ಕೇಜ್ರಿ ಆಪ್ತೆಗೆ ಸಿಎಂ ಹುದ್ದೆ

KannadaprabhaNewsNetwork | Published : Sep 18, 2024 1:53 AM

ಸಾರಾಂಶ

ದೆಹಲಿಯ ಆಮ್‌ಆದ್ಮಿ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆತಿಶಿ, ಮಾಜಿ ಸಿಎಂ ಕೇಜ್ರಿವಾಲ್‌ ಆಪ್ತರ ಬಳಗದಲ್ಲಿ ಗುರುತಿಸಿಕೊಂಡವರು.

ಕೇಜ್ರಿ ಸರ್ಕಾರದಲ್ಲಿ 14ಖಾತೆಗಳ ನಿರ್ವಹಿಸಿದ್ದ ಆತಿಶಿ

ನವದೆಹಲಿ: ದೆಹಲಿಯ ಆಮ್‌ಆದ್ಮಿ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆತಿಶಿ, ಮಾಜಿ ಸಿಎಂ ಕೇಜ್ರಿವಾಲ್‌ ಆಪ್ತರ ಬಳಗದಲ್ಲಿ ಗುರುತಿಸಿಕೊಂಡವರು.

ದೆಹಲಿ ಅಬಕಾರಿ ಹಗರಣ ಸಂಬಂಧ ಆಪ್‌ನ ಅತಿರಥ ಮಹಾರಥ ನಾಯಕರಾದ ಅರವಿಂದ ಕೇಜ್ರಿವಾಲ್‌ ಹಾಗೂ ಮನೀಶ್‌ ಸಿಸೋಡಿಯಾ ಜೈಲು ಪಾಲಾದಾಗ ಸರ್ಕಾರ ಮತ್ತು ಪಕ್ಷದ ಪರವಾಗಿ ಪ್ರಬಲ ಹೋರಾಟ ನಡೆಸಿದವರು ಆತಿಶಿ. ಇಬ್ಬರೂ ನಾಯಕರ ಅನುಪಸ್ಥಿತಿಯಲ್ಲಿ 14 ಖಾತೆಗಳನ್ನು ನಿರ್ವಹಿಸಿದ ಗಟ್ಟಿಗಿತ್ತಿ. ಕೇಜ್ರಿವಾಲ್‌ ಪರ ಮುಖಂಡರನ್ನು ಕಟ್ಟಿಕೊಂಡು ಬೀದಿಗಿಳಿದು ಗಮನಸೆಳೆದವರು.

ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ವಿಜಯ್‌ ಸಿಂಗ್‌ ಹಾಗೂ ತೃಪ್ತಾ ವಾಹಿ ದಂಪತಿಯ ಪುತ್ರಿಯಾಗಿ ಜನಿಸಿದ ಆತಿಶಿ, ದೆಹಲಿ ಹಾಗೂ ವಿದೇಶದಲ್ಲಿ ಶಿಕ್ಷಣ ಪಡೆದಿದ್ದಾರೆ. ಪಕ್ಕಾ ಎಡಪಂಥೀಯರಾಗಿದ್ದ ಆತಿಶಿ ತಂದೆ- ತಾಯಿ, ಪುತ್ರಿಗೆ ಮಾರ್ಕ್ಸ್‌ ಹಾಗೂ ಲೆನಿನ್‌ ಸ್ಮರಣಾರ್ಥ ಆತಿಶಿ ‘ಮಾರ್ಲೆನಾ’ ಎಂದು ನಾಮಕರಣ ಮಾಡಿದ್ದರು. ಈಕೆ ಕ್ರೈಸ್ತರು ಎಂದು ಬಿಜೆಪಿ ಹುಯಿಲೆಬ್ಬಿಸಿದ ಹಿನ್ನೆಲೆಯಲ್ಲಿ ಮಾರ್ಲೆನಾ ಉಪಹೆಸರನ್ನು ಆತಿಶಿ ಕೈಬಿಟ್ಟಿದ್ದಾರೆ.

2013ರಿಂದ ಆಪ್‌ನಲ್ಲಿ ಗುರುತಿಸಿಕೊಂಡಿದ್ದಾರೆ. 2019ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯ ಗೌತಮ್‌ ಗಂಭೀರ್‌ ಎದುರು ಪರಾಜಿತರಾಗಿದ್ದರು. 2020ರಲ್ಲಿ ಮೊದಲ ಬಾರಿ ಶಾಸಕಿಯಾದರು. ಸಿಸೋಡಿಯಾ ಜೈಲುಪಾಲಾದ ಬಳಿಕ ಸಚಿವೆಯಾದ ಆಕೆ ಈಗ ಮುಖ್ಯಮಂತ್ರಿಯಾಗಿದ್ದಾರೆ.

===ಅಫ್ಜಲ್‌ ಗುರುಗೆ ಕ್ಷಮಾದಾನ ಕೋರಿದ್ದ ಆತಿಶಿ ಪೋಷಕರು ಸಾಕಷ್ಟು ವಿವಾದಿತ ಹಿನ್ನೆಲೆ ಹೊಂದಿದ್ದಾರೆ. ಸಂಸತ್ ದಾಳಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಅಫ್ಜಲ್‌ ಗುರುಗೆ ಕ್ಷಮಾದಾನ ನೀಡಬೇಕೆಂದು ಆತಿಶಿ ತಾಯಿ ತೃಪ್ತಾ ಮತ್ತು ತಂದೆ ವಿಜಯ್‌ ಸಿಂಗ್‌ ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಯೋಧರಿಗೆ ನಿಧಿ ನೀಡಲು ನಿರಾಕರಿಸಿ, ಯೋಧರು ಹಣಕ್ಕಾಗಿ ಸಾಯುತ್ತಾರೆ ಎಂದಿದ್ದರು. ಅಫ್ಜಲ್‌ ಗುರುಗೆ ಶಿಕ್ಷೆ ನೀಡಿದ ಪ್ರಕರಣದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿದ್ದರು. ಸಿಯಾಚಿನ್‌ ಪ್ರದೇಶದಲ್ಲಿ ಭಾರತದ ಯೋಧರು ದಾಳಿಗೆ ಸಾವನ್ನಪ್ಪುವುದಕ್ಕೆ ಕಳವಳ ಆದಷ್ಟೇ ಪಾಕ್‌ ಯೋಧರು ಸತ್ತಾಗಲೂ ಆಗುತ್ತದೆ ಎಂದಿದ್ದರು. ಇನ್ನು 2016ರ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಗಳಿಗಿಂತ ಗೂಂಡಾಗಳಿಗೆ, ರೌಡಿಗಳಿಗೆ ಮತ ಹಾಕುವುದು ಸೂಕ್ತ ಎಂದು ಸ್ವತಃ ಆತಿಶಿ ಕರೆ ನೀಡಿ ವಿವಾದ ಸೃಷ್ಟಿಸಿದ್ದರು.

Share this article