- ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ಸಿಗದ ಪೊಲೀಸರ ಅನುಮತಿ
- ಬೆಂಗಳೂರಿನ ಪಂದ್ಯಗಳು ತಿರುವನಂತಪುರಂಗೆ ಸ್ಥಳಾಂತರ ಸಾಧ್ಯತೆ ಕನ್ನಡಪ್ರಭ ವಾರ್ತೆ ಬೆಂಗಳೂರುಮುಂದಿನ ತಿಂಗಳು ನಡೆಯಲಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು ಬೆಂಗಳೂರಿನಿಂದ ಎತ್ತಂಗಡಿಯಾಗಿರುವುದು ಖಚಿತವಾಗಿದೆ. ಪಂದ್ಯಗಳನ್ನು ಕೇರಳದ ತಿರುವನಂತಪುರಂಗೆ ಸ್ಥಳಾಂತರಿಸುವ ಸಾಧ್ಯತೆ ಇದ್ದು, ಒಂದೆರಡು ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಧಿಕೃತವಾಗಿ ಘೋಷಿಸಲಿದೆ ಎಂದು ತಿಳಿದುಬಂದಿದೆ.
ಒಂದು ದುರಂತ ಘಟನೆ 50 ವರ್ಷ ಹಳೆಯ, ವಿಶ್ವದ ಐಕಾನಿಕ್ ಕ್ರೀಡಾಂಗಣಗಳಲ್ಲಿ ಒಂದೆನಿಸಿರುವ ಚಿನ್ನಸ್ವಾಮಿ ಕ್ರೀಡಾಂಗಣವನ್ನು ದುಸ್ಥಿತಿಗೆ ತಳ್ಳಿದೆ. ಸೆ.30ರಂದು ಉದ್ಘಾಟನಾ ಪಂದ್ಯ, ಸೆಮಿಫೈನಲ್, ಫೈನಲ್ ಸೇರಿ ಒಟ್ಟು 5 ಪಂದ್ಯಗಳನ್ನು ಬೆಂಗಳೂರಲ್ಲಿ ನಡೆಸಲು ಐಸಿಸಿ ಯೋಜಿಸಿತ್ತು. ಆದರೆ, ಆದರೆ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟು, ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ. ಆ.9ರೊಳಗೆ ಅನುಮತಿ ಪಡೆಯಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಗೆ ಬಿಸಿಸಿಐ ಸೂಚಿಸಿತ್ತು. ಅದು ಸಾಧ್ಯವಾಗದಿದ್ದಾಗ ಎರಡು ದಿನ ಹೆಚ್ಚುವರಿ ಸಮಯಾವಕಾಶ ನೀಡಲಾಯಿತು. ಆದರೆ, ಅನುಮತಿ ಸಿಗದ ಕಾರಣ ಪಂದ್ಯಗಳನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ನಿರ್ಧರಿಸಿರುವುದಾಗಿ ಬಿಸಿಸಿಐ ಸೋಮವಾರ ರಾತ್ರಿ ಕೆಎಸ್‌ಸಿಎಗೆ ತಿಳಿಸಿತು ಎಂದು ತಿಳಿದುಬಂದಿದೆ.ಕಾಲ್ತುಳಿತ ಘಟನೆ ಬಳಿಕ ಕೆಎಸ್‌ಸಿಎ ಮಹಾರಾಣಿ ಟ್ರೋಫಿ, ಮಹಾರಾಜ ಟ್ರೋಫಿ ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರಗೊಂಡಿತ್ತು. ಇದೀಗ ಜಾಗತಿಕ ಮಟ್ಟದ ಟೂರ್ನಿಯ ಪಂದ್ಯಗಳೂ ಸ್ಥಳಾಂತರಗೊಳ್ಳುವುದರೊಂದಿಗೆ ಕೆಎಸ್‌ಸಿಎಗೆ ಭಾರೀ ಮುಜುಗರ ಉಂಟಾಗಿದೆ.
ಮಹಿಳಾ ಏಕದಿನ ವಿಶ್ವಕಪ್ ಸೆ.30ಕ್ಕೆ ಆರಂಭಗೊಂಡು, ನ.2ರ ವರೆಗೂ ನಡೆಯಲಿದೆ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯನಡೆಸಲು ಕೆಎಸ್‌ಸಿಎ ಮನವಿ?
ಐಸಿಸಿ ಆಯೋಜಿಸುವ ಯಾವುದೇ ಟೂರ್ನಿಯಾದರೂ, ಟೂರ್ನಿ ಆರಂಭಕ್ಕೆ ಒಂದು ತಿಂಗಳು ಬಾಕಿ ಇದ್ದಾಗ ಕ್ರೀಡಾಂಗಣವನ್ನು ಆಯೋಜಕರಿಗೆ ಬಿಟ್ಟುಕೊಡಬೇಕು. ಹೀಗಾಗಿ, ಅಗತ್ಯ ಅನುಮತಿ ಪಡೆಯಲು ಕೆಎಸ್‌ಸಿಎಗೆ ಆ.11ರ ಗಡುವು ನೀಡಲಾಗಿತ್ತು. ಕೆಎಸ್‌ಸಿಎ ಅಧಿಕಾರಿಗಳು ಪೊಲೀಸರಿಂದ ಅನುಮತಿ ಪಡೆಯಲು ಸತತ ಪ್ರಯತ್ನ ನಡೆಸಿದ್ದಾಗಿ ಗೊತ್ತಾಗಿದೆ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುತ್ತೇವೆ, ಅನುಮತಿ ಕೊಡಿ ಎಂದು ಮನವಿ ಸಲ್ಲಿಸಲಾಗಿತ್ತು ಎನ್ನಲಾಗಿದೆ. ಆದರೆ ಪೊಲೀಸರು ಅನುಮತಿ ನೀಡಿಲ್ಲ.ರಾಷ್ಟ್ರೀಯ ಮಾಧ್ಯಮವೊಂದು ಕೆಎಸ್‌ಸಿಎ ಅಧಿಕಾರಿಯೊಬ್ಬರು ತನ್ನ ಪ್ರತಿನಿಧಿಯೊಂದಿಗೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾಗಿ ವರದಿ ಮಾಡಿದೆ. ‘ಚಿನ್ನಸ್ವಾಮಿ ಕ್ರೀಡಾಂಗಣ ಈವರೆಗೂ 750ಕ್ಕೂ ಹೆಚ್ಚು ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. 15 ಆವೃತ್ತಿಗಳ ಐಪಿಎಲ್ ಪಂದ್ಯಗಳಿಗೆ ವೇದಿಕೆಯಾಗಿದೆ. ವಿಶ್ವದ ಜನಪ್ರಿಯ ಕ್ರೀಡಾಂಗಣಗಳಲ್ಲಿ ಒಂದೆನಿಸಿದೆ. ಕಾಲ್ತುಳಿತ ಘಟನೆ ನಡೆದಿದ್ದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೊರತು ಪಂದ್ಯದ ವೇಳೆ ಅಲ್ಲ ಎಂದು ಪೊಲೀಸರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ’ ಎಂದು ಕೆಎಸ್‌ಸಿಎ ಅಧಿಕಾರಿ ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮವು ತನ್ನ ವರದಿಯಲ್ಲಿ ತಿಳಿಸಿದೆ.
ಕೆಎಸ್‌ಸಿಎ ಅಧಿಕಾರಿಗಳನ್ನು ‘ಕನ್ನಡಪ್ರಭ’ ಸಂಪರ್ಕಿಸಲು ಪ್ರಯತ್ನಿಸಿತಾದರೂ, ಯಾರೊಬ್ಬರೂ ಕರೆ ಸ್ವೀಕರಿಸಲಿಲ್ಲ.