70 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರು. ಆರೋಗ್ಯ ವಿಮೆ! ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ

KannadaprabhaNewsNetwork |  
Published : Sep 12, 2024, 01:49 AM ISTUpdated : Sep 12, 2024, 05:16 AM IST
ಆಯುಷ್ಮಾನ್‌ | Kannada Prabha

ಸಾರಾಂಶ

70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಆಯುಷ್ಮಾನ್ ಭಾರತ್ ವಿಮಾ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರಿಗೆ ಆರ್ಥಿಕ ಹೊರೆಯಿಂದ ಮುಕ್ತಿ ನೀಡಲಾಗುವುದು.

ನವದೆಹಲಿ: ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಯೋಜನೆ ಎಂಬ ಹಿರಿಮೆ ಹೊಂದಿರುವ ಆಯುಷ್ಮಾನ್‌ ಭಾರತ್‌ ವಿಮಾ ಯೋಜನೆಯನ್ನು 70 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲಾ ವಯೋಮಿತಿಯವರೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಯೋಮಿತಿಯ ಎಲ್ಲಾ ನಾಗರಿಕರಿಗೂ ಇನ್ನು ಮುಂದೆ 5 ಲಕ್ಷ ರು.ವರೆಗಿನ ಆರೋಗ್ಯ ವಿಮೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇದರೊಂದಿಗೆ ಕಳೆದ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಪ್ರಮುಖ ಭರವಸೆಯೊಂದನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪೂರೈಸಿದಂತೆ ಆಗಿದೆ. ಜೊತೆಗೆ 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರಿಗೆ ದೊಡ್ಡ ಆರ್ಥಿಕ ಹೊರೆಯನ್ನು ನಿವಾರಿಸುವ ಬಹುದೊಡ್ಡ ಕೊಡುಗೆಯನ್ನು ಸರ್ಕಾರ ಹಿರಿಯರ ಸಮುದಾಯಕ್ಕೆ ನೀಡಿದಂತಾಗಿದೆ.

ಭರ್ಜರಿ ಕೊಡುಗೆ:

ಹಾಲಿ ಜಾರಿಯಲ್ಲಿದ್ದ ಆಯುಷ್ಮಾನ್‌ ಭಾರತ್ ವಿಮಾ ಯೋಜನೆ 16-59ರ ವಯೋಮಿತಿವರೆಗೆ ಮಾತ್ರ (ಕೆಲವೆಡೆ ವಯೋಮಿತಿ ವಿನಾಯ್ತಿ ಇದೆ) ಸೀಮಿತವಾಗಿತ್ತು. ಬಡವರಿಗೆ ಮಾತ್ರ ಲಭ್ಯವಿತ್ತು. ಜೊತೆಗೆ ಇಡೀ ಕುಟುಂಬಕ್ಕೆ ಸೇರಿ ವಾರ್ಷಿಕ 5 ಲಕ್ಷ ರು. ವಿಮೆ ನೀಡಲಾಗುತ್ತಿತ್ತು. ಆದರೆ ಇದೀಗ ಯೋಜನೆಯನ್ನು 70 ವರ್ಷದ ತುಂಬಿದ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲರಿಗೂ ವಿಸ್ತರಿಸಲಾಗಿದೆ. ಜೊತೆಗೆ ಇದಕ್ಕೆ ಫಲಾನುಭವಿಗಳಿಗೆ ಯಾವುದೇ ಆದಾಯ ಮಿತಿಯನ್ನು ನಿಗದಿ ಮಾಡಿಲ್ಲ. ಹೀಗಾಗಿ ದೇಶದ 4.5 ಕೋಟಿ ಕುಟುಂಬಗಳ 6 ಕೋಟಿ ಜನರು ವಾರ್ಷಿಕ 5 ಲಕ್ಷ ರು. ಆರೋಗ್ಯ ವಿಮೆ ಯೋಜನೆಯ ಲಾಭ ಪಡೆಯಬಹುದಾಗಿದೆ.

ಈ ಯೋಜನೆ ಫಲಾನುಭವಿಗಳಿಗೆ ವಿಶೇಷ ಕಾರ್ಡ್‌ ನೀಡಲಾಗುವುದು. ಮೊದಲ ವರ್ಷ ಈ ಯೋಜನೆಗಾಗಿ 3437 ಕೋಟಿ ರು. ವಿನಿಯೋಗಿಸಲಾಗುವುದು ಎಂದು ಸಂಪುಟ ಸಭೆಯ ಬಳಿಕ ಸಚಿವ ಅಶ್ವಿನ್‌ ವೈಷ್ಣವ್‌ ಮಾಹಿತಿ ನೀಡಿದರು.

ಹಿರಿಯರಿಗೆ ಆಯುಷ್ಮಾನ್‌ ಲಾಭ ಹೇಗೆ?

ಹಾಲಿ ಆಯುಷ್ಮಾನ್‌ ಭಾರತ್‌ ವಿಮಾ ಯೋಜನೆಗೆ ಒಳಪಟ್ಟವರು ಕೂಡಾ ಈ ಯೋಜನೆ ಲಾಭ ಪಡೆಯಬಹುದು.

ಹೀಗೆ ಲಾಭ ಪಡೆದವರಿಗೆ ಹೊಸ ಯೋಜನೆಯ 5 ಲಕ್ಷದ ವಿಮೆ ಜೊತೆಗೆ ಹಳೆ ವಿಮೆಯ 5 ಲಕ್ಷದ ಲಾಭವೂ ಲಭ್ಯ

ಒಂದು ಕುಟುಂಬದಲ್ಲಿ 70 ವರ್ಷ ಮೇಲ್ಪಟ್ಟ ಇಬ್ಬರು ಸದಸ್ಯರು ಇದ್ದರೆ, ಅವರು 5 ಲಕ್ಷ ರು.ವಿಮೆ ಹಂಚಿಕೊಳ್ಳಬೇಕು

ಇತರೆ ಸರ್ಕಾರಿ ವಿಮೆ ಯೋಜನೆ ವ್ಯಾಪ್ತಿಗೆ ಒಳಪಟ್ಟವರು ಅದನ್ನು ಉಳಿಸಿಕೊಳ್ಳಬಹುದು/ ಹೊಸತು ಪಡೆಯಬಹುದು

ಖಾಸಗಿ ವಿಮಾ ಸೌಲಭ್ಯ ಪಡೆದುಕೊಂಡವರು ಕೂಡಾ ಈ ಹೊಸ ಯೋಜನೆಯಲ್ಲಿ ಭಾಗಿಯಾಗಬಹುದು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

SIR ವೇಳೆ ಕೈಬಿಟ್ಟ ಮತದಾರರ ಹೆಸರು ಸೇರ್ಪಡೆಗೆ ಅಭಿಯಾನ
ಇರಾನ್‌ ಕೈವಾಡ ಸಾಬೀತಾದ್ರೆ ತಕ್ಕ ಶಾಸ್ತಿ : ಟ್ರಂಪ್‌