ಸಿರಿಯಾದ ಪದಚ್ಯುತ ಅಧ್ಯಕ್ಷ ಬಷರ್‌ ಅಲ್‌- ಅಸಾದ್‌ ಜತೆ ವಿಚ್ಛೇದನಕ್ಕೆ ಪತ್ನಿ ಆಸ್ಮಾ ಅರ್ಜಿ

KannadaprabhaNewsNetwork |  
Published : Dec 24, 2024, 12:45 AM ISTUpdated : Dec 24, 2024, 03:58 AM IST
ಅಸಾದ್‌ | Kannada Prabha

ಸಾರಾಂಶ

ಸಿರಿಯಾದ ಪದಚ್ಯುತ ಅಧ್ಯಕ್ಷ ಬಷರ್‌ ಅಲ್‌- ಅಸಾದ್‌ ಅವರ ವೈವಾಹಿಕ ಜೀವನದಲ್ಲೂ ಇದೀಗ ಬಿರುಕು ಮೂಡಿದೆ. ಅಸಾದ್‌ರ ಬ್ರಿಟಿಷ್‌ ಮೂಲದ ಪತ್ನಿ ಆಸ್ಮಾ ವಿಚ್ಛೇದನಕ್ಕೆ ಆಗ್ರಹಿಸಿದ್ದು, ಮರಳಿ ತಮ್ಮ ತವರಾದ ಬ್ರಿಟನ್‌ಗೆ ಹೋಗಿ ನೆಲೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ 

ಡಮಾಸ್ಕಸ್‌: ಸಿರಿಯಾದ ಪದಚ್ಯುತ ಅಧ್ಯಕ್ಷ ಬಷರ್‌ ಅಲ್‌- ಅಸಾದ್‌ ಅವರ ವೈವಾಹಿಕ ಜೀವನದಲ್ಲೂ ಇದೀಗ ಬಿರುಕು ಮೂಡಿದೆ. ಅಸಾದ್‌ರ ಬ್ರಿಟಿಷ್‌ ಮೂಲದ ಪತ್ನಿ ಆಸ್ಮಾ ವಿಚ್ಛೇದನಕ್ಕೆ ಆಗ್ರಹಿಸಿದ್ದು, ಮರಳಿ ತಮ್ಮ ತವರಾದ ಬ್ರಿಟನ್‌ಗೆ ಹೋಗಿ ನೆಲೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಟರ್ಕಿಶ್ ಹಾಗೂ ಅರಬ್‌ ಮಾಧ್ಯಮಗಳ ವರದಿಯನ್ನಾಧರಿಸಿ ಜೆರುಸಲೇಂ ಪೋಸ್ಟ್‌ ವರದಿ ಮಾಡಿದೆ.

ಅಸಾದ್‌ ದೇಶ ತೊರೆದು ರಷ್ಯಾದಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಅಸಾದ್‌ ನಡವಳಿಕೆ ಹಾಗೂ ಮಾಸ್ಕೋ ವಾಸದಿಂದ ಆಸ್ಮಾ ಬೇಸತ್ತಿದ್ದು, ಈ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ವಿಚ್ಛೇದನಕ್ಕಾಗಿ ಅವರು ಈಗಾಗಲೇ ರಷ್ಯಾದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ತಂದೆ- ತಾಯಿ ಸಿರಿಯಾದವರಾಗಿದ್ದರೂ ಲಂಡನ್‌ನಲ್ಲಿ ಜನಿಸಿದ ಆಸ್ಮಾ ಬ್ರಿಟನ್‌ ಹಾಗೂ ಸಿರಿಯಾದ ಪೌರತ್ವ ಹೊಂದಿದ್ದಾರೆ. ಅಸಾದ್‌ ಹಾಗೂ ಆಸ್ಮಾ 2000ರಲ್ಲಿ ವಿವಾಹವಾಗಿದ್ದು, ಈ ದಂಪತಿಗೆ 3 ಜನ ಮಕ್ಕಳಿದ್ದಾರೆ.

ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್‌ ನಕಾರ

ನವದೆಹಲಿ: ನಾಗರಿಕ ಸೇವೆ ಪರೀಕ್ಷೆಯಲ್ಲಿ ವಂಚನೆ ಮಾಡಿ ವಜಾಗೊಂಡಿದ್ದ ಪ್ರೊಬೆಷ್ನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್‌ ನಿರಾಕರಿಸಿದೆ.

ಈ ಕುರಿತು ತೀರ್ಪು ನೀಡಿದ ನ್ಯಾ। ಚಂದ್ರಧಾರಿ ಸಿಂಗ್‌, ‘ನಿರೀಕ್ಷಣಾ ಜಾಮೀನನ್ನು ನಿರಾಕರಿಸಲಾಗಿದ್ದು, ಬಂಧನದಿಂದ ಒದಗಿಸಲಾಗಿದ್ದ ಮದ್ಯಂತರ ರಕ್ಷಣೆಯನ್ನು ತೆಗೆದುಹಾಕಲಾಗಿದೆ’ ಎಂದರು. ಇದು ಸಾಂವಿಧಾನಿಕ ಹುದ್ದೆ ಹಾಗೂ ಸಮಾಜಕ್ಕೆ ಮಾಡಿದ ವಂಚನೆ ಎಂದಿರುವ ಅವರು, ಈ ಪ್ರಕರಣದಲ್ಲಿ ಸಾಕಷ್ಟು ಸಾಕ್ಷಿಗಳು ಲಭಿಸಿದ್ದು, ಆಕೆಯ ಸಂಚನ್ನು ಬಹಿರಂಗಪಡಿಸಲು ತನಿಖೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.2022ರಲ್ಲಿ ನಡೆದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಮೀಸಲಾತಿ ಪಡೆಯಲು ಪೂಜಾ ತಪ್ಪು ಮಾಹಿತಿ ನೀಡಿ, ತನ್ನನ್ನು ತಾನು ಒಬಿಸಿ ಅಭ್ಯರ್ಥಿ ಹಾಗೂ ಅಂಗವಿಕಲೆ ಎಂದು ಬಿಂಬಿಸಿಕೊಂಡಿದ್ದರು. ಜತೆಗೆ, ಅಧಿಕಾರ ದುರ್ಬಳಕೆ ಮಾಡಿದ ಆರೋಪವನ್ನೂ ಅವರು ಎದುರಿಸುತ್ತಿದ್ದಾರೆ.

ಟ್ರಂಪ್‌ರ ಎಐ ಸಲಹೆಗಾರ ಆಗಿ ಭಾರತೀಯ ಶ್ರೀರಾಂ ನೇಮಕ

ಸ್ಯಾನ್‌ ಫ್ರಾನ್ಸಿಸ್ಕೋ: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಶ್ವೇತಭವನದ ಕೃತಕ ಬುದ್ಧಿಮತ್ತೆ ಸಂಬಂಧಿತ ನೀತಿಯ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ಉದ್ಯಮಿ, ಲೇಖಕ ಶ್ರೀರಾಂ ಕೃಷ್ಣನ್‌ ಅವರನ್ನು ಭಾನುವಾರ ನೇಮಿಸಿದ್ದಾರೆ.ಈ ಮೊದಲು ಮೈಕ್ರೋಸಾಫ್ಟ್‌, ಟ್ವೀಟರ್‌, ಯಾಹೂ, ಫೇಸ್‌ಬುಕ್‌, ಸ್ನ್ಯಾಪ್‌ಗಳ ತಂಡದಲ್ಲಿ ಕೆಲಸ ಮಾಡಿರುವ ಕೃಷ್ಣನ್‌, ಇದೀಗ ಅಮೆರಿಕದ ಎಐ ಹಾಗೂ ಕ್ರಿಪ್ಟೋ ಕ್ಷೇತ್ರದಲ್ಲಿ ಡೇವಿಡ್‌ ಒ. ಸಾಕ್ಸ್‌ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ತಮ್ಮ ನೇಮಕಕ್ಕೆ ಕೃಷ್ಣನ್‌ ಹರ್ಷ ವ್ಯಕ್ತಪಡಿಸಿದ್ದು, ಭಾರತ ಮೂಲದ ಅಮೆರಿಕನ್ನರು ಕೂಡ ಸಂಭ್ರಮಿಸಿದ್ದಾರೆ.

ಪಾಕ್‌ನಲ್ಲಿ ಗಂಡನ ಬಿಟ್ಟು ಬಂದ ಸೀಮಾ ಹೈದರ್‌ ಈಗ ಗರ್ಭಿಣಿ!

ನೋಯ್ಡಾ: ಪಬ್‌ಜಿ ಗೇಮ್‌ ಮೂಲಕ ಭಾರತೀಯ ಸಚಿನ್‌ ಎಂಬಾತನ ಜತೆ ಪ್ರೇಮವಾಗಿ ಪಾಕಿಸ್ತಾನದ ಪತಿಯನ್ನು ತೊರೆದು ಉತ್ತರ ಪ್ರದೇಶದ ನೋಯ್ಡಾಗೆ ಬಂದಿದ್ದ ಸೀಮಾ ಹೈದರ್‌ ಗರ್ಭಿಣಿಯಾಗಿದ್ದಾಳೆ.ಸೀಮಾ ತಾನು ಗರ್ಭಿಣಿಯಾಗಿರುವ ಬಗ್ಗೆ ವಿಡಿಯೋ ಮಾಡಿದ್ದು, ಅದರ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ಜೊತೆಗೆ ತನ್ನ ಪತಿ ಸಚಿನ್‌ರಿಗೆ ತಾವು ತಂದೆಯಾಗುತ್ತಿರುವ ಬಗ್ಗೆ ಸಂತಸ ಹಂಚಿಕೊಳ್ಳುತ್ತಿರುವ ದೃಶ್ಯಗಳನ್ನು ಯೂಟ್ಯೂಬಲ್ಲಿ ಹಂಚಿಕೊಂಡಿದ್ದಾಳೆ.

2023ರ ಮೇನಲ್ಲಿ ಪಾಕಿಸ್ತಾನದ ತಮ್ಮ ಪತಿ ಗುಲಾಂ ಹೈದರ್‌ರನ್ನು ಬಿಟ್ಟು ಸೀಮಾ ಹೈದರ್‌ ನೇಪಾಳ ಮೂಲಕ ಭಾರತಕ್ಕೆ ಬಂದಿದ್ದಳು. ಭಾರತೀಯ ಪ್ರಿಯಕರ ಸಚಿನ್‌ರನ್ನು ವರಿಸಿ, ಕಾಠ್ಮಂಡುವಿನ ಪಶುಪತಿನಾಥ ಮಂದಿರದಲ್ಲಿ ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಳು. ತನ್ನ 4 ಮಕ್ಕಳ ಹೆಸರನ್ನು ಹಿಂದೂ ಹೆಸರಿಗೆ ಬದಲಾಯಿಸಿದ್ದಳು.

ಮಾನವ ಹಕ್ಕು ಆಯೋಗಕ್ಕೆ ನ್ಯಾ। ರಾಮಸುಬ್ರಹ್ಮಣಿಯನ್‌ ಅಧ್ಯಕ್ಷ

ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ವಿ. ರಾಮಸುಬ್ರಹ್ಮಣಿಯನ್‌ ಸೋಮವಾರ ಆಯ್ಕೆಯಾಗಿದ್ದಾರೆ.ಈ ಮೊದಲು ಆಯೋಗದ ಅಧ್ಯಕ್ಷರಾಗಿದ್ದ ನಿವೃತ್ತ ನ್ಯಾ। ಅರುಣ್‌ ಕುಮಾರ್‌ ಮಿಶ್ರಾ ಅವರ ಅಧಿಕಾರಾವಧಿ ಜೂ.1ರಂದು ಮುಕ್ತಾಯಗೊಂಡಿತ್ತು. ಇದೀಗ ಆ ಸ್ಥಾನಕ್ಕೆ ರಾಮಸುಬ್ರಹ್ಮಣಿಯನ್‌ ನೇಮಕವಾಗಿದ್ದಾರೆ.

ನ್ಯಾ। ರಾಮಸುಬ್ರಹ್ಮಣಿಯನ್‌ ಅವರು 2019ರಿಂದ 2023ರ ವರೆಗೆ ಸುಪ್ರೀಂ ಕೋರ್ಟ್‌ನ ಜಡ್ಜ್‌ ಆಗಿ ಸೇವೆ ಸಲ್ಲಿಸಿದ್ದು, ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಾಧೀಶರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ