಪ್ರಚಾರ ಸಾಮಗ್ರಿಯಾಗಿ ಬಳಸಿದ್ದರು. ಜನ ಇದನ್ನು ತಿರಸ್ಕರಿಸಿದರೂ, ಆರ್‌ಎಸ್‌ಎಸ್‌ ಧೋರಣೆ ಬದಲಾಗಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಪಕ್ಷಗಳಿಂದ ವಿರೋಧ:

ಅತ್ತ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಆರ್‌ಎಸ್‌ಎಸ್‌ಅನ್ನು ಜಾತಿವಾದಿ ಮತ್ತು ದ್ವೇಷಪೂರಿತ ಸಂಘಟನೆ ಎಂದು ಕರೆದಿದ್ದು, ‘ಸಂವಿಧಾನ ಮತ್ತು ಅದರಲ್ಲಿ ಒದಗಿಸಲಾದ ಮೀಸಲಾತಿಯ ಮೇಲೆ ಕೆಟ್ಟ ದೃಷ್ಟಿ ಹಾಕುವ ಧೈರ್ಯ ಅವರಿಗಿಲ್ಲ’ ಎಂದು ಕಿಡಿ ಕಾರಿದ್ದಾರೆ. ಸಿಪಿಐಎಂ ಕೂಡ, ‘ಸಂಘದ ಪ್ರಸ್ತಾಪವು ಸಂವಿಧಾನವನ್ನು ಬುಡಮೇಲು ಮಾಡುವ ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಅದರ ಉದ್ದೇಶವನ್ನು ಬಹಿರಂಗಪಡಿಸುತ್ತದೆ’ ಎಂದು ಹೇಳಿದೆ.

ಸಮಾಜವಾದಿ, ಜಾತ್ಯತೀತ ಪದ ತೆಗೆವ ಹೊಸಬಾಳೆ ಕರೆಗೆ ಸಂಘ ಬೆಂಬಲ

ಸಂವಿಧಾನದ ಮೂಲಚೈತನ್ಯ ಪುನಃಸ್ಥಾಪನೆಗೆ ಹೊಸಬಾಳೆ ಕರೆ: ಸಂಘ ಸ್ಪಷ್ಟನೆ

ಸಂಘ ಸಂವಿಧಾನವನ್ನು ಎಂದೂ ಒಪ್ಪಿಕೊಳ್ಳಲೇ ಇಲ್ಲ: ಕಾಂಗ್ರೆಸ್‌ ಕಿಡಿಕಿಡಿ

ಅವರಿಗೆ ಸಂವಿಧಾನ ಅಲ್ಲ, ಮನುಸ್ಮೃತಿ ಬೇಕು: ರಾಹುಲ್‌ ಗಾಂಧಿ ವಾಗ್ದಾಳಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ