ಅಯೋಧ್ಯಾ ನಗರಿಗೇ ಹೊಸ ರೂಪ!

KannadaprabhaNewsNetwork | Updated : Jan 09 2024, 11:47 AM IST

ಸಾರಾಂಶ

50000 ಕೋಟಿ ರು. ವೆಚ್ಚದಲ್ಲಿ ಅಯೋಧ್ಯೆ ನಗರದಲ್ಲಿ ಹಲವು ಯೋಜನೆ ರೂಪಿಸಿದ್ದು, ವಿಸ್ತಾರವಾದ ರಸ್ತೆ, ಏರ್ಪೋರ್ಟ್, ರೈಲು ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಎಲ್ಲೆಡೆ ವಿಶಾಲವಾದ ಪಾರ್ಕಿಂಗ್, ವಸ್ತು ಸಂಗ್ರಹಾಲಯ, ಉತ್ತಮ ಒಳಚರಂಡಿ ವ್ಯವಸ್ಥೆ, ಏರೋ ಸಿಟಿ ನಿರ್ಮಾಣ ಮಾಡಲಾಗುತ್ತಿದೆ.

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪವಿತ್ರ ರಾಮಮಂದಿರ ನಿರ್ಮಾಣದ ಜೊತೆಗೆ ಇಡೀ ಅಯೋಧ್ಯೆಗೆ ಹೊಸ ರೂಪ ನೀಡಲಾಗಿದೆ. ಇದಕ್ಕಾಗಿ 50 ಸಾವಿರ ಕೋಟಿ ರು. ವೆಚ್ಚ ಮಾಡಲಾಗುತ್ತಿದ್ದು, ಇಡೀ ನಗರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಅಯೋಧ್ಯೆಯಲ್ಲಿ ಸುಸಜ್ಜಿತ ರೈಲು ನಿಲ್ದಾಣ, ಅತ್ಯಾಧುನಿಕ ವಿಮಾನ ನಿಲ್ದಾಣ, ಅಗಲವಾದ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. 

ಇಡೀ ನಗರದಲ್ಲಿ ಹೊಸ ಹೋಟೆಲ್ಗಳು, ಮನೆಗಳು, ವಸ್ತುಸಂಗ್ರಹಾಲಯ ಕಟ್ಟಲಾಗುತ್ತಿದೆ. ಸಾವಿರಾರು ಕೋಟಿ ರು. ವೆಚ್ಚ ಮಾಡಿ ಇಡೀ ನಗರಕ್ಕೆ ಹೊಸ ರೂಪ ನೀಡಲಾಗಿದೆ. ಅಯೋಧ್ಯೆ ನಗರ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳೇನು ಎಂಬುದರ ಮಾಹಿತಿ ಇಲ್ಲಿದೆ.

 ಸರಯೂ ನದಿ ನಡುವೆ ರಾಮಪಥ ನಿರ್ಮಾಣವೆಚ್ಚ: 850 ಕೋಟಿ ರು.

ಇದು ಲಖನೌ, ಅಯೋಧ್ಯೆ ಮತ್ತು ಗೋರಖ್ಪುರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಿಂದ ರಾಮಮಂದಿರ ಹಾಗೂ ಸರಯೂ ನದಿ ತಟವನ್ನು ಸಂಪರ್ಕಿಸುವ ಮಾರ್ಗವಾಗಿದ್ದು, ಸುಮಾರು 13 ಕಿ.ಮೀ.ನಷ್ಟು ಉದ್ದವಾಗಿದೆ. ಇದರ ಮೊದಲ ಹಂತದ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ.

ಅಯೋಧ್ಯೆ ತಲುಪಲು ಸುಂದರ ರಸ್ತೆಗಳ ನಿರ್ಮಾಣವೆಚ್ಚ: 10 ಸಾವಿರ ಕೋಟಿ ರು.

ಅಯೋಧ್ಯೆಗೆ ಸುತ್ತಮುತ್ತಲ ಜಿಲ್ಲೆಗಳಿಂದ ಸಂಪರ್ಕ ಕಲ್ಪಿಸಲು ಸುಸಜ್ಜಿತ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದು, ಎಲ್ಲಾ ದಿಕ್ಕಿನಿಂದಲೂ ಜನ ಅಯೋಧ್ಯೆ ತಲುಪಲು ಇವು ಸಹಕಾರಿಯಾಗಲಿವೆ.

ಭಕ್ತರ ಸ್ವಾಗತಿಸಲು ಅತ್ಯಾಧುನಿಕ ರೈಲ್ವೆ ನಿಲ್ದಾಣ ನಿರ್ಮಾಣವೆಚ್ಚ: 240 ಕೋಟಿ ರು.

ಹೊಸ ವಿಮಾನ ನಿಲ್ದಾಣದ ಜೊತೆಜೊತೆಗೇ ವಿಮಾನ ನಿಲ್ದಾಣದ ಮಾದರಿಯಲ್ಲೇ ರೈಲ್ವೆ ನಿಲ್ದಾಣವನ್ನು ಉನ್ನತೀಕರಿಸಲಾಗಿದೆ. ನಿಲ್ದಾಣವನ್ನು 3 ಹಂತದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಇಲ್ಲಿ 6 ರೈಲು ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ವಿವಿಧ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಇಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. 

ರಾಮನ ಹೆಸರಲ್ಲೇ ವಿಮಾನ ನಿಲ್ದಾಣ ನಿರ್ಮಾಣವೆಚ್ಚ: 1362 ಕೋಟಿ ರು.

ಮರ್ಯಾದಾ ಪುರುಷೋತ್ತಮ ಶ್ರೀರಾಮ ಹೆಸರಿನಲ್ಲಿ ಇಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಸುಮಾರು 821 ಎಕರೆ ಪ್ರದೇಶದಲ್ಲಿ 3 ವರ್ಷದಲ್ಲಿ ಇದರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. 2024ರ ಡಿಸೆಂಬರ್ನಿಂದ ವಾಣಿಜ್ಯ ವಿಮಾನ ಹಾರಾಟ ಆರಂಭವಾಗಬಹುದು ಎನ್ನಲಾಗಿದೆ.ಸರಯೂ ನದಿ 

ಸೌಂದರ್ಯ ಸವಿಯಲು ಬಂಧಾ ರಸ್ತೆ ನಿರ್ಮಾಣವೆಚ್ಚ: 44 ಕೋಟಿ ರು.

ಇದು ಸರಯೂ ನದಿ ದಂಡೆಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯಾಗಿದ್ದು, ಗುಪ್ತರ್ ಘಾಟ್ನಿಂದ ರಾಜ್ಘಾಟ್ವರೆಗೆ 4.5 ಕಿ.ಮೀ. ಉದ್ದ ರಸ್ತೆ ನಿರ್ಮಾಣ ಮಾಡಲಾಗಿದೆ. ಇದು ಸರಯೂ ನದಿಯ ಸೌಂದರ್ಯವನ್ನು ಪ್ರಯಾಣಿಕರಿಗೆ ಉಣಬಡಿಸಲಿದೆ.

ಪ್ರವಾಸಿಗರ ಸ್ವಾಗತಕ್ಕೆ ಗ್ರೀನ್ಫೀಲ್ಡ್ ಟೌನ್ಶಿಪ್ ನಿರ್ಮಾಣವೆಚ್ಚ: 3000 ಕೋಟಿ ರು.

ಇದು ಟೌನ್ಶಿಪ್ಪನ್ನು ಲಖನೌ ಮತ್ತು ಗೋರಖ್ಪುರ ಹೆದ್ದಾರಿಯ ಪಕ್ಕದಲ್ಲಿ 1407 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಎಲ್ಲಾ ರೀತಿಯ ವಾಣಿಜ್ಯ, ವಸತಿ, ಹೋಟೆಲ್, ಆಶ್ರಮ, ರೆಸಾರ್ಟ್ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಮೊದಲ ಹಂತಕ್ಕೆ ಇದೀಗ ಚಾಲನೆ ನೀಡಲಾಗಿದೆ.

ನಗರದಲ್ಲಿ ಸ್ವಚ್ಛತೆ ಕಾಪಾಡಲು ಒಳಚರಂಡಿ ವ್ಯವಸ್ಥೆ ನಿರ್ಮಾಣವೆಚ್ಚ:  245 ಕೋಟಿ ರು.

ನಗರದ ಸ್ವಚ್ಚತೆಗಾಗಿ ಸುಮಾರು 133.5 ಕಿ.ಮೀ. ಉದ್ದದ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿನ 20 ಸಾವಿರ ಮನೆಗಳು ಸುಸಜ್ಜಿತ ಒಳಚರಂಡಿ ವ್ಯವಸ್ಥೆಯನ್ನು ಹೊಂದಲಿದ್ದು, ಈ ಯೋಜನೆ ಭಾಗಶಃ ಸಂಪೂರ್ಣವಾಗಿದೆ.

ವಾಹನ ನಿರ್ವಹಣೆಗೆ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣವೆಚ್ಚ: 155 ಕೋಟಿ ರು.ಒಟ್ಟು 4 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರತಿಯೊಂದರಲ್ಲೂ 700 ವಾಹನಗಳನ್ನು ನಿಲ್ಲಿಸಲು ಸೌಲಭ್ಯವಿರಲಿದ್ದು, ಈಗಾಗಲೇ 3 ವ್ಯವಸ್ಥೆಗಳು ಮುಕ್ತಾಯವಾಗಿದ್ದು, 4ನೇ ವ್ಯವಸ್ಥೆ ಅಂತಿಮ ಹಂತದಲ್ಲಿದೆ.

50 ಎಕರೆ ಪ್ರದೇಶದಲ್ಲಿ ವಸ್ತುಸಂಗ್ರಹಾಲಯ: ಸರಯೂ ನದಿ ಪಕ್ಕದಲ್ಲಿನ 50 ಎಕರೆ ಪ್ರದೇಶದಲ್ಲಿ ಇದನ್ನು ನಿರ್ಮಾಣ ಮಾಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಭಾರತದ ಪ್ರಮುಖ ದೇವಸ್ಥಾನಗಳ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.

7 ನದಿ ಪ್ರತಿನಿಧಿಸುವ ನೀರಿನ ಕಾರಂಜಿ ನಿರ್ಮಾಣವೆಚ್ಚ: 150 ಕೋಟಿ ರು.

ಇದೊಂದು ಉದ್ಯಾನವನವಾಗಿದ್ದು, ಇಲ್ಲಿ 7 ದಳಗಳ ಕಮಲವನ್ನು ಹೊಂದಿರುವ ಕಾರಂಜಿಯನ್ನು ನಿರ್ಮಾಣ ಮಾಡಲಾಗುತ್ತದೆ. ಕಮಲದ 7 ದಳಗಳು ದೇಶದ ಪ್ರಮುಖ 7 ನದಿಗಳನ್ನು ಪ್ರತಿನಿಧಿಸುತ್ತದೆ. ಇದರ ನಿರ್ಮಾಣಕ್ಕಾಗಿ ಟೆಂಡರ್ ಕರೆಯಲಾಗಿದೆ.

ಹೋಟೆಲ್, ಮದುವೆ ಹಾಲ್, ಚಿಕಿತ್ಸೆಯ ಏರೋಸಿಟಿ ನಿರ್ಮಾಣವೆಚ್ಚ: 400 ಕೋಟಿ ರು.

ಅಯೋಧ್ಯೆ ವಿಮಾನ ನಿಲ್ದಾಣದ ಸಮೀಪದಲ್ಲಿ 150 ಎಕರೆ ಪ್ರದೇಶದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇಲ್ಲಿ ಹೋಟೆಲ್ ಕಾಂಪ್ಲೆಕ್ಸ್ಗಳು, ವಿವಾಹ ಮಂಟಪ ಮತ್ತು ಆಯುರ್ವೇದ ಸಿಟಿಯನ್ನು ನಿರ್ಮಾಣ ಮಾಡಲಾಗುತ್ತದೆ. ಇದರ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ.

ರಾಮಾಯಣದ ಕಥೆ ಹೇಳುವ ಪಾರಂಪರಿಕ ಪಥ ನಿರ್ಮಾಣವೆಚ್ಚ: 9.6 ಕೋಟಿ ರು.

ಇದೊಂದು ಪಾರಂಪರಿಕ ರಸ್ತೆ ಮಾರ್ಗವಾಗಿದ್ದು, ಇದರ 2 ಬದಿಯಲ್ಲಿ 180 ಗೋಡೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇವುಗಳ ಮೇಲೆ ರಾಮಾಯಣದ ಭಿತ್ತಿಚಿತ್ರಗಳು, ತೈಲಚಿತ್ರಗಳನ್ನು ರಚನೆ ಮಾಡಲಾಗುತ್ತಿದೆ. ಇದು ಮುಂದಿನ 3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಸರಯೂ ನದಿ ದಡದಲ್ಲಿ ಲೇಸರ್ ಶೋಗೆ ವೆಚ್ಚ: 24 ಕೋಟಿ ರು.

ಇದನ್ನು ಸರಯೂ ನದಿ ದಂಡೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ಇಲ್ಲಿ ಪೌರಾಣಿಕ ಮಹತ್ವ ಹೊಂದಿರುವ ವಿಷಯಗಳ ಕುರಿತಾದ ನಿರ್ಮಾಣಗಳನ್ನು ಮಾಡಲಾಗಿದೆ. ಇಲ್ಲಿ ಪ್ರತಿದಿನ ಲೇಸರ್ ಶೋ ನಡೆಸಲಾಗುತ್ತದೆ. ಇದರ ಕಾಮಗಾರಿ ಪೂರ್ಣಗೊಂಡಿದೆ.

ಟೆಂಟ್ ಸಿಟಿ: ಪ್ರವಾಸಿಗರಿಗೆ ಉಳಿದುಕೊಳ್ಳಲು ಐಶಾರಾಮಿ ಮತ್ತು ಕೈಗೆಟುಕುವ ದರದಲ್ಲಿ ವಸತಿ ಸೌಲಭ್ಯವನ್ನು ಒದಗಿಸಲು ಹಲವು ಪ್ರದೇಶಗಳಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತದೆ. ಪ್ರಸ್ತುತ 6 ಪ್ರದೇಶಗಳಲ್ಲಿ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ.

ಅಯೋಧ್ಯಾ ಹಾತ್: ಇದು ಸರಯೂ ನದಿ ದಂಡೆಯಲ್ಲಿ ವಿವಿಧ ತಿನಿಸುಗಳನ್ನು ಒದಗಿಸುವ ಯೋಜನೆಯಾಗಿದ್ದು, ಇಲ್ಲಿ ಅಂಗಡಿಗಳು ಮತ್ತು ತಳ್ಳುಗಾಡಿಗಳನ್ನು ಸ್ಥಾಪಿಸಲಾಗುತ್ತದೆ. ಅಲ್ಲದೇ ಶೂನ್ಯ ತ್ಯಾಜ್ಯ ಉತ್ಪಾದನೆಯಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ.

ಸಂಧ್ಯಾ ಸರೋವರ: ಇದು ತೆರೆದ ಫುಡ್ಜೋನ್ ಆಗಿದ್ದು, ವಿವಿಧ ರೆಸ್ಟೋರೆಂಟ್ಗಳು, ಆಹಾರ ಮಳಿಗೆಗಳು, 3 ಲಗೂನ್ಗಳು, ಬೋಟಿಂಗ್, ಜಿಪ್ಲೈನ್ ಸೌಲಭ್ಯಗಳನ್ನು ಹೊಂದಿರಲಿದೆ. ಇದರ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ.

ಮೇಣದ ವಸ್ತುಸಂಗ್ರಹಾಲಯ: ಇದನ್ನು ಸುಮಾರು 2 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಇದರಲ್ಲಿ ರಾಮಾಯಣದ ಪಾತ್ರಗಳ ಮೇಣದ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅಲ್ಲದೇ ಪ್ರಮುಖ ವ್ಯಕ್ತಿಗಳ ಪ್ರತಿಮೆಗಳು ಇರಲಿವೆ. ನಿರ್ಮಾಣಕ್ಕೆ ಆದೇಶ ನೀಡಲಾಗಿದೆ.

ಪಂಚವಟಿ ದ್ವೀಪ: ಸರಯೂ ನದಿಯಲ್ಲಿರುವ ದ್ವೀಪದಲ್ಲಿ ಇದನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದ್ದು, ಖಾಸಗಿ ಸಹಭಾಗಿತ್ವದೊಂದಿಗೆ ಇದನ್ನು ನಿರ್ಮಿಸಲಾಗುತ್ತದೆ. ಇದಕ್ಕಾಗಿ ಅನುಮತಿಗಾಗಿ ಕಾಯಲಾಗುತ್ತಿದೆ.

Share this article