;Resize=(412,232))
ನವದೆಹಲಿ: ಆನ್‌ಲೈನ್‌ನಲ್ಲಿ ಮೂಲಭೂತವಾದವನ್ನು ಹರಡುತ್ತಿದ್ದ ಆರೋಪದಲ್ಲಿ ಕಳೆದ ಜುಲೈನಲ್ಲಿ ಬೆಂಗಳೂರಿನಲ್ಲಿ ಬಂಧಿತಳಾಗಿದ್ದ ಅಲ್‌ಖೈದಾ ಉಗ್ರಸಂಘಟನೆಯ ಸದಸ್ಯೆ ಶಮಾ ಪರ್ವೀನ್, ಸಶಸ್ತ್ರ ದಂಗೆಯ ಮೂಲಕ ಚುನಾಯಿತ ಸರ್ಕಾರ ಬೀಳಿಸಿ, ದೇಶದಲ್ಲಿ ಷರಿಯಾ ಕಾನೂನು ಜಾರಿಯ ಉದ್ದೇಶ ಹೊಂದಿದ್ದಳು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಎಐ) ಆಪಾದಿಸಿದೆ.
ಶಮಾ ಸೇರಿದಂತೆ ಪ್ರಕರಣದಲ್ಲಿ ಬಂಧಿತ ಐವರು ಶಂಕಿತ ಅಲ್‌ಖೈದಾ ಉಗ್ರರ ವಿರುದ್ಧ ಎನ್‌ಐಎ, ಅಹಮದಾಬಾದ್ ಕೋರ್ಟ್‌ನಲ್ಲಿ ಶನಿವಾರ ಚಾರ್ಜ್‌ಶೀಟ್ ಸಲ್ಲಿಸಿದೆ. ಅದರಲ್ಲಿ ಬಂಧಿತ ಮೊಹಮ್ಮದ್ ಫರ್ದೀನ್, ಕುರೇಶಿ ಸೆಫುಲ್ಲಾ, ಮೊಹಮ್ಮದ್ ಫೈಕ್, ಜೀಶನ್ ಅಲಿ ಮತ್ತು ಶಮಾ ಪರ್ವೀನ್ ಸಾಮಾಜಿಕ ಮಾಧ್ಯಮ ಬಳಸಿಕೊಂಡು ಯುವಕರಲ್ಲಿ ಮೂಲಭೂತವಾದ ಹರಡುತ್ತಿದ್ದರು ಎಂದು ಪ್ರಸ್ತಾಪಿಸಲಾಗಿದೆ. ಜೊತೆಗೆ ಆರೋಪಕ್ಕೆ ಪೂರಕವಾಗಿ ಕಡತ, ಡಿಜಿಟಲ್ ಸಾಕ್ಷ್ಯ , ಖಡ್ಗ, ಅರೆ-ಸ್ವಯಂಚಾಲಿತ ಪಿಸ್ತೂಲಿನಂತಹ ಆಯುಧ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.
ಬಂಧಿತರು ನಿಷೇಧಿತ ಅಲ್‌ಖೈದಾದ ಭಾರತ ವಿರೋಧಿ ಸಿದ್ಧಾಂತಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡಿ, ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಿದ್ದರು. ಜತೆಗೆ, ಭಾರತ ಸರ್ಕಾರದ ವಿರುದ್ಧ ಶಸ್ತ್ರಸಜ್ಜಿತ ದಂಗೆಗೂ ಕರೆ ನೀಡಿ, ಷರಿಯಾ ಕಾನೂನು ಸ್ಥಾಪನೆಗೆ ಹಂಬಲಿಸುತ್ತಿದ್ದರು ಎಂದು ಎನ್‌ಐಎ ಆರೋಪಿಸಿದೆ.
ಪಹಲ್ಗಾಂ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ನಡೆದ ಆಪರೇಷನ್ ಸಿಂದೂರದ ಬಳಿಕ ಶಮಾ, ಉಗ್ರಗುಂಪುಗಳ ಸಭೆಗಳಲ್ಲಿ ಭಾಗವಹಿಸುತ್ತಿದ್ದಳು ಮತ್ತು ಅಲ್‌ಖೈದಾದ ಸಿದ್ಧಾಂತ ಸಾರುವ ವಿಡಿಯೋಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹರಿಬಿಡುತ್ತಿದ್ದಳು. ಜತೆಗೆ, ಸುಮೆರ್ ಅಲಿ ಎಂಬ ಪಾಕಿಸ್ತಾನಿಯೊಂದಿಗೆ ಸಂಪರ್ಕದಲ್ಲಿದ್ದ ಈಕೆ, ಅವನೊಂದಿಗೆ ನಿಷೇಧಿತ ಕೃತಿಗಳನ್ನು ಹಂಚಿಕೊಳ್ಳುತ್ತಿದ್ದಳು. ಶಮಾಳ ಮೊಬೈಲ್‌ನಲ್ಲಿ ಹಲವು ಪಾಕಿಗಳ ಸಂಖ್ಯೆಗಳೂ ಪತ್ತೆಯಾಗಿವೆ ಎಂದು ಎನ್‌ಐಎ ಹೇಳಿದೆ.
ಕಳೆದ ವರ್ಷದ ಜು.29ರಂದು ಗುಜರಾತ್ ಉಗ್ರ ನಿಗ್ರಹ ದಳವು ಬೆಂಗಳೂರಿನ ಆರ್.ಟಿ.ನಗರದ ಮನೆಯೊಂದರ ಮನೆ ಮೇಲೆ ದಾಳಿ ಶಮಾ ಪರ್ವೀನ್‌ಳನ್ನು ವಶಕ್ಕೆ ಪಡೆದಿತ್ತು. ಪ್ರಾಥಮಿಕ ವಿಚಾರಣೆ ಬಳಿಕ ಆಕೆಯನ್ನು ಜು.30ರಂದು ಬಂಧಿಸಿ ಬಳಿಕ ಗುಜರಾತ್ ಕರೆದೊಯ್ದಿತ್ತು.
ಯಾರು ಈ ಶಮಾ?
- 30 ವರ್ಷದ ಶಮಾ ಪರ್ವೀನ್ ಅನ್ಸಾರಿ ಮೂಲತಃ ಜಾರ್ಖಂಡ್ ಮೂಲದವಳು. ಬೆಂಗಳೂರಿನಲ್ಲಿ 3 ವರ್ಷದಿಂದ ನೆಲೆಸಿದ್ದಳು
- ಅಲ್‌ಖೈದಾ ಉಗ್ರ ಜಾಲವನ್ನು ವಿಸ್ತರಿಸಲು ಯುವಕರನ್ನು ಮೂಲಭೂತವಾದತ್ತ ಆಕರ್ಷಿಸುವ ಕೃತ್ಯದಲ್ಲಿ ತೊಡಗಿದ್ದಳು
- ಫೇಸ್‌ಬುಕ್, ಇನ್‌ಸ್ಟಾಗ್ರಾಂನ ಮೂಲಕ ಮೂಲಭೂತವಾದಿ ಸಂದೇಶ, ಭಾಷಣ, ಭಾರತ ವಿರೋಧಿ ಮಾಹಿತಿಳನ್ನು ಪಸರಿಸುತ್ತಿದ್ದಳು
- ಗುಜರಾತ್‌ನ ಎಟಿಎಸ್ ಅಧಿಕಾರಿಗಳು ಬೆಂಗಳೂರಿನ ಹೆಬ್ಬಾಳದ ಫ್ಲಾಟ್‌ನಿಂದ ಆಕೆಯನ್ನು 2025ರ ಜುಲೈನಲ್ಲಿ ಬಂಧಿಸಿದ್ದರು