ನವದೆಹಲಿ: ಬಾಂಗ್ಲಾದೇಶದಲ್ಲಿ ಗಲಭೆ ರಾಜಕೀಯ ಅಸ್ಥಿರತೆಯಿಂದಾಗಿ ಗಲಭೆಗಳು ನಡೆಯುತ್ತಿರುವ ಹೊತ್ತಲ್ಲಿಯೇ ಭಾರತದಲ್ಲಿಯೂ ಇದೇ ರೀತಿಯ ಹಿಂಸಾಚಾರ ಹಾಗೂ ಕ್ರಾಂತಿ ನಡೆಯಬಹುದು ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹಾಗೂ ಕಾಶ್ಮೀರದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನು ಸಮರ್ಥಿಸುವಂಥ ಹೇಳಿಕೆಯನ್ನು ಕಾಂಗ್ರೆಸ್ಸಿಗ ಶಶಿ ತರೂರ್ ಕೂಡ ನೀಡಿದ್ದಾರೆ. ವಿಪಕ್ಷ ನಾಯಕರ ಹೇಳಿಕೆಗೆ ಬಿಜೆಪಿ ಕಿಡಿ ಕಾರಿದೆ .
ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಖುರ್ಷಿದ್, ಕೇಂದ್ರ ಸರ್ಕಾರದ ವಿರುದ್ಧ ನಡೆದಿದ್ದ ಶಾಹೀನ್ ಬಾಗ್ ರೈತ ಪ್ರತಿಭಟನೆಯನ್ನು ಉಲ್ಲೇಖಿಸಿ, ‘ಭಾರತದಲ್ಲಿಯೂ ಈ ರೀತಿ ಹಿಂಸಾಚಾರ ನಡೆಬಹುದು. ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎಂದು ಕಾಣುತ್ತದೆ. ಆದರೆ ಒಳಗಡೆ ಬೇರೆಯದೇ ಪರಿಸ್ಥಿತಿ ಇರುತ್ತದೆ’ ಎಂದಿದ್ದಾರೆ.
ಶ್ರೀನಗರದಲ್ಲಿ ಮೆಹಬೂಬಾ ಮುಫ್ತಿ ಮಾತನಾಡಿ, ‘ಬಾಂಗ್ಲಾದೇಶದ ಘಟನೆಗಳು ಭಾರತಕ್ಕೆ ಪಾಠ. ಯುವಕರ ದಮನ ಮಾಡಕೂಡದು ಹಾಗೂ ಸರ್ವಾಧಿಕಾರ ಬಹುಕಾಲ ಬಾಳಲ್ಲ ಎಂಬ ಸಂದೇಶವನ್ನು ಬಾಂಗ್ಲಾ ರವಾನಿಸಿದೆ’ ಎಂದು ಹೇಳಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.ಖುರ್ಷಿದ್ ಹೇಳಿಕೆಗೆ ಶಶಿ ತರೂರ್ ಪ್ರತಿಕ್ರಿಯಿಸಿ, ‘ಖುರ್ಷಿದ್ ಯಾವ ಅರ್ಥದಲ್ಲಿ ಹೇಳಿಕೆ ನೀಡಿದರೋ ಗೊತ್ತಿಲ್ಲ. ಆದರೆ ಬಾಂಗ್ಲಾದೇಶವು ಪ್ರಜಾಪ್ರಭುತ್ವ ಹಾಗೂ ಮುಕ್ತ-ನ್ಯಾಯಸಮ್ಮತ ಚುನಾವಣೆಯ ದೊಡ್ಡ ಸಂದೇಶವನ್ನು ನೀಡಿದೆ’ ಎಂದಿದ್ದಾರೆ.
ಬಿಜೆಪಿ ಖಂಡನೆ: ಕಾಂಗ್ರೆಸ್‌ನ ಹಿರಿಯ ನಾಯಕನ ಹೇಳಿಕೆಗೆ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಕಿಡಿಕಾರಿದ್ದು, ‘ಈ ರೀತಿಯ ಹೇಳಿಕೆಗಳನ್ನು ನೀಡಿ ಹಿಂಸಾಚಾರವನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ಇದು ರಾಜಕೀಯ ಲಾಭಕ್ಕಾಗಿ ಸಮಸ್ಯೆಗಳನ್ನು ಬಳಸಿಕೊಳ್ಳುವ ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕನ ವಿರುದ್ಧ ರಾಹುಲ್ ಗಾಂಧಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಆಗ್ರಹಿಸಿದೆ.