ಬೆಂಗಳೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರು ಅಸ್ವಸ್ಥ: ಕಾಲರಾ?

ಸಾರಾಂಶ

 ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಬಿಎಂಆರ್‌ಸಿಐ) ವಿದ್ಯಾರ್ಥಿನಿಲಯದ 47 ಮಂದಿ ವಿದ್ಯಾರ್ಥಿನಿಯರು ಅತಿಸಾರ ಬೇಧಿಯಿಂದ ತೀವ್ರ ಅಸ್ವಸ್ಥರಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. 

 

ಬೆಂಗಳೂರು: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಬಿಎಂಆರ್‌ಸಿಐ) ವಿದ್ಯಾರ್ಥಿನಿಲಯದ 47 ಮಂದಿ ವಿದ್ಯಾರ್ಥಿನಿಯರು ಅತಿಸಾರ ಬೇಧಿಯಿಂದ ತೀವ್ರ ಅಸ್ವಸ್ಥರಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೇಲ್ನೋಟಕ್ಕೆ ತೀವ್ರ ಗ್ಯಾಸ್ಟ್ರೋ ಎಂಟರೈಟಿಸ್‌ ಎಂದು ವೈದ್ಯರು ದೃಢಪಡಿಸಿದ್ದು, ಕಾಲರಾ ಶಂಕೆಯಿಂದ ರೋಗಿಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಮಲ್ಲೇಶ್ವರದ ಖಾಸಗಿ ಪಿಜಿಯಲ್ಲಿನ ಯುವತಿಗೆ ಕಾಲರಾ ಇಲ್ಲದಿರುವುದು ದೃಢಪಟ್ಟ ಬೆನ್ನಲ್ಲೇ ಇಷ್ಟು ಮಂದಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯರೇ ಅತಿಸಾರ ಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿರುವುದು ತೀವ್ರ ಆತಂಕ ಉಂಟು ಮಾಡಿದೆ.

ತೀವ್ರ ಬೇಧಿ, ವಾಂತಿ ಹಾಗೂ ನಿರ್ಜಲೀಕರಣ ಸಮಸ್ಯೆಯಿಂದ 47 ಮಂದಿ ವಿದ್ಯಾರ್ಥಿನಿಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಟ್ರಾಮಾ ಕೇರ್‌ ಘಟಕದಲ್ಲಿ 28 ಮಂದಿ, ಎಚ್‌ ಬ್ಲಾಕ್‌ನಲ್ಲಿ 15 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ತೀವ್ರ ಅಸ್ವಸ್ಥರಾಗಿರುವ ನಾಲ್ಕು ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಸಾಂಕ್ರಾಮಿಕ ಅತಿಸಾರ ಅಥವಾ ಹೊಟ್ಟೆ ಜ್ವರ (ಗ್ಯಾಸ್ಟ್ರೋಎಂಟರೈಟಿಸ್‌) ಸಮಸ್ಯೆ ಎಂದು ಪ್ರಾಥಮಿಕವಾಗಿ ಗುರುತಿಸಲಾಗಿದೆ. ಆ್ಯಂಟಿಬಯೋಟಿಕ್‌, ಐವಿ ಫ್ಲ್ಯೂಯೆಡ್ಸ್ ಸೇರಿದಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಎಂಆರ್‌ಸಿಐ ಡೀನ್‌ ಹಾಗೂ ನಿರ್ದೇಶಕರಾದ ಡಾ.ಕೆ. ರಮೇಶ್‌ ಕೃಷ್ಣ ಮಾಹಿತಿ ನೀಡಿದ್ದಾರೆ.

ಕಾಲರಾ ಶಂಕೆ

ಆಹಾರ ಅಥವಾ ನೀರಿನ ಮೂಲಗಳು ಸೋಂಕಿತರ ಮಲದಿಂದ ಮಾಲಿನ್ಯಗೊಂಡು ಅಂತಹ ಕಲುಷಿತ ನೀರಿನ ಸೇವನೆಯಿಂದ ಅತಿಸಾರ ಅಥವಾ ಕಾಲರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಏಕಾಏಕಿ ಇಷ್ಟು ಮಂದಿಗೆ ಅತಿಸಾರ ಬೇಧಿ ಉಂಟಾಗಿರುವುದರಿಂದ ಕಾಲರಾ ಕಾಯಿಲೆಯ ಶಂಕೆ ವ್ಯಕ್ತಪಡಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಮಲದ ಮಾದರಿಯನ್ನು (ಸ್ಟೂಲ್‌ ಕಲ್ಚರ್‌) ಕಾಲರಾ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Share this article