ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಕ್ಸಿಸ್ ಬ್ಯಾಂಕ್ ತಮ್ಮ ಆನ್ಲೈನ್ ಸೇವೆಗಳನ್ನು ಉನ್ನತೀಕರಣ ಮಾಡುತ್ತಿರುವ ಕಾರಣ ಶನಿವಾರ ಅವುಗಳ ಸರ್ವರ್ ಹಾಗೂ ಆನ್ಲೈನ್ ವಹಿವಾಟುಗಳು 13 ತಾಸುಗಳ ಕಾಲ ಸ್ಥಗಿತಗೊಳ್ಳಲಿವೆ.
ಸರ್ವೀಸ್ ಅಪ್‌ಗ್ರೆಡೇಷನ್ ಹಾಗೂ ಕೋರ್ ಬ್ಯಾಂಕಿಂಗ್ ಸಿಸ್ಟಂ (ಸಿಬಿಎಸ್) ವರ್ಗಾವಣೆ ಮಾಡಿಕೊಳ್ಳುತ್ತಿರುವ ಕಾರಣ ಶನಿವಾರ ನಸುಕಿನ 3 ಗಂಟೆಯಿಂದ ಸಂಜೆ 4.30ರವರೆಗೆ ಆನ್ಲೈನ್ ಚಟುವಟಿಕೆ ಸ್ಥಗಿತವಾಗಿರಲಿದೆ.
ಯಾವ ಸೇವೆ ಇಲ್ಲ?:
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಯುಪಿಐ ಸೇವೆ ಹಾಗೂ ನೆಟ್ ಬ್ಯಾಂಕಿಂಗ್‌ಗಳು ಶನಿವಾರ ಮುಂಜಾನೆ 3ರಿಂದ 3.45ರವರೆಗೆ ಹಾಗೂ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.45ರವರೆಗೆ ಸ್ಥಗಿತವಾಗಿರಲಿವೆ. ಐಎಂಪಿಎಸ್, ಎನ್‌ಇಎಫ್‌ಟಿ, ಆರ್‌ಟಿಜಿಎಸ್ ಹಾಗೂ ಖಾತೆ ನೇರ ಹಣ ವರ್ಗಾವಣೆಗಳು ಮುಂಜಾನೆ 3ರಿಂದ ಮಧ್ಯಾಹ್ನ 12.45ರವರೆಗೆ ಇರುವುದಿಲ್ಲ. ಎಟಿಎಂ ಸೇವೆಗಳೂ ಬಾಧಿತವಾಗಲಿವೆ.
ಎಕ್ಸಿಸ್ ಬ್ಯಾಂಕ್‌ನಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ಸೇವೆ ಸ್ಥಗಿತವಾಗಲಿದ್ದು, ಭಾನುವಾರ ಬೆಳಗ್ಗೆ 9 ಗಂಟೆವರೆಗೆ ವ್ಯತ್ಯಯವಾಗಲಿದೆ.
ಸ್ಮೃತಿ ಇರಾನಿ ಬಗ್ಗೆ ಕೀಳು ಮಾತು ಬೇಡ: ರಾಹುಲ್ ಗಾಂಧಿ
ನವದೆಹಲಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಅಥವಾ ಇತರೆ ಯಾವುದೇ ನಾಯಕರ ಬಗ್ಗೆ ಕೀಳಾಗಿ ಮಾತನಾಡುವುದು ಹಾಗೂ ಅಸಹ್ಯವಾಗಿ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಾರ್ವಜನಿಕರನ್ನು ಕೋರಿದ್ದಾರೆ.ಅಮೇಠಿಯಲ್ಲಿ ಸೋತ ಹಿನ್ನೆಲೆಯಲ್ಲಿ ಇರಾನಿ ಅವರು ಗುರುವಾರ ದೆಹಲಿಯಲ್ಲಿರುವ ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದರರು. ಬಳಿಕ ಲವರು ಇರಾನಿ ಅವರ ಬಗ್ಗೆ ಕೀಳಾಗಿ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದರು.
ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ರಾಹುಲ್, ‘ಸೋಲು-ಗೆಲುವು ಜೀವನದ ಅವಿಭಾಜ್ಯ ಅಂಗಗಳು. ಸ್ಮೃತಿ ಇರಾನಿ ಅಥವಾ ಯಾವುದೇ ನಾಯಕರ ಬಗ್ಗೆ ಕೀಳಾಗಿ ಮಾತನಾಡುವುದು ಹಾಗೂ ಅವರೊಂದಿಗೆ ಅಸಹ್ಯವಾಗಿ ವರ್ತಿಸುವುದು ತಪ್ಪು. ಆದ್ದರಿಂದ ಈ ವರ್ತನೆಯನ್ನು ಇಲ್ಲಿಗೆ ನಿಲ್ಲಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ.
ಅಡುಗೆ ಸಾಮಗ್ರಿ ದರ ಹೆಚ್ಚಳ: ಚಿಲ್ಲರೆ ಹಣದುಬ್ಬರ ಶೇ.5.08ಕ್ಕೆ ಏರಿಕೆ
ನವದೆಹಲಿ: ಅಡುಗೆ ಸಾಮಗ್ರಿಗಳು ದುಬಾರಿಯಾದ ಕಾರಣ ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.08ರಷ್ಟು ಏರಿಕೆಯಾಗಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರ ಹೇಳಿದೆ. ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ 2024ರ ಮೇನಲ್ಲಿ ಶೇ.4.8ರಷ್ಟಿದ್ದು, 2023ರ ಜೂನ್‌ನಲ್ಲಿ ಶೇ.4.87ರಷ್ಟಿತ್ತು. ಈಗ ಇದು ಕೊಂಚ ಏರಿಕೆ ಕಂಡಿದೆ.ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದ ವರದಿಯ ಪ್ರಕಾರ ಮೇ ತಿಂಗಳಲ್ಲಿ ಶೇ.8.69ರಷ್ಟಿದ್ದ ಆಹಾರ ಹಣದುಬ್ಬರ ಜೂನ್‌ನಲ್ಲಿ ಶೇ.9.36 ತಲುಪಿದೆ. ಸರ್ಕಾರವು ಹಣದುಬ್ಬರ ಶೇ.4ರಿಂದ ಶೇ.6ರ ಮಧ್ಯೆ ಇರುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ನಿರ್ದೇಶಿಸಿತ್ತು.