ಪಾಟ್ನಾ: ದೇಶದಲ್ಲಿ ಅತಿಹೆಚ್ಚು ರಾಜಕೀಯವಾಗಿ ಜಾಗೃತಗೊಂಡಿರುವ ಮತದಾರರಿದ್ದಾರೆ ಎನ್ನಲಾಗುವ ಪ್ರಮುಖ ದೊಡ್ಡ ರಾಜ್ಯಗಳಲ್ಲಿ ಒಂದಾದ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದೆ. 40 ಲೋಕಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಜೆಡಿಯು 14, ಬಿಜೆಪಿ 13, ಲೋಕಜನಶಕ್ತಿ ಪಕ್ಷ 5 ಕ್ಷೇತ್ರಗಳಲ್ಲಿ ಗೆದ್ದಿವೆ. ಕಾಂಗ್ರೆಸ್ 2 ಹಾಗೂ ಆರ್‌ಜೆಡಿ 3 ಕ್ಷೇತ್ರಗಳಲ್ಲಿ ಗೆದ್ದಿವೆ. ಸಿಪಿಐ ಎರಡು ಕ್ಷೇತ್ರದಲ್ಲಿ ಜಯ ಗಳಿಸಿದೆ.
ಎನ್‌ಡಿಎ ಮೈತ್ರಿಕೂಟದಲ್ಲಿ ಅತಿಹೆಚ್ಚು ಕ್ಷೇತ್ರಗಳಲ್ಲಿ (17) ಬಿಜೆಪಿ ಸ್ಪರ್ಧಿಸಿತ್ತು. 13 ಕ್ಷೇತ್ರಗಳಲ್ಲಿ ಗೆದ್ದಿದೆ. ಜೆಡಿಯು 16 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. 14 ಕ್ಷೇತ್ರಗಳಲ್ಲಿ ಗೆದ್ದಿದೆ. ದುರ್ಬಲ ಮುಖ್ಯಮಂತ್ರಿ ಎಂಬ ಅಪಖ್ಯಾತಿ ಎದುರಿಸುತ್ತಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ ಮೊಗದಲ್ಲಿ ಈ ಫಲಿತಾಂಶ ಮಂದಹಾಸ ಮೂಡಿಸಿದೆ. ಅವರ ಪಕ್ಷವೀಗ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗುವುದಕ್ಕೆ ಅತ್ಯಂತ ಮಹತ್ವದ್ದಾಗಲಿದೆ.
ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷ 5 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎಲ್ಲಾ ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಜಿ ತಮ್ಮ ಹಿಂದುಸ್ತಾನಿ ಆವಾಮ್ ಮೋರ್ಚಾ ಪಕ್ಷದಿಂದ ಗೆದ್ದಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಕೇವಲ 3 ಸ್ಥಾನಗಳಲ್ಲಿ ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಅದು ಶೂನ್ಯ ಸಂಪಾದನೆ ಮಾಡಿತ್ತು. ಲಾಲು ಪುತ್ರಿ ಮಿಸಾ ಭಾರ್ತಿ ಪಾಟಲೀಪುತ್ರದಿಂದ ಜಯ ಗಳಿಸಿದ್ದಾರೆ. ಇನ್ನೊಬ್ಬ ಪುತ್ರಿ ರೋಹಿಣಿ ಆಚಾರ್ಯ ಅವರು ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ವಿರುದ್ಧ ಸೋತಿದ್ದಾರೆ. ಭೋಜಪುರಿ ಸೂಪರ್‌ಸ್ಟಾರ್ ಪವನ್ ಸಿಂಗ್ ಹೀನಾಯವಾಗಿ ಸೋತಿದ್ದಾರೆ.
ಗೆದ್ದ ಪ್ರಮುಖರು: ಮಿಸಾ ಭಾರ್ತಿ, ರಾಜೀವ್ ಪ್ರತಾಪ್ ರೂಡಿ, ರವಿಶಂಕರ ಪ್ರಸಾದ್, ಜೀತನ್ ರಾಂ ಮಾಂಜಿ, ಚಿರಾಗ್ ಪಾಸ್ವಾನ್
ಸೋತ ಪ್ರಮುಖರು: ಗಿರಿರಾಜ ಸಿಂಗ್, ರೋಹಿಣಿ ಆಚಾರ್ಯ