ಬಾಂಗ್ಲಾದ ಜೆಎಂಬಿ ಉಗ್ರರಿಂದ ಜಾರ್ಖಂಡಲ್ಲಿ ತರಬೇತಿ ಕ್ಯಾಂಪ್‌ : ಭಾರತದೊಳಗೇ ಕಾಲಿಟ್ಟು ದುಷ್ಕೃತ್ಯ

KannadaprabhaNewsNetwork | Updated : Feb 18 2025, 04:32 AM IST

ಸಾರಾಂಶ

ಶೇಖ್‌ ಹಸೀನಾ ಸರ್ಕಾರ ಪತನದ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳೂ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿದ್ದ ಸ್ಥಳೀಯರು ಮತ್ತು ಉಗ್ರರು, ಇದೀಗ ಭಾರತದೊಳಗೇ ಕಾಲಿಟ್ಟು ದುಷ್ಕೃತ್ಯ ನಡೆಸಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ರಾಂಚಿ: ಶೇಖ್‌ ಹಸೀನಾ ಸರ್ಕಾರ ಪತನದ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳೂ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿದ್ದ ಸ್ಥಳೀಯರು ಮತ್ತು ಉಗ್ರರು, ಇದೀಗ ಭಾರತದೊಳಗೇ ಕಾಲಿಟ್ಟು ದುಷ್ಕೃತ್ಯ ನಡೆಸಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಬಾಂಗ್ಲಾದೇಶದ ಕುಖ್ಯಾತ ಜೆಎಂಬಿ ಸಂಘಟನೆಯ ಉಗ್ರರ ತಂಡವೊಂದು ಕಳೆದ ತಿಂಗಳು ಬಾಂಗ್ಲಾದ ಗಡಿದಾಟಿ ಬಂದು ಜಾರ್ಖಂಡ್‌ನ ಪಕೂರ್‌ನಲ್ಲಿ ಕೆಲವರಿಗೆ ಉಗ್ರ ತರಬೇತಿ ನೀಡಿ ತೆರಳಿದೆ ಎಂದು ಜಾರ್ಖಂಡ್‌ನ ಉಗ್ರ ನಿಗ್ರಹ ದಳ (ಎಟಿಎಸ್‌) ಹೇಳಿದೆ. ಈ ಸಂಬಂಧ ರಾಜ್ಯದ ಎಲ್ಲಾ ಎಸ್ಪಿಗಳು ಹಾಗೂ ಡಿಜಿಪಿಗಳಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಿದೆ.

ಜಮಾತ್‌ ಉಲ್‌ ಮುಜಾಹಿದೀನ್ ಬಾಂಗ್ಲಾದೇಶ್‌ (ಜೆಎಂಬಿ)ಯ ಉಗ್ರ ಅಬ್ದುಲ್‌ ಮಮ್ಮುನ್‌ ಬಾಂಗ್ಲಾ ಗಡಿ ದಾಟಿ ಮುರ್ಷಿದಾಬಾದ್‌ನ ದುಲಿಯಾನ್‌ ಮೂಲಕ ಪಕೂರ್‌ಗೆ ಆಗಮಿಸಿದ್ದ. ಜ.6ಕ್ಕೆ ಪಕೂರ್‌ಗೆ ಭೇಟಿ ನೀಡಿದ್ದ ಆತ ಜಹಾ-ಇಂಡಿಯಾ ಸಂಘಟನೆಯ 15 ಸದಸ್ಯರಿಗೆ ಉಗ್ರ ತರಬೇತಿ ನೀಡಿದ್ದಾನೆ ಎಂದು ಎಟಿಎಸ್‌ ಹೇಳಿದೆ.

ಪೊಲೀಸ್‌ ಮೂಲಗಳ ಪ್ರಕಾರ, ಭಾರತದ ವಿರುದ್ಧದ ಷಡ್ಯಂತ್ರದ ಭಾಗವಾಗಿ ಕೆಲ ಬಾಂಗ್ಲಾ ಉಗ್ರರು ಗಡಿದಾಟಿ ಬಂದು ಇಲ್ಲಿ ಉಗ್ರ ತರಬೇತಿ ನೀಡುತ್ತಿದ್ದಾರೆ. ಪಕೂರ್‌ನ ದುಬ್ರಾಜ್‌ಪುರನಲ್ಲಿರುವ ಇಸ್ಲಾಮಿ ದಾವಾ ಕೇಂದ್ರದಲ್ಲಿ ಜಹಾ-ಇಂಡಿಯಾ ಮತ್ತು ಜೆಎಂಬಿ ಉಗ್ರರ ನಡುವೆ ಸಭೆ ನಡೆದಿದೆ. ಇದರಲ್ಲಿ ಉಗ್ರ ಅಬ್ದುಲ್‌ ಮಮುನ್‌ ಕೂಡ ಪಾಲ್ಗೊಂಡಿದ್ದ. ಆತ ಜ.7ರಂದು ಬಾಂಗ್ಲಾದೇಶಕ್ಕೆ ವಾಪಸಾಗುವ ಮೊದಲು ಜಹಾ-ಇಂಡಿಯಾದ ಹಲವು ಸದಸ್ಯರಿಗೆ ತರಬೇತಿ ನೀಡಿದ್ದಾನೆ ಎಂದು ಹೇಳಲಾಗಿದೆ.

ಎಟಿಎಸ್‌ ಮೂಲಗಳ ಪ್ರಕಾರ ಮುರ್ಶಿದಾಬಾದ್‌ನ ಜಾಲಂಗಿ ಪ್ರದೇಶದ ಹಲವರು ಕೂಡ ಉಗ್ರರ ಸಭೆಯಲ್ಲಿ ಪಾಲ್ಗೊಂಡಿದ್ದರು. ನಿಷೇಧಿತ ಉಗ್ರ ಸಂಘಟನೆಯಾದ ಜೆಎಂಬಿಯು ಶಾಹಿಬ್‌ಗಂಜ್‌ ಮತ್ತು ಪಕೂರ್‌ ಪ್ರದೇಶದಲ್ಲಿ ತನ್ನ ಅಸ್ತಿತ್ವ ಹೊಂದಿದೆ.

Share this article