ಹೈದರಾಬಾದ್: ಬೀದರ್‌ನಲ್ಲಿ 93 ಲಕ್ಷ ರು. ಎಟಿಎಂ ಹಣ ಲೂಟಿ ಮಾಡಿ ಪರಾರಿಯಾಗಿದ್ದ ಇಬ್ಬರು ಬಿಹಾರಿ ಡಕಾಯಿತರು ಮೊದಲು ಬಿಹಾರದ ಹಾಜಿಪುರದಿಂದ ಹೈದರಾಬಾದ್‌ವರೆಗೆ 1500 ಕಿ.ಮೀ.ನಷ್ಟು ಬೈಕ್‌ನಲ್ಲಿ ಸಂಚರಿಸಿ ಬಂದಿದ್ದರು ಎಂಬ ರೋಚಕ ಸಿಸಿಟೀವಿ ಸಾಕ್ಷ್ಯ ಲಭಿಸಿದೆ.
ನಂತರ ಅಲ್ಲಿಂದ ಕರ್ನಾಟಕದ ಬೀದರ್‌ನಲ್ಲಿಗೆ ಆಗಮಿಸಿ ಎಟಿಎಂಗೆ ಹಣ ತುಂಬಲು ಬಂದಿದ್ದ ಹಣವನ್ನು ಸಿನಿಮೀಯ ರೀತಿಯಲ್ಲಿ ಲೂಟಿ ಮಾಡಿದ್ದರು. ಬಳಿಕ ಹೈದರಾಬಾದ್‌ಗೆ ತೆರಳಿ ಅಲ್ಲಿ ಅಫ್ಜಲ್‌ಗಂಜ್‌ನಲ್ಲಿ ಕೊಲೆಗೆ ಯತ್ನಿಸಿ ಪರಾರಿ ಆಗಿದ್ದರು ಎಂದು ತಿಳಿದುಬಂದಿದೆ.
ಪರಿಚಯಸ್ಥರ ಬೈಕ್:
ಬಿಹಾರದ ಹಾಜಿಪುರ ಜಿಲ್ಲೆಯವರಾದ ಇಬ್ಬರೂ ಆರೋಪಿಗಳು ಅಪರಾಧ ಎಸಗುವ ಒಂದು ತಿಂಗಳಿಗೂ ಮುನ್ನ ತಮ್ಮ ಪರಿಚಯಸ್ಥರಿಂದ ಬೈಕ್ ಪಡೆದುಕೊಂಡು ಹೈದರಾಬಾದ್ ವರೆಗೆ ಬರೋಬ್ಬರಿ 1.5 ಸಾವಿರ ಕಿ.ಮೀ. ಸಂಚರಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಅಫ್ಜಲ್‌ಗಂಜ್‌ನಲ್ಲಿ ನಡೆದ ಕೊಲೆ ಯತ್ನದ ಬಳಿಕ ಆರೋಪಿಗಳ ಪತ್ತೆಗೆ ಸಿಸಿಟೀವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಬಸ್ ನಿಲ್ದಾಣವೊಂದರ ಬಳಿ ಬೈಕುಗಳನ್ನು ನಿಲ್ಲಿಸಿದ ಆರೋಪಿಗಳು ಟೋಕನ್‌ಗಾಗಿ ನಕಲಿ ಮೊಬೈಲ್ ಸಂಖ್ಯೆ ನೀಡಿದ್ದರು ಎಂದಿದ್ದಾರೆ.
ಈ ಬೈಕ್ ನಂಬರ್ ಆಧರಿಸಿ ಹಾಜಿಪುರದಲ್ಲಿದ್ದ ಬೈಕ್ ಮಾಲೀಕರ ಬಳಿ ಪೊಲೀಸರು ವಿಚಾರಿಸಿದಾಗ, ಅವರು ಅದನ್ನು ತಮ್ಮ ಸ್ನೇಹಿತನಿಗೆ ಒಂದು ತಿಂಗಳ ಮಟ್ಟಿಗೆ ನೀಡಿದ್ದಾಗಿ ತಿಳಿಸಿದ್ದಾರೆ. ಆದರೆ ಅವರಿಗೆ ತಮ್ಮ ಬೈಕ್ ಅಪರಾಧ ಕೃತ್ಯಕ್ಕೆ ಬಳೆಕೆಯಾದ ಬಗ್ಗೆ ಅರಿವಿರಲಿಲ್ಲ ಎಂದು ಹೇಳಿದ್ದಾರೆ.
ತನಿಖೆ ವೇಳೆ, ಇಬ್ಬರು ಆರೋಪಿಗಳು ಬಿಹಾರ ಹಾಗೂ ಉತ್ತರಪ್ರದೇಶಗಳಲ್ಲೂ ದರೋಡೆ ಹಾಗೂ ಕೊಲೆ ಪ್ರಕರಣದಲ್ಲಿ ತೊಡಗಿದ್ದರು ಎಂದೂ ತಿಳಿದುಬಂದಿದೆ.