ಮಂದಿರ ಉದ್ಘಾಟನೆ ವೇಳೆ ಮುಸ್ಲಿಮರು ಪ್ರಯಾಣಿಸಬೇಡಿ: ಸಂಸದ ಬದ್ರುದ್ದೀನ್ ಅಜ್ಮಲ್

KannadaprabhaNewsNetwork |  
Published : Jan 08, 2024, 01:45 AM ISTUpdated : Jan 08, 2024, 12:09 PM IST
ಪ್ರಯಾಣ | Kannada Prabha

ಸಾರಾಂಶ

ನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜ.20ರಿಂದ 25ರವರೆಗೆ ಮುಸ್ಲಿಮರು ಯಾರೂ ಪ್ರಯಾಣಿಸಬೇಡಿ ಮತ್ತು ಬಿಜೆಪಿ ನಮ್ಮ ದೊಡ್ಡ ಶತ್ರುವಾಗಿದೆ ಎಂದು ಎಐಯುಡಿಎಫ್ ಮುಖ್ಯಸ್ಥ ಮತ್ತು ಸಂಸದ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗುವಾಹಟಿ: ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜ.20ರಿಂದ 25ರವರೆಗೆ ಮುಸ್ಲಿಮರು ಯಾರೂ ಪ್ರಯಾಣಿಸಬೇಡಿ ಮತ್ತು ಬಿಜೆಪಿ ನಮ್ಮ ದೊಡ್ಡ ಶತ್ರುವಾಗಿದೆ ಎಂದು ಎಐಯುಡಿಎಫ್ ಮುಖ್ಯಸ್ಥ ಮತ್ತು ಸಂಸದ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶನಿವಾರ ಅಸ್ಸಾಂನ ಬಾರ್‌ಪೇಟಾದಲ್ಲಿ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಅವರು ‘ಜ.22ರಂದು ಅಯೋಧ್ಯೆ ಮಂದಿರ ಉದ್ಘಾಟನೆ ನಡೆಯಲಿದೆ. ಆಗ ಕಾರು, ಬೈಕ್‌, ವಿಮಾನ, ರೈಲು ಮತ್ತು ಬಸ್‌ಗಳಲ್ಲಿ ಲಕ್ಷ ಲಕ್ಷ ಜನರು ಅಯೋಧ್ಯೆಗೆ ತೆರಳುತ್ತಾರೆ. 

ಈ ವೇಳೆ ಅಹಿತಕರ ಘಟನೆ ನಡೆಯಬಹುದು. ಹೀಗಾಗಿ ನಮ್ಮ ಮುಸ್ಲಿಂ ಸಹೋದರ ಸಹೋದರಿಯರು ಜ.20 ರಿಂದ 25ರವರೆಗೆ ಪ್ರಯಾಣಿಸಬಾರದು. ಮನೆಯಲ್ಲಿಯೇ ಇದ್ದು ಅಲ್ಲಾನಲ್ಲಿ ಪ್ರಾರ್ಥನೆ ಸಲ್ಲಿಸಿ. ಬಿಜೆಪಿಯು ನಮ್ಮ ದೊಡ್ಡ ಶತ್ರುವಾಗಿದೆ. ಅದು ಆಗ ದೊಡ್ಡ ಯೋಜನೆಗಳನ್ನು ಹೊಂದಿದ್ದು, ಆಗ ನಮ್ಮ ವಿರುದ್ಧ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಇದೆ’ ಎಂದಿದ್ದಾರೆ.

ಅಲ್ಲದೇ ಬಿಜೆಪಿಯು ‘ಮುಸ್ಲಿಮರ ಜೀವನ, ನಂಬಿಕೆ, ಪ್ರಾರ್ಥನೆ, ಮದ್ರಸಾ, ಮಸೀದಿ ಮತ್ತು ನಮ್ಮ ಸಹೋದರಿಯರು ತಾಯಂದಿರ ಪರ್ಧಾ ಪದ್ಧತಿ, ತ್ರಿವಳಿ ತಲಾಖ್‌ ಮತ್ತು ಇಸ್ಲಾಮಿಕ್‌ ಕಾನೂನುಗಳ ಶತ್ರುವಾಗಿದೆ’ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಅಕ್ರೋಶ: ಬದ್ರುದ್ದೀನ್‌ ಹೇಳಿಕೆಗೆ ಬಿಜೆಪಿ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು ‘ಬಿಜೆಪಿ ಮುಸ್ಲಿಮರನ್ನು ದ್ವೇಷಿಸುವುದಿಲ್ಲ. ನಾವು ‘ಎಲ್ಲರೊಂದಿಗೆ, ಎಲ್ಲರ ಅಭೀವೃದ್ಧಿ ಮತ್ತು ಎಲ್ಲ ವಿಶ್ವಾಸ’ ಮಂತ್ರದೊಂದಿಗೆ ಕೆಲಸ ಮಾಡುತ್ತೇವೆ. ಅಯೋಧ್ಯೆ ಭೂ ವಿವಾದ ಪ್ರಕರಣದ ಮಾಜಿ ದಾವೆದಾರ ಇಕ್ಬಾಲ್ ಅನ್ಸಾರಿ ಅವರನ್ನು ರಾಮ ಮಂದಿರದ ‘ಪ್ರತಿಷ್ಠಾಪನೆ’ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಮತ್ತು ಅವರು ಭಾಗವಹಿಸಲಿದ್ದಾರೆ. 

ಬದ್ರುದ್ದೀನ್ ಅಜ್ಮಲ್, ಓವೈಸಿಯಂತಹವರು ಸಮಾಜದಲ್ಲಿ ದ್ವೇಷವನ್ನು ಹರಡಿದರು. ಬಿಜೆಪಿ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಸ್ಲಿಂ ನಾಯಕ ಮತ್ತು ಮಾಜಿ ಸಚಿವ ಸಯ್ಯದ್‌ ಶಹನವಾಜ್ ಹುಸೇನ್ ‘ರಾಮ ಮಂದಿರ ಉದ್ಘಾಟನೆ ಸಮಾರಂಭದ ಕುರಿತು ಮುಸ್ಲಿಮರಿಂದ ಯಾವುದೇ ನಕಾರಾತ್ಮಕ ಹೇಳಿಕೆಗಳು ಇಲ್ಲ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತ ವಿಪಕ್ಷಗಳು ಶ್ರೀರಾಮನ ವಿರುದ್ಧವೂ ತಿರುಗಿ ಬಿದ್ದಿವೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ