ನಮ್ಮ ಭಾರತದ ಗುರಿ ಅಭಿವೃದ್ಧಿಯೇ ಹೊರತು ವಿಸ್ತಾರವಾದ ಅಲ್ಲ : ಪ್ರಧಾನಿ ನರೇಂದ್ರ ಮೋದಿ

KannadaprabhaNewsNetwork |  
Published : Jan 16, 2025, 01:30 AM ISTUpdated : Jan 16, 2025, 04:36 AM IST
ಮೋದಿ | Kannada Prabha

ಸಾರಾಂಶ

 ಭಾರತದ ಗುರಿ ಅಭಿವೃದ್ಧಿಯೇ ಹೊರತು ವಿಸ್ತಾರವಾದ ಅಲ್ಲ. ಭಾರತ ಯಾವತ್ತಿಗೂ ಮುಕ್ತ, ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಂಡ ಸಮೃದ್ಧತೆಯನ್ನು ಇಂಡೋ-ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಮುಂಬೈ: ಭಾರತದ ಗುರಿ ಅಭಿವೃದ್ಧಿಯೇ ಹೊರತು ವಿಸ್ತಾರವಾದ ಅಲ್ಲ. ಭಾರತ ಯಾವತ್ತಿಗೂ ಮುಕ್ತ, ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಂಡ ಸಮೃದ್ಧತೆಯನ್ನು ಇಂಡೋ-ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ಮೂಲಕ ಬಲಿಷ್ಠ ನೌಕಾಪಡೆಯೊಂದಿಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಅಧಿಪತ್ಯ ಸಾಧಿಸಿ ನೆರೆಯ ದೇಶಗಳಿಗೆ ಬೆದರಿಕೆಯೊಡ್ಡುವ ಚೀನಾಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಮುಂಬೈನಲ್ಲಿ ಬುಧವಾರ ಇದೇ ಮೊದಲ ಬಾರಿಗೆ ದೇಶೀ ನಿರ್ಮಿತ ಐಎನ್‌ಎಸ್‌ ಸೂರತ್‌, ಐಎನ್‌ಎಸ್‌ ನೀಲಗಿರಿ ಯುದ್ಧನೌಕೆ ಮತ್ತು ಐಎನ್‌ಎಸ್‌ ವಗ್‌ಶೀರ್‌ ಜಲಾಂತಾರ್ಗಾಮಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಭಾರತವು ಪ್ರಮುಖ ನೌಕಾಶಕ್ತಿಯಾಗಿ ಬೆಳೆಯುತ್ತಿದ್ದು, ವಿಶ್ವದ ವಿಶ್ವಾಸಾರ್ಹ ಮತ್ತು ಜಾವಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಡುತ್ತಿದೆ ಎಂದು ಬಣ್ಣಿಸಿದರು.

ಸಮುದ್ರವನ್ನು ಮಾದಕವಸ್ತು, ಶಸ್ತ್ರಾಸ್ತ್ರಗಳು ಮತ್ತು ಭಯೋತ್ಪಾದಕರಿಂದ ಮುಕ್ತವಾಗಿಸಲು ಮತ್ತು ಸುರಕ್ಷಿತ ಹಾಗೂ ಸಮೃದ್ಧಗೊಳಿಸಲು ನಾವು ಅಂತಾರಾಷ್ಟ್ರೀಯಮಟ್ಟದಲ್ಲಿ ಪಾಲುದಾರರರಾಗಬೇಕು. ಇದೀಗ ಭಾರತವು ಪ್ರಮುಖ ನೌಕಾಶಕ್ತಿಯಾಗಿ ಬೆಳೆಯುತ್ತಿದ್ದು, ವಿಶ್ವದ ವಿಶ್ವಾಸಾರ್ಹ ಮತ್ತು ಜಬಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಡುತ್ತಿದೆ ಎಂದರು.

ಭಾರತವು ಭ‍ವಿಷ್ಯದಲ್ಲಿ ಅಂತಾರಾಷ್ಟ್ರೀಯ ಭದ್ರತೆ, ಆರ್ಥಿಕತೆ ಮತ್ತು ಭೌಗೋಳಿಕ ಬದಲಾವಣೆಗಳಿಗೆ ದಿಕ್ಕು ನೀಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಪ್ರಾದೇಶಿಕ ಜಲಪ್ರದೇಶದ ರಕ್ಷಣೆ, ಜಲಸಂಚಾರದ ಸ್ವಾತಂತ್ರ್ಯ ಮತ್ತು ಟ್ರೇಡ್‌ ಸಪ್ಲೈಲೈನ್ಸ್‌ ಮತ್ತು ಸಮುದ್ರ ಮಾರ್ಗಗಳನ್ನು ರಕ್ಷಿಸುವುದು ಯಾವತ್ತಿಗೂ ಮುಖ್ಯ. ಭಾರತದ ಕೆಲಸ-ಕಾರ್ಯಗಳ ಉದ್ದೇಶ ಅಭಿವೃದ್ಧಿಯ ಸ್ಫೂರ್ತಿಯಿರುತ್ತದೆಯೇ ಹೊರತು ವಿಸ್ತಾರವಾದ ಅಲ್ಲ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.

ಆತ್ಮನಿರ್ಭರ ಭಾರತ ಪರಿಕಲ್ಪನೆಯು ದೇಶವನ್ನು ಶಕ್ತಿಯುತ ಮತ್ತ ಸ್ವಾವಲಂಬಿಯನ್ನಾಗಿ ಮಾಡಿದೆ. ಕಳೆದ 10 ವರ್ಷಗಳಲ್ಲಿ 33 ನೌಕೆಗಳು ಮತ್ತು ಏಳು ಸಬ್‌ಮೆರಿನ್‌ಗಳನ್ನು ನೌಕಾಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಭಾರತದ ರಕ್ಷಣಾ ಉತ್ಪಾದನೆಯು 1.25 ಲಕ್ಷ ಕೋಟಿ ದಾಟಿದೆ ಮತ್ತು 100ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಉತ್ಪನ್ನಗಳ ರಫ್ತು ಆಗುತ್ತಿದೆ ಎಂದು ಇದೇ ವೇಳೆ ಮೋದಿ ತಿಳಿಸಿದರು.

 ಈ ಯುದ್ಧನೌಕೆ, ಜಲಾಂತಾರ್ಗಾಮಿ ವಿಶೇಷ ಏನು?ಐಎನ್‌ಎಸ್‌ ನೀಲಗಿರಿಇದು ಪ್ರಾಜೆಕ್ಟ್‌ 17ಎ ಸ್ಟೆಲ್ತ್‌ ಫ್ರಿಗೇಟ್‌ ಕ್ಲಾಸ್‌ನ ಮೊದಲ ನೌಕೆಯಾಗಿದ್ದು, ಶಿವಾಲಿಕ್‌ ಕ್ಲಾಸ್‌ನ ಯುದ್ಧನೌಕೆಗಳಿಗೆ ಹೋಲಿಸಿದರೆ ಅತ್ಯಾಧುನಿಕವಾಗಿದೆ. ಭಾರತದ ನೌಕಾಪಡೆಯ ಯುದ್ಧನೌಕೆ ಡಿಸೈನ್‌ ಬ್ಯುರೋ ವಿನ್ಯಾಸಗೊಳಿಸಿದ ಮತ್ತು ಮಜ್‌ಗಾಂವ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿ.(ಎಂಡಿಎಲ್‌) ನಲ್ಲಿ ನಿರ್ಮಿತ ಈ ಯುದ್ಧನೌಕೆ ಮೇಲ್ದರ್ಜೆಗೇರಿಸಿದ ರಕ್ಷಣಾ ವ್ಯವಸ್ಥೆ ಮತ್ತು ಸಮುದ್ರದಲ್ಲಿ ಪರಿಣಾಮಕಾರಿ ಕಾರ್ಯಾಚರಣೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಹೊಂದಿದೆ. ಇದು ವಿವಿಧ ರೀತಿಯ ಕಾಫ್ಟರ್‌ಗಳನ್ನು ಹೊತ್ತೊಯ್ಯಬಲ್ಲದಾಗಿದೆ.

ಐಎನ್‌ಎಸ್‌ ಸೂರತ್‌

ಇದು ಪ್ರೊಜೆಕ್ಟ್‌ 15ಬಿ ಸ್ಟೆಲ್ತ್‌ ಡಿಸ್ಟ್ರಾಯರ್‌ ಕ್ಲಾಸ್‌ನ ನಾಲ್ಕನೇ ಮತ್ತು ಅಂತಿಮ ಯುದ್ಧನೌಕೆ. ಇದು ಕೊಲ್ಕತ್ತಾ ಕ್ಲಾಸ್ ಡಿಸ್ಟ್ರಾಯರ್‌ ಕ್ಲಾಸ್‌ ರೀತಿಯ ನೌಕೆಯಾಗಿದೆ. ಹಳೆಯ ಯುದ್ಧನೌಕೆಗಳಿಗೆ ಹೋಲಿಸಿದರೆ ವಿನ್ಯಾಸ ಮತ್ತು ಸಾಮರ್ಥ್ಯದಲ್ಲಿ ಸಾಕಷ್ಟು ಸುಧಾರಣೆ ತರಲಾಗಿದ್ದು, ಇದು ನೌಕಾಪಡೆಗೆ ಮಹತ್ವದ ಸೇರ್ಪಡೆಯಾಗಿದೆ. ಅತ್ಯಾಧುನಿಕ ಸ್ಟೆಲ್ತ್‌ ಮತ್ತು ರೇಡಾರ್‌ಗಳಿಗೆ ಕಡಿಮೆ ಗೋಚರಿಸುವ ತಂತ್ರಜ್ಞಾನವನ್ನು ಹೊಂದಿರುವ ಈ ನೌಕೆಯ ಉದ್ದ 164 ಮೀಟರ್‌ ಆಗಿದೆ. ಈ ನೌಕೆ ಚೇತಕ್‌, ಎಲ್‌ಎಚ್‌, ಸೀಕಿಂಗ್‌ ಮತ್ತು ಇತ್ತೀಚೆಗೆ ಸೇನೆಗೆ ಸೇರ್ಪಡೆಯಾದ ಎಂಎಚ್‌-60ಆರ್‌ ನಂಥ ವಿವಿಧ ಹೆಲಿಕಾಪ್ಟರ್‌ಗಳನ್ನು ಹೊತ್ತೊಯ್ಯಬಲ್ಲ ಈ ನೌಕೆ ರಾತ್ರಿ ಹೊತ್ತೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಇದನ್ನು ಕೂಡ ಮಡಗಾಂವ್‌ ಡಾಕ್‌ ಯಾರ್ಡ್‌ನಲ್ಲಿ ನಿರ್ಮಿಸಲಾಗಿದೆ.

 ಐಎನ್‌ಎಸ್‌ ವಗ್‌ಶೀರ್‌

ಇದು ಸ್ಕಾರ್ಪಿಯನ್‌ ಕ್ಲಾಸ್‌ ಪ್ರಾಜೆಕ್ಟ್ 75ರ ಕೊನೆಯ ಮತ್ತು ಆರನೇ ಸಬ್‌ಮೆರಿನ್‌. ಇದು ಡೀಸೆಲ್‌ ಎಲೆಕ್ಟ್ರಿಕಲ್‌ ಸಬ್‌ಮೆರಿನ್‌ ಆಗಿದ್ದು, ಆ್ಯಂಟಿ ಸರ್ಫೇಸ್‌ ವಾರ್‌ಫೇರ್‌, ಆ್ಯಂಟಿ ಸಬ್‌ಮೆರಿನ್‌ ವಾರ್‌ಫೇರ್‌ ಮತ್ತು ಗುಪ್ತಚರ ಮಾಹಿತಿ ಸಂಗ್ರಹ ಸೇರಿ ವಿವಿಧ ಉದ್ದೇಶಗಳಿಗೆ ನಿರ್ಮಿಸಲಾಗಿದೆ. ಸ್ವತಂತ್ರ ಏರ್‌ಇಂಡಿಪೆಂಡೆಂಟ್‌ ಪ್ರೊಪಲ್ಷನ್‌ ತಂತ್ರಜ್ಞಾನ ಸೇರಿ ಅನೇಕ ಸುಧಾರಿತ ತಂತ್ರಜ್ಞಾನಗಳನ್ನು ಈ ಸಬ್‌ಮೆರಿನ್‌ ಒಳಗೊಂಡಿದೆ. ಹಿಂದೂ ಮಹಾಸಾಗರದ ಅಪಾಯಕಾರಿ ಸ್ಯಾಂಡ್‌ಫಿಶ್‌ ಹೆಸರನ್ನೇ ಇದಕ್ಕೆ ಇಡಲಾಗಿದೆ. ಇದು ಅತಿ ಕಡಿಮೆ ಶಬ್ದ ಹೊರಸೂಸುವ ವಿಶ್ವದ ಜಲಾಂತರ್ಗಾಮಿಗಳಲ್ಲಿ ಒಂದಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ