ಪಿಟಿಐ ನವದೆಹಲಿಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈಗ ವಿದೇಶಿ ವಿವಿಗಳ ರೀತಿ ವರ್ಷಕ್ಕೆ 2 ಬಾರಿ ಪ್ರವೇಶವನ್ನು ನೀಡಲು ಅನುಮತಿಸಲಾಗಿದೆ. ಅಂದರೆ ವರ್ಷಕ್ಕೆ 2 ಪ್ರವೇಶ ಚಕ್ರಗಳು ಇರಲಿವೆ.
ಮಂಗಳವಾರ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ಯುಜಿಸಿ ಮುಖ್ಯಸ್ಥ ಜಗದೀಶ್ ಕುಮಾರ್, ‘ಭಾರತೀಯ ವಿವಿಗಳು ವರ್ಷಕ್ಕೆ 2 ಬಾರಿ ಪ್ರವೇಶವನ್ನು ನೀಡಿದರೆ, ಮಂಡಳಿಯ ಫಲಿತಾಂಶಗಳ ಪ್ರಕಟಣೆಯಲ್ಲಿ ವಿಳಂಬ, ಆರೋಗ್ಯ ಸಮಸ್ಯೆಗಳು ಅಥವಾ ವೈಯಕ್ತಿಕ ಕಾರಣಗಳಿಂದ ಜುಲೈ-ಆಗಸ್ಟ್ ನಲ್ಲಿ ಪ್ರವೇಶ ಪಡೆಯಲು ಆಗದ ಅನೇಕ ವಿದ್ಯಾರ್ಥಿಗಳಿಗೆ ನೆರವಾಗಲಿದೆ’ ಎಂದರು.
‘ದ್ವೈವಾರ್ಷಿಕ ವಿಶ್ವವಿದ್ಯಾನಿಲಯ ಪ್ರವೇಶಗಳು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತವೆ. ಏಕೆಂದರೆ ಅವರು ಪ್ರಸ್ತುತ ‘ಚಕ್ರ’ದಲ್ಲಿ ಪ್ರವೇಶವನ್ನು ಕಳೆದುಕೊಂಡರೆ, ಪ್ರವೇಶ ಪಡೆಯಲು ಮತ್ತೆ 1 ಪೂರ್ಣ ವರ್ಷ ಕಾಯಬೇಕಾಗಿಲ್ಲ. ದ್ವೈವಾರ್ಷಿಕ ಪ್ರವೇಶದೊಂದಿಗೆ, ಉದ್ಯಮಗಳು ತಮ್ಮ ಕ್ಯಾಂಪಸ್ ನೇಮಕಾತಿಯನ್ನು ವರ್ಷಕ್ಕೆ 2 ಬಾರಿ ಮಾಡಬಹುದು. ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಕಂಪನಿಗಳಿಗೂ ಇದರಿಂದ ನೆರವಾಗಲಿದೆ’ ಎಂದರು. ‘ವಿಶ್ವದಾದ್ಯಂತ ವಿಶ್ವವಿದ್ಯಾನಿಲಯಗಳು ಈಗಾಗಲೇ ದ್ವೈವಾರ್ಷಿಕ ಪ್ರವೇಶ ವ್ಯವಸ್ಥೆಯನ್ನು ಅನುಸರಿಸುತ್ತವೆ. ಭಾರತೀಯ ವಿವಿಗಳೂ ಅದನ್ನು ಅಳವಡಿಸಿಕೊಳ್ಳುವ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ನಮ್ಮ ವಿದ್ಯಾರ್ಥಿಗಳಿಗೆ ನೆರವಾಗಲಿದೆ’ ಎಂದು ಹೇಳಿದರು.ಕಡ್ಡಾಯವಲ್ಲ:
ಜುಲೈನಲ್ಲಿ ಕಾಲೇಜಿಗೆ ಸೇರಲು ಆಗದೆ ಇದ್ದರೆ ಜನವರಿಯಲ್ಲಿ ಸೇರಬಹುದು. ಫಲಿತಾಂಶ ವಿಳಂಬ, ಅನಾರೋಗ್ಯ ಇನ್ನಿತರ ಸಮಸ್ಯೆಗಳಾದಲ್ಲಿ ಅನುಕೂಲವಾಗಲಿದೆ. ಕಂಪನಿಗಳು ವಿವಿಗಳಲ್ಲಿ ವರ್ಷಕ್ಕೆ 2 ಬಾರಿ ಕ್ಯಾಂಪಸ್ ಸಂದರ್ಶನ ಮಾಡಬಹುದು. ಅಂ.ರಾ.ಮಟ್ಟದಲ್ಲಿ ಸ್ಪರ್ಧಿಸಲು ಭಾರತೀಯ ವಿದ್ಯಾರ್ಥಿಗಳಿಗೆ ಇದರಿಂದ ಅವಕಾಶ ಹೆಚ್ಚಲಿದೆ. ಆದರೆ ಇದು ಕಡ್ಡಾಯವಲ್ಲ, ವಿವಿಗಳಲ್ಲಿ ಅನುಕೂಲವಿದ್ದರೆ ಮಾತ್ರ ಈ ವ್ಯವಸ್ಥೆ ಜಾರಿಗೆ ತರಬಹುದು.