ಭೋಪಾಲ್: ಕೇಂದ್ರ ಸರ್ಕಾರದ ವಿರುದ್ಧ ‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಹೊರಟಿದ್ದ ವೇಳೆ ಮಧ್ಯ ಪ್ರದೇಶದಲ್ಲಿ ಬಂಧಿತರಾಗಿದ್ದ ಕರ್ನಾಟಕದ 100 ರೈತರನ್ನು ಇದೀಗ ಉತ್ತರ ಪ್ರದೇಶದ ವಾರಾಣಸಿಗೆ ಸ್ಥಳಾಂತರಿಸಲಾಗಿದೆ.
ಕಳೆದ ಎರಡು ದಿನಗಳಿಂದ ಬಂಧನದಲ್ಲಿದ್ದ ರೈತರನ್ನು ಫೆ.14ರ ಬುಧವಾರದಂದು ವಿಶೇಷ ರೈಲಿನಲ್ಲಿ ಉತ್ತರ ಪ್ರದೇಶ ವಾರಾಣಸಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರೈತರು ‘ಸ್ಥಳೀಯ ಪೊಲೀಸರು ಪ್ರತಿದಿನ ಹೊಸ ಸ್ಥಳಕ್ಕೆ ನಮ್ಮನ್ನು ಸ್ಥಳಾಂತರಿಸುತ್ತಿರುವುದರಿಂದ ನಮಗೆ ಏನಾಗುತ್ತಿದೆ ಎಂದು ನಮಗೆ ತಿಳಿದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ರೈತರ ನೆರವಿಗೆ ಬಾರದ ಕಾರಣ ಅವರನ್ನು ಅತ್ತ ದೆಹಲಿಗೂ ಕಳುಹಿಸದೇ, ಇತ್ತ ಊರಿಗೂ ವಾಪಸು ಕಳಿಸದೇ ಹೀಗೆ ಸ್ಥಳಾಂತರಿಸಲಾಗುತ್ತಿದೆ ಎಂದು ದೂರಲಾಗಿದೆ. ರೈತರ ಪೈಕಿ 30 ಜನ ಮಹಿಳಾ ರೈತರು ಇದ್ದಾರೆ.
ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ರೂಪ: ಕಾಂಗ್ರೆಸ್-ಬಿಜೆಪಿ ವಾಕ್ಸಮರ
ನವದೆಹಲಿ: ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ರೂಪ ನೀಡಬೇಕು ಎಂದು ಕೃಷಿ ತಜ್ಞ ಎಂ.ಎಸ್. ಸ್ವಾಮಿನಾಥನ್ ನೀಡಿದ ವರದಿ ಅನುಷ್ಠಾನ ಆಗದ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಬುಧವಾರ ವಾಕ್ಸಮರ ನಡೆಸಿವೆ.
2010ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಸಚಿವ ಕೆ.ವಿ. ಥಾಮಸ್ ಅವರು ಬಿಜೆಪಿ ಸಂಸದ ಪ್ರಕಾಶ ಜಾವಡೇಕರ್ ಅವರಿಗೆ ಉತ್ತರಿಸಿ, ‘ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಲಾಗದು’ ಎಂದಿದ್ದರು.
ಇದನ್ನು ಬುಧವಾರ ಬಿಜೆಪಿ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ಸನ್ನು ಟೀಕಿಸಿದೆ.ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ‘ಕಾಂಗ್ರೆಸ್ ಸರ್ಕಾರವು ಸ್ವಾಮಿನಾಥನ್‌ರ 201ಶಿಫಾರಸುಗಳ ಪೈಕಿ 175 ಶಿಫಾರಸನ್ನು ಈಡೇರಿಸಿತ್ತು.
ಆದರೆ 2011ರಲ್ಲಿ ಗುಜರಾತ್ ಸಿಎಂ ಆಗಿದ್ದಾಗ ನರೇಂದ್ರ ಮೋದಿ ಅವರು ಬೆಂಬಲ ಬೆಲೆಗೆ ಕಾಯ್ದೆ ಜಾರಿ ಆಗಬೇಕೆಂದು ಒತ್ತಾಯಿಸಿದ್ದರು.
2014ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲೂ ಬಿಜೆಪಿ ಈ ಭರವಸೆ ನೀಡಿತ್ತು. ಬಿಜೆಪಿ ಕೊಟ್ಟ ಮಾತು ತಪ್ಪಿದೆ’ ಎಂದು ಕಿಡಿಕಾರಿದೆ.
ಗಾಯಗೊಂಡ ರೈತರಿಗೆ ರಾಹುಲ್ ಫೋನ್‌ನಲ್ಲೇ ಶಹಬ್ಬಾಸ್!:
ಚಂಡೀಗಢ: ದಿಲ್ಲಿ ಚಲೋ ರೈತರ ಪ್ರತಿಭಟನೆ ವೇಳೆ ಶಂಭು ಗಡಿಯಲ್ಲಿ ಗಾಯಗೊಂಡ ರೈತರೊಂದಿಗೆ ಬುಧವಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಫೋನ್‌ನಲ್ಲಿ ಸಂವಾದ ನಡೆಸಿದರು.
ರೈತರು ಚಿಕಿತ್ಸೆ ಪಡೆಯುತ್ತಿರುವ ಚಂಡೀಗಢದ ಆಸ್ಪತ್ರೆಗೆ ಭೇಟಿ ನೀಡಿದ್ದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ಅವರು ರಾಹುಲ್ ಗಾಂಧಿ ಅವರೊಂದಿಗೆ ದೂರವಾಣಿ ಕರೆಗೆ ಅವಕಾಶ ಕೊಟ್ಟರು.
ಈ ವೇಳೆ ರೈತರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿ, ನೋವನ್ನು ಆಲಿಸಿದರು. ಜೊತೆಗೆ, ‘ನೀವು ಮಾಡುತ್ತಿರುವ ಪ್ರತಿಭಟನೆ ಸರಿ ಇದೆ.
‘ಶಹಬ್ಬಾಸ್’. ನಾನು ನಿಮ್ಮ ಬೆಂಬಲಕ್ಕೆ ಇದ್ದೇನೆ’ ಎಂದು ಆತ್ಮಸ್ಥೈರ್ಯ ತುಂಬಿದರು. ಪ್ರತಿಭಟನೆಯನ್ನು ಹತ್ತಿಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.