ಮುಂಬೈ: ಆರ್ಥಿಕ ಸಾಲಿನ ಕೊನೆಯ ದಿನ ಮಾ.31ರ ಭಾನುವಾರ ಬ್ಯಾಂಕ್‌ಗಳು ಸಾರ್ವಜನಿಕ ವ್ಯವಹಾರಕ್ಕೆ ತೆರೆದಿರಲು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ.
ಇದರೊಂದಿಗೆ ಬ್ಯಾಂಕ್‌ಗೆ ತಿಂಗಳ ಕೊನೆಯಲ್ಲಿ ಇದ್ದ ಮೂರು ದಿನದ ಸರಣಿ ರಜೆಗೆ ಕೊಂಚ ಕಡಿವಾಣ ಬಿದ್ದಂತಾಗಿದೆ. ಸರ್ಕಾರಿ ರಸೀದಿ ಮತ್ತು ಪಾವತಿಗಳನ್ನು ಪ್ರಸ್ತುತ ಆರ್ಥಿಕ ಸಾಲಿನಲ್ಲೇ ಪೂರ್ಣಗೊಳಿಸುವ ಉದ್ದೇಶದಿಂದ ಈ ಕ್ರಮ ಜರುಗಿಸಲಾಗಿದೆ.
ಸರ್ಕಾರಿ ವ್ಯವಹಾರ ಹೊಂದಿರುವ ಬ್ಯಾಂಕ್‌ಗಳು ಮಾ.31ರಂದು ತೆರೆದಿರುವುದರ ಕುರಿತು ವ್ಯಾಪಕವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಅವರೂ ಸಹ ಸೌಲಭ್ಯವನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದಕ್ಕೂ ಮೊದಲು ಆದಾಯ ತೆರಿಗೆ ಅಧಿಕಾರಿಗಳಿಗೂ ಸಹ ರಜಾದಿನಗಳಲ್ಲೂ ಕೆಲಸ ಮಾಡುವಂತೆ ಇಲಾಖೆ ತಿಳಿಸಿತ್ತು. ಮಾ.29ರಂದು ಗುಡ್ ಫ್ರೈಡೆ ರಜೆಯಿದ್ದು, ಮಾ.30ರಂದು ನಾಲ್ಕನೇ ಶನಿವಾರ ಹಾಗೂ ಮಾ.31ರಂದು ಭಾನುವಾರ ರಜೆಯಿತ್ತು.