ದೇಶದ ಶ್ರೀಮಂತ ಪಾಲಿಕೆಗೆಮೊದಲ ಬಿಜೆಪಿ ಮೇಯರ್‌?- ಮುಂಬೈ ಪಾಲಿಕೆ: ಎಕ್ಸಿಟ್‌ಪೋಲ್‌ನಲ್ಲಿ ಬಿಜೆಪಿ ಜಯ- 30 ವರ್ಷಗಳಿಂದ ಠಾಕ್ರೆ ನಿಯಂತ್ರಣದಲ್ಲಿದ್ದ ಪಾಲಿಕೆ- 227 ಸ್ಥಾನಕ್ಕೆ ನಿನ್ನೆ ಮತದಾನ । ಇಂದೇ ಫಲಿತಾಂಶ

KannadaprabhaNewsNetwork |  
Published : Jan 16, 2026, 12:45 AM IST
ಬಿಎಂಸಿ | Kannada Prabha

ಸಾರಾಂಶ

74 ಸಾವಿರ ಕೋಟಿ ರು.ಗೂ ಅಧಿಕ ಬಜೆಟ್‌ ಗಾತ್ರದಿಂದಾಗಿ ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹಿರಿಮೆ ಹೊಂದಿರುವ ಬೃಹನ್ಮುಂಬೈ ಪಾಲಿಕೆಗೆ ಗುರುವಾರ ಶಾಂತಿಯುತ ಚುನಾವಣೆ ನಡೆದಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ಕೂಟಕ್ಕೆ ಸ್ಪಷ್ಟ ಬಹುಮತದ ಸುಳಿವು ನೀಡಿವೆ.

ಪೋಲ್‌ ಆಫ್‌ ಪೋಲ್ಸ್‌ಒಟ್ಟು ಸ್ಥಾನ 227ಬಹುಮತ 114ಬಿಜೆಪಿ+131ಠಾಕ್ರೆ (ಶಿವಸೇನೆ)+66ಕಾಂಗ್ರೆಸ್‌+21

--ಮುಂಬೈ: 74 ಸಾವಿರ ಕೋಟಿ ರು.ಗೂ ಅಧಿಕ ಬಜೆಟ್‌ ಗಾತ್ರದಿಂದಾಗಿ ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹಿರಿಮೆ ಹೊಂದಿರುವ ಬೃಹನ್ಮುಂಬೈ ಪಾಲಿಕೆಗೆ ಗುರುವಾರ ಶಾಂತಿಯುತ ಚುನಾವಣೆ ನಡೆದಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ಕೂಟಕ್ಕೆ ಸ್ಪಷ್ಟ ಬಹುಮತದ ಸುಳಿವು ನೀಡಿವೆ. ಜೊತೆಗೆ ಇದೇ ಮೊದಲ ಬಾರಿಗೆ ಬಿಜೆಪಿಗೆ ಮೇಯರ್‌ ಹುದ್ದೆ ಲಭ್ಯವಾಗುವ ಸಾಧ್ಯತೆ ಕಂಡುಬಂದಿದೆ. ಮತ್ತೊಂದೆಡೆ 30 ವರ್ಷಗಳಲ್ಲೇ ಮೊದಲ ಬಾರಿಗೆ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಅಧಿಕಾರದಿಂದ ವಂಚಿತವಾಗುವತ್ತ ಹೆಜ್ಜೆ ಹಾಕಿದೆ.

2017ರಲ್ಲಿ ಕಡೆಯ ಬಾರಿ ಚುನಾವಣೆ ಎದುರಿಸಿದ್ದ 227 ಸ್ಥಾನ ಬಲದ ಪಾಲಿಕೆಯ ಅವಧಿ 2022ರಲ್ಲಿ ಮುಗಿದಿತ್ತು. 4 ವರ್ಷದ ಬಳಿಕ ಗುರುವಾರ ಚುನಾವಣೆ ನಡೆಯಿತು. ಈ ಬಾರಿ 227 ಸ್ಥಾನಕ್ಕೆ 1700 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಶೇ.50ರಷ್ಟು ಮತದಾನವಾಯಿತು. ಶುಕ್ರವಾರ ಫಲಿತಾಂಶ ಪ್ರಕಟವಾಗಲಿದ್ದು, ಬಹುಮತಕ್ಕೆ 114 ಸ್ಥಾನಗಳು ಬೇಕಿದೆ.ಬಿಜೆಪಿ ಮೈತ್ರಿಗೆ ಗೆಲುವು?:

ಕಳೆದ 30 ವರ್ಷಗಳಿಂದಲೂ ಬೃಹನ್ಮುಂಬೈ ಪಾಲಿಕೆಯಲ್ಲಿ ಶಿವಸೇನೆ ಅತಿದೊಡ್ಡ ಪಕ್ಷವಾಗಿಯೇ ಗೆಲ್ಲುತ್ತಾ ಬಂದಿದ್ದು, ಮೇಯರ್‌ ಸ್ಥಾನ ತನ್ನಲ್ಲೇ ಉಳಿಸಿಕೊಂಡಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸುಳಿವು ನೀಡಿವೆ. ಹೀಗಾಗಿ ಬಿಜೆಪಿಗೆ ಮೇಯರ್‌ ಹುದ್ದೆ ಮತ್ತು ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಗೆ ಉಪಮೇಯರ್‌ ಸ್ಥಾನ ಲಭ್ಯವಾಗುವ ಸಾಧ್ಯತೆ ನಿಚ್ಚಳವಾಗಿದೆ. ವಾರ್ಷಿಕ 74500 ಕೋಟಿ ರು. ಬಜೆಟ್‌ನೊಂದಿಗೆ ಬೃಹನ್ಮುಂಬೈ ಪಾಲಿಕೆ ಭಾರತದ ನಂ.1 ಶ್ರೀಮಂತ ಪಾಲಿಕೆ ಎಂಬ ಹಿರಿಮೆ ಹೊಂದಿದೆ. 2ನೇ ಸ್ಥಾನ ಹೊಂದಿರುವ ಬೆಂಗಳೂರಿನದ್ದು ಅಂದಾಜು 19500 ಕೋಟಿ ರು. ಬಜೆಟ್‌ ಇದೆ.

ಸಮೀಕ್ಷೆಗಳು ಹೇಳಿದ್ದೇನು?:

ಮೈ ಆ್ಯಕ್ಸಿಸ್‌ ಇಂಡಿಯಾ ಸಮೀಕ್ಷೆಯು, ಬಿಜೆಪಿ- ಶಿವಸೇನೆ ಕೂಟ ಶೇ.42ರಷ್ಟು ಮತಗಳೊಂದಿಗೆ 131- 151 ಸ್ಥಾನ ಗಳಿಸಲಿದೆ. ಇನ್ನು ಶಿವಸೇನೆ (ಉದ್ಧವ್‌), ಎಂಎನ್‌ಎಸ್‌, ಎನ್‌ಸಿಪಿ (ಪವಾರ್‌) ಬಣ ಶೇ.32ರಷ್ಟು ಮತಗಳೊಂದಿಗೆ 58-68 ಸ್ಥಾನ ಗಳಿಸಲಿದೆ. ಕಾಂಗ್ರೆಸ್‌, ವಂಚಿತ್‌ ಬಹುಜನ್‌ ಅಘಾಡಿ, ಆರ್‌ಎಸ್‌ಪಿ ಒಟ್ಟಾಗಿ 12-16 ಸ್ಥಾನ ಗೆಲ್ಲಲಿವೆ. ಅಜಿತ್‌ ಪವಾರ್‌ ಬಣದ ಎನ್‌ಸಿಪಿ, ಎಂಐಎಂ, ಎಡಪಕ್ಷಗಳು 6-12 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ.

ಜೆವಿಸಿ ಸಮೀಕ್ಷೆಯು, ಬಿಜೆಪಿ- ಸೇನೆಗೆ 138, ಶಿವಸೇನೆ (ಉದ್ಧವ್‌), ಎಂಎನ್‌ಎಸ್‌, ಎನ್‌ಸಿಪಿ(ಪವಾರ್‌) ಬಣಕ್ಕೆ 59, ಕಾಂಗ್ರೆಸ್‌, ವಂಚಿತ್‌ ಬಹುಜನ್‌ ಅಘಾಡಿ, ಆರ್‌ಎಸ್‌ಪಿಗೆ 23 ಸ್ಥಾನದ ಭವಿಷ್ಯ ನುಡಿದಿದೆ.

ಸಕಾಲ್‌ ಸಮೀಕ್ಷೆ ಬಿಜೆಪಿ- ಸೇನೆಗೆ 119, ಶಿವಸೇನೆ (ಉದ್ಧವ್‌), ಎಂಎನ್‌ಎಸ್‌, ಎನ್‌ಸಿಪಿ(ಪವಾರ್‌) ಬಣಕ್ಕೆ75, ಕಾಂಗ್ರೆಸ್‌ಗೆ 20ಕ್ಕಿಂತ ಹೆಚ್ಚು ಸ್ಥಾನ ಸಿಗದು ಎಂದು ಹೇಳಿದೆ.

ಜನ್ಮತ್‌ ಸಮೀಕ್ಷೆಯು ಬಿಜೆಪಿ- ಸೇನೆಗೆ 138, ಉದ್ಧವ್‌ ಕೂಟಕ್ಕೆ 62, ಕಾಂಗ್ರೆಸ್‌ ಕೂಟಕ್ಕೆ 20 ಸ್ಥಾನದ ಭವಿಷ್ಯ ನುಡಿದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗ್ರೋಕ್‌ನಲ್ಲಿ ನೈಜ ವ್ಯಕ್ತಿ ಅಶ್ಲೀಲಚಿತ್ರ ಸೃಷ್ಟಿ ಅವಕಾಶಕ್ಕೆ ಬ್ರೇಕ್‌
ಸಿಂದೂರದಿಂದ ಪಾಕ್‌ ತಲ್ಲಣಆಗಿತ್ತು: ಉಗ್ರನಿಂದ್ಲೇ ಒಪ್ಪಿಗೆ