ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ಭಾರತೀಯರು ಮತ್ತು ಹಿಂದೂಗಳ ಮೇಲಿನ ಜನಾಂಗೀಯ ಹಿಂಸೆ ಮುಂದುವರಿದಿದ್ದು, ಗುರುವಾರ ಹಿಂದೂ ದೇಗುಲದ ಮೇಲೆ ಅನಾಮಿಕರು ಜನಾಂಗೀಯ ನಿಂದನೆಯ ಅಸಭ್ಯ ಪದಗಳನ್ನು ಬರೆದು ವಿಕೃತಿ ಮೆರೆದಿದ್ದಾರೆ.
ಮೆಲ್ಬರ್ನ್‌ನ ಪಶ್ಚಿಮ ಪ್ರದೇಶದ ವಡ್‌ಹರ್ಸ್ಟ್ ಎಂಬಲ್ಲಿ ಸ್ವಾಮಿ ನಾರಾಯಣ ಮಂದಿರದ ಮೇಲೆ ಗುರುವಾರ ಬೆಳಗ್ಗೆ ಅನಾಮಿಕರು ಸ್ಪ್ರೇ ಪೇಯಿಂಟ್‌ನಿಂದ ವಿಕೃತಿ ಸಂದೇಶ ಬರೆದಿದ್ದಾರೆ. ‘ಮನೆಗೆ ಹೋಗಿ ಕಂದು ಬಣ್ಣದವರೇ’ ಎಂದು ಬರೆದಿದ್ದಾರೆ. ಇದರ ಜೊತೆಗೆ ದೇಗುಲದ ಸಮೀಪ 2 ಭಾರತೀಯರ ರೆಸ್ಟೋರೆಂಟ್‌ಗಳಿಗೂ ಸಹ ಇದೇ ರೀತಿ ಅಸಭ್ಯ ಪದಗಳನ್ನು ಬರೆದಿದ್ದಾರೆ. ಬುಧವಾರ ಭಾರತೀಯನ ಮೇಲೆ ಹಲ್ಲೆ ನಡೆದಿತ್ತು.
ಏರಿಂಡಿಯಾ ವಿಮಾನದೊಳಗೆ ತಾಯಿಯಾದ ಥಾಯ್ ಮಹಿಳೆ
ಮುಂಬೈ: ಮಸ್ಕತ್‌ನಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಥಾಯ್ಲೆಂಡ್ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮನೀಡಿದ ಘಟನೆ ಗುರುವಾರ ನಡೆದಿದೆ. ಈ ಬಗ್ಗೆ ಏರ್ ಇಂಡಿಯಾ ಹೇಳಿಕೆ ಬಿಡುಗಡೆ ಮಾಡಿದ್ದು, ‘ಥಾಯ್ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ವಿಮಾನದಲ್ಲಿದ್ದ ಸಿಬ್ಬಂದಿ, ಹೆರಿಗೆಗೆ ಸೂಕ್ತವಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಆ ವೇಳೆ ಉಪಸ್ಥಿತರಿದ್ದ ನರ್ಸ್‌ಗಳೂ ಶಿಶು ಜನನಕ್ಕೆ ಸಹಾಯ ಮಾಡಿದರು. ಆಗಸದಲ್ಲಿದ್ದಾಗಲೇ ಪೈಲಟ್‌ಗಳು ಮಾಹಿತಿ ನೀಡಿದ್ದ ಕಾರಣ, ವಿಮಾನ ಮುಂಬೈನಲ್ಲಿ ಬಂದಿಳಿಯುತ್ತಿದ್ದಂತೆ ನಿಲ್ದಾಣದಲ್ಲಿ ಕಾದಿದ್ದ ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ತಂಡ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು’ ಎಂದು ತಿಳಿಸಿದೆ.
₹2.2 ಕೋಟಿ ಇನಾಮು ಹೊಂದಿದ್ದ 49 ಮಂದಿ ಸೇರಿ 66 ನಕ್ಸಲ್ ಶರಣು
ಬಸ್ತರ್: ಛತ್ತೀಸ್‌ಗಢದಲ್ಲಿ ಮಾವೋವಾದವನ್ನು ತ್ಯಜಿಸುತ್ತಿರುವವರ ಸಂಖ್ಯೆ ಏರಿಕೆ ಹಾದಿಯಲ್ಲಿದ್ದು, ಗುರುವಾರವೂ ಸಹ ರಾಜ್ಯದ 5 ಜಿಲ್ಲೆಗಳಲ್ಲಿ 66 ನಕ್ಸಲರು ಶರಣಾಗಿದ್ದಾರೆ. ಇವರಲ್ಲಿ 49 ಮಂದಿ 2.2 ಕೋಟಿ ರು. ಬಹುಮಾನ ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ 25, ದಂತೇವಾಡದಲ್ಲಿ 15, ಕಂಕೇರ್‌ನಲ್ಲಿ 13, ನಾರಾಯಣಪುರ ಜಿಲ್ಲೆಯಲ್ಲಿ 8, ಸುಕ್ಮಾ ಜಿಲ್ಲೆಯಲ್ಲಿ ಐವರು ಶರಣಾಗಿದ್ದಾರೆ. ಈ ಪೈಕಿ 27 ಮಹಿಳೆಯರಿದ್ದಾರೆ. ನಕ್ಸಲ್‌ವಾದವನ್ನು ಬಿಟ್ಟು ಪುನರ್ವಸತಿಯಲ್ಲಿ ನಂಬಿಕೆ ಇಟ್ಟು ತಮ್ಮ ಆಯುಧಗಳನ್ನು ತ್ಯಜಿಸಿ ಮುಖ್ಯ ಭೂಮಿಗೆ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿನ ಶೇ.95ರಷ್ಟು ಮನೆಗಳಿಗೆ ಶೌಚಾಲಯ: ಸೋಮಣ್ಣ
ನವದೆಹಲಿ: ದೇಶದ ಗ್ರಾಮೀಣ ಭಾಗದಲ್ಲಿನ ಶೇ.95.1ರಷ್ಟು ಮನೆಗಳಿಗೆ ಶೌಚಾಲಯ ವ್ಯವಸ್ಥೆಯಿದೆ ಎಂದು ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ. ಲೋಕಸಭೆಯಲ್ಲಿ ಉತ್ತರಿಸಿದ ಸಚಿವರು, ‘92.7ರಷ್ಟು ಮನೆಗಳಲ್ಲಿ ಸಾವಯವ ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಶೇ.78ರಷ್ಟು ಮನೆಗಳಲ್ಲಿ ನೀರು ಸಂಸ್ಕರಣಾ ವ್ಯವಸ್ಥೆಯಿದೆ. ಇನ್ನು ತ್ಯಾಜ್ಯ ವಿಲೇವಾರಿಯಲ್ಲಿ ಕೇವಲ 39.9ರಷ್ಟು ಮನೆಗಳು ಮಾತ್ರ ಹಸಿ, ಒಣ ಕಸ ವಿಂಗಡಿಸುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಸಿದ ಸಮೀಕ್ಷೆ ವೇಳೆ ಶೇ.76.7ರಷ್ಟು ಕಡೆಗಳಲ್ಲಿ ಶೌಚಾಲಯ ವ್ಯವಸ್ಥೆಯಿದೆ. ಸಮೀಕ್ಷೆ ನಡೆಸಿದ 437 ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಶೇ.83ರಷ್ಟು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಏರಿಂಡಿಯಾ ದುರಂತದ ಬೆನ್ನಲ್ಲೇ ಪೈಲಟ್‌ಗಳಿಂದ ಭಾರೀ ಅನಾರೋಗ್ಯ ರಜೆ
ನವದೆಹಲಿ: ಅಹಮದಾಬಾದ್ ವಿಮಾನ ದುರಂತದ 4 ದಿನಗಳ ಬಳಿಕ 100ಕ್ಕೂ ಅಧಿಕ ಪೈಲಟ್‌ಗಳು ಅನಾರೋಗ್ಯ ರಜೆ ಪಡೆದು ತೆರಳಿದ್ದಾರೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಲೋಕಸಭೆಯಲ್ಲಿ ಗುರುವಾರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, ‘ಜೂ.12ರ ದುರಂತದ ಬಳಿಕ ಏರ್ ಇಂಡಿಯಾದ ಪೈಲಟ್‌ಗಳು ಅನಾರೋಗ್ಯ ರಜೆ ಪಡೆಯುವ ಸಂಖ್ಯೆಯಲ್ಲಿ ತುಸು ಏರಿಕೆಯಾಗಿದೆ. ಜೂ.16ರಂದು 51 ಕ್ಯಾಪ್ಟನ್‌ಗಳು ಹಾಗೂ 61 ಫಸ್ಟ್ ಆಫೀಸರ್‌ಗಳು ಸೇರಿ ಒಟ್ಟು 112 ಪೈಲಟ್‌ಗಳು ಅನಾರೋಗ್ಯ ರಜೆ ಪಡೆದಿದ್ದಾರೆ’ ಎಂದು ತಿಳಿಸಿದರು.