ನವದೆಹಲಿ: ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಸಾರಥ್ಯವನ್ನು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರ ಕೈಗೆ ನೀಡುವ ಸಾಧ್ಯತೆ ದಟ್ಟವಾಗಿದೆ. ಈ ಸ್ಥಾನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆಂಧ್ರ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷೆ ಡಿ.ಪುರಂದೇಶ್ವರಿ ಮತ್ತು ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ವನತಿ ಶ್ರೀನಿವಾಸನ್ ಹೆಸರು ಗಟ್ಟಿಧ್ವನಿಯಲ್ಲಿ ಕೇಳಿಬರುತ್ತಿದೆ.
ಆರೆಸ್ಸೆಸ್‌ನಿಂದಲೂ ಈ ಪ್ರಸ್ತಾಪಕ್ಕೆ ಬೆಂಬಲ ವ್ಯಕ್ತವಾಗಿದ್ದು, ಒಂದು ವೇಳೆ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿದ್ದೇ ಆದರೆ ಪಕ್ಷದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದಂತಾಗಲಿದೆ.
ಪಕ್ಷದ ಹಾಲಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕಾರ್ಯಾವಧಿ ಜನವರಿ 2023ರಲ್ಲೇ ಕೊನೆಗೊಂಡಿತ್ತು. ಆ ಬಳಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೂನ್ 2024ರ ವರೆಗೆ ಅವರ ಅಧಿಕಾರಾವಧಿ ವಿಸ್ತರಿಸಲಾಗಿತ್ತು. ನೂತನ ರಾಷ್ಟ್ರಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸದ್ದಿಲ್ಲದೆ ಚಾಲನೆ ಸಿಕ್ಕಿದೆ.
ವಿಶೇಷವೆಂದರೆ ಈಗ ಈ ಹುದ್ದೆಗೆ ಚರ್ಚೆಯಲ್ಲಿರುವ ಮಹಿಳಾ ನಾಯಕಿಯರ ಹೆಸರುಗಳೆಲ್ಲವೂ ದಕ್ಷಿಣ ಭಾರತ ಮೂಲದವರದ್ದು. ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗಷ್ಟೇ ಪಕ್ಷದ ಹಾಲಿ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಜತೆಗೆ ಉನ್ನತಮಟ್ಟದ ಸಭೆ ನಡೆಸಿದ್ದರು. ನಿರ್ಮಲಾ ಆಯ್ಕೆಯಿಂದ ಬಿಜೆಪಿ ದಕ್ಷಿಣ ರಾಜ್ಯಗಳಲ್ಲೂ ತನ್ನ ಸ್ಥಾನ ಭದ್ರಪಡಿಸಲು ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಡಿ.ಪುರಂದೇಶ್ವರಿ ಆಪರೇಷನ್ ಸಿಂದೂರದ ಪರ ವಿದೇಶಕ್ಕೆ ಕಳುಹಿಸಿಕೊಟ್ಟ ಸರ್ವಪಕ್ಷ ನಿಯೋಗದಲ್ಲಿದ್ದವರು. ಹಲವು ಹುದ್ದೆಗಳನ್ನು ನಿಭಾಯಿಸಿದ ಅನುಭವ ಇವರಿಗಿದೆ. ವನತಿ ಶ್ರೀನಿವಾಸನ್ ಅವರು ಕೂಡ ತಮಿಳುನಾಡಿನ ಕೊಯಂಬತ್ತೂರು ದಕ್ಷಿಣ ಕ್ಷೇತ್ರದ ಶಾಸಕಿ. ವೃತ್ತಿಯಲ್ಲಿ ವಕೀಲೆಯಾಗಿರುವ ವನತಿ ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರಾಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದಾರೆ. ಬಿಜೆಪಿ ಚುನಾವಣಾ ಸಮಿತಿಯ ಸದಸ್ಯೆಯಾಗಿ ಆಯ್ಕೆಯಾಗಿದ್ದ ಮೊದಲ ತಮಿಳು ಮಹಿಳೆ ಆಗಿದ್ದಾರೆ.
ಬಿಜೆಪಿಯ ಇತ್ತೀಚಿನ ಗೆಲುವಿನಲ್ಲಿ ಮಹಿಳೆಯರು ಮುಖ್ಯಪಾತ್ರವಹಿಸುತ್ತಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್ ಕೂಡ ಮಹಿಳಾ ನಾಯಕತ್ವಕ್ಕೆ ಹೆಚ್ಚಿನ ಒಲವು ತೋರುತ್ತಿದೆ.