ನವದೆಹಲಿ: ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ವಾಣಿಜ್ಯ ಅಡುಗೆ ಅನಿಲ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. 19 ಕೇಜಿ ವಾಣಿಜ್ಯ ಎಲ್‌ಪಿಜಿ ದರವನ್ನು 14.5 ರು. ಇಳಿಕೆ ಮಾಡಿದೆ. ಇದರ ಜೊತೆಗೆ ವೈಮಾನಿಕ ಇಂಧನ ದರವನ್ನು ಪ್ರತಿ 1000 ಲೀಟರ್‌ಗೆ 1401 ರು. ಕಡಿತಗೊಳಿಸಿದೆ. ದರ ಇಳಿಕೆ ಬಳಿಕ ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ದರ 1804 ರು. ಆಗಿದ್ದರೆ, ವಿಮಾನದ ಇಂಧನ ದರವು 90455 ರು. ಆಗಲಿದೆ. ವೈಮಾನಿಕ ಇಂಧನ ದರ ಸತತ 2 ಏರಿಕೆ ಬಳಿಕ ಇಳಿಕೆ ಕಂಡಿದೆ. ಇನ್ನು ವಾಣಿಜ್ಯ ಎಲ್‌ಪಿಜಿ ದರ ಸತತ 5 ಏರಿಕೆ ಬಳಿಕ ಇಳಿಕೆ ಕಂಡಿದೆ.
ಒಪ್ಪಂದ ಅನ್ವಯ ಪರಸ್ಪರ ಅಣ್ವಸ್ತ್ರ ಮಾಹಿತಿ ವಿನಿಮಯ ಮಾಡಿದ ಭಾರತ- ಪಾಕ್
ನವದೆಹಲಿ: 1988ರಲ್ಲಿ ಮಾಡಿಕೊಂಡ ಒಪ್ಪಂದದ ಅನ್ವಯ, ಭಾರತ ಮತ್ತು ಪಾಕಿಸ್ತಾನ ದೇಶಗಳು ಬುಧವಾರ ತಮ್ಮ ತಮ್ಮ ದೇಶದಲ್ಲಿ ಇರುವ ಅಣ್ವಸ್ತ್ರಗಳ ಕುರಿತ ಮಾಹಿತಿಯನ್ನು ಪರಸ್ಪರ ಹಂಚಿಕೊಂಡಿವೆ. ಪರಮಾಣು ಸ್ಥಾಪನೆಗಳು ಮತ್ತು ಸೌಲಭ್ಯಗಳ ಮೇಲಿನ ದಾಳಿಯನ್ನು ನಿಷೇಧಿಸುವ ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ ಈ ವಿನಿಮಯ ನಡೆದಿದೆ.‘ಭಾರತ ಮತ್ತು ಪಾಕಿಸ್ತಾನ ರಾಜತಾಂತ್ರಿಕ ಮಾರ್ಗಗಳ ಮೂಲಕ ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಪರಮಾಣುಗಳ ಸ್ಥಾಪನೆ ಮತ್ತು ಸೌಲಭ್ಯಗಳ ಪಟ್ಟಿಯನ್ನು ಏಕಕಾಲದಲ್ಲಿ ವಿನಿಮಯ ಮಾಡಿಕೊಂಡಿದೆ. ಪರಮಾಣುಗಳ ಸ್ಥಾಪನೆ ಮತ್ತು ಸೌಲಭ್ಯದ ನಡುವಿನ ದಾಳಿಯನ್ನು ನಿಲ್ಲಿಸುವ ಕಾರಣಕ್ಕೆ ಒಪ್ಪಂದ ನಡೆದಿದೆ’ ಎಂದು ಸಚಿವಾಲಯ ಹೇಳಿದೆ.
ಏರಿಂಡಿಯಾದಿಂದ ಆಯ್ದ ವಿಮಾನಗಳಲ್ಲಿ ವೈ ಫೈ:
ಭಾರತದಲ್ಲಿ ಇದೇ ಮೊದಲುಮುಂಬೈ: ಏರಿಂಡಿಯಾ ವಿಮಾನಯಾನ ಸಂಸ್ಥೆ ತನ್ನ ಆಯ್ದ ದೇಶೀಯ, ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಬುಧವಾರದಿಂದ ವೈಫೈ ಇಂಟರ್ನೆಟ್ ಸೇವೆ ಪ್ರಾರಂಭಿಸಿದೆ. ಈ ಮೂಲಕ ಇಂಥ ಸೇವೆ ಆರಂಭಿಸಿದ ದೇಶದ ಮೊದಲ ವಿಮಾನಯಾನ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಏರ್‌ಬಸ್ A350, ಬೋಯಿಂಗ್ 787-9, ಏರ್‌ಬಸ್ A321 ವಿಮಾನಗಳಲ್ಲಿ ವೈಫೈ ಸೇವೆ ಆರಂಭಿಸಲಾಗಿದೆ. ಇದರಿಂದಾಗಿ ಲ್ಯಾಪ್‌ಟಾಪ್, ಟ್ಯಾಬ್, ಸ್ಮಾರ್ಟ್‌ಫೋನ್‌ಗಳನ್ನು ಐಒಎಸ್, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಉಪಯೋಗಿಸಬಹುದು. ಸುಮಾರು 10 ಸಾವಿರ ಅಡಿಗಳಿಗಿಂತಲೂ ಎತ್ತರದ ಮಟ್ಟದಲ್ಲಿಯೂ ಇದು ಕಾರ್ಯ ನಿರ್ವಹಿಸಲಿದೆ.
ಹೊಸ ವರ್ಷದ ಮೊದಲ ದಿನ ಸೆನ್ಸೆಕ್ಸ್ 368 ಅಂಕ ಏರಿ 78507ರಲ್ಲಿ ಅಂತ್ಯ
ಮುಂಬೈ: 2024ರಲ್ಲಿ ಒಟ್ಟಾರೆ 5800ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡಿದ್ದ ಬಾಂಬೆ ಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2025ರ ಹೊಸ ವರ್ಷದ ಮೊದಲ ದಿನ ಶುಭಾರಂಭ ಮಾಡಿದೆ. ಬುಧವಾರ ಸೆನ್ಸೆಕ್ಸ್ 368 ಅಂಕಗಳ ಏರಿಕೆ ಕಂಡು 78507 ಅಂಕಗಳಲ್ಲಿ ಮುಕ್ತಾಯವಾಗಿದೆ. ಮಧ್ಯಂತರದಲ್ಲಿ ಸೆನ್ಸೆಕ್ಸ್ 617 ಅಂಕಗಳವರೆಗೆ ಏರಿಕೆ ಕಂಡಿತ್ತಾದರೂ ಬಳಿಕ ಸ್ವಲ್ಪ ಇಳಿಕೆ ಕಂಡಿತು. ನಿಫ್ಟಿ ಕೂಡಾ 98 ಅಂಕ ಏರಿ 23742ರಲ್ಲಿ ಅಂತ್ಯವಾಗಿದೆ. ಮಾರುತಿ, ಮಹೀಂದ್ರಾ, ಎಲ್ ಆ್ಯಂಡ್ ಟಿ, ಬಜಾಜ್ ಫೈನಾನ್ಸ್, ಟಾಟಾ ಮೋಟಾರ್ಸ್ ಉತ್ತಮ ಏರಿಕೆ ಕಂಡವು.