ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಶೇಖ್‌ ಹಸೀನಾ, ಹಲವು ಮುಖಂಡರ ಮನೆಗಳ ಮೇಲೆ

KannadaprabhaNewsNetwork |  
Published : Feb 06, 2025, 11:45 PM ISTUpdated : Feb 07, 2025, 05:08 AM IST
ಬಾಂಗ್ಲಾ | Kannada Prabha

ಸಾರಾಂಶ

ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿಗೆ ಕಾರಣವಾಗಿ, ಕೆಲ ದಿನಗಳಿಂದ ತಣ್ಣಗಾಗಿದ್ದ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ.

ಢಾಕಾ: ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿಗೆ ಕಾರಣವಾಗಿ, ಕೆಲ ದಿನಗಳಿಂದ ತಣ್ಣಗಾಗಿದ್ದ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಬಾಂಗ್ಲಾದೇಶ ಸಂಸ್ಥಾಪಕ ಶೇಖ್‌ ಮುಜಿಬುರ್‌ ರೆಹಮಾನ್‌ ಮತ್ತು ಮಾಜಿ ಪ್ರಧಾನಿ ಶೇಖ್‌ ಹಸೀನಾ, ಅವಾಮಿ ಲೀಗ್‌ ಪಕ್ಷದ ಹಲವು ಮುಖಂಡರ ಮನೆಗಳ ಮೇಲೆ ಬುಧವಾರ ರಾತ್ರಿಯಿಂದ ಪ್ರತಿಭಟನಾಕಾರರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ.

ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್‌ ಹಸೀನಾ ತಮ್ಮ ಪಕ್ಷದ ಕಾರ್ಯಕರ್ತರ ಜತೆಗೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡುವುದನ್ನು ಖಂಡಿಸಿ ಬೀದಿಗಿಳಿದ ಪ್ರತಿಭಟನಾಕಾರರು, ಢಾಕಾದ ದನ್‌ಮೋಂಡಿ ಪ್ರದೇಶದಲ್ಲಿರುವ ಶೇಖ್‌ ಹಸೀನಾರ ಮನೆಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ಮುಜಿಬುರ್‌ ರೆಹಮಾನ್‌ ಅವರ ಮನೆ(ಈಗ ಸ್ಮಾರಕ)ಗೆ ಬುಲ್ಡೋಜರ್‌ ಜತೆಗೆ ತೆರಳಿ ನೆಲಸಮಕ್ಕೆ ಯತ್ನಿಸಿದ್ದಾರೆ.

ಢಾಕಾ ಮಾತ್ರವಲ್ಲದೆ ಚಿತ್ತಗಾಂಗ್‌ ಸೇರಿ ಹಲವೆಡೆ ಅವಾಮಿ ಲೀಗ್‌ನ ಹಲವು ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ಹಾನಿ ಮಾಡಿದ್ದಾರೆ. ಹಲವೆಡೆ ಮುಜಿಬುರ್‌ ರೆಹಮಾನ್‌ ಪ್ರತಿಮೆಗೆ ಹಾನಿ ಮಾಡಿದ್ದಾರೆ. ಈ ವೇಳೆ ಭಾರತ ಮತ್ತು ಶೇಖ್‌ ಹಸೀನಾ ವಿರುದ್ಧ ಘೋಷಣೆ ಕೂಗಿದ್ದಾರೆ.

ಶೇಖ್‌ ಹಸೀನಾ ಅವರು ಫೇಸ್‌ಬುಕ್‌ ಲೈವ್‌ ಮೂಲಕ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆಂಬ ಸುದ್ದಿ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರು ಬುಲ್ಡೋಜರ್‌ ಮೆರವಣಿಗೆಗೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ.

ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶೇಖ್ ಹಸೀನಾ, ಅವರು ಕಟ್ಟಡಗಳನ್ನು ನಾಶ ಮಾಡಬಹುದು, ಆದರೆ ಇತಿಹಾಸವನ್ನಲ್ಲ. ಇತಿಹಾಸ ತನ್ನ ಪ್ರತೀಕಾರವನ್ನು ತೀರಿಸಿಕೊಳ್ಳಲಿದೆ ಎಂಬುದನ್ನು ಅವರು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.

1971ರ ವಿಮೋಚನಾ ಯುದ್ಧದ ಸಂದರ್ಭದಲ್ಲೂ ಪಾಕ್‌ ಸೇನೆ ಮುಜಿಬುರ್‌ ರೆಹಮಾನ್‌ ಅವರ ಮನೆಯನ್ನು ಲೂಟಿ ಮಾಡಿತ್ತು. ಆದರೆ ಮನೆಗೆ ಬೆಂಕಿ ಹಚ್ಚುವ ಅಥವಾ ನಾಶ ಮಾಡುವ ಕೆಲಸ ಮಾಡಿರಲಿಲ್ಲ. ಆದರೆ ಇದೀಗ ಮನೆ ನೆಲಸಮ ಮಾಡಿದ್ದಾರೆ. ಆ ಮನೆ ಏನು ಅಪರಾಧ ಮಾಡಿದೆ. ಆ ಮನೆ ಬಗ್ಗೆ ಅವರಿಗೆ ಯಾಕೆ ಅಷ್ಟು ಹೆದರಿಕೆ? ನಾನು ದೇಶದ ಜನರಲ್ಲಿ ನ್ಯಾಯ ಕೇಳುತ್ತಿದ್ದೇನೆ. ನಾನು ನಿಮಗೆ ಏನೂ ಮಾಡಿಲ್ಲವೇ? ಎಂದು ಫೇಸ್‌ಬುಕ್‌ ಲೈವ್‌ನಲ್ಲಿ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.

PREV

Recommended Stories

30 ಲೀ. ಎದೆಹಾಲು ದಾನಮಾಡಿ ಬ್ಯಾಡ್ಮಿಂಟನ್ತಾರೆ ಜ್ವಾಲಾ ಸಾರ್ಥಕತೆ
ವಿಶ್ವದ ಅತಿ ದೊಡ್ಡ ಡ್ಯಾಂ ಕಟ್ಟುವ ಚೀನಾಕ್ಕೆ ಭಾರತ ಸಡ್ಡು