ಬಿಹಾರ: ನಾಳೆಯ ಪ್ರಮಾಣವಚನಕ್ಕೆ ಭರ್ಜರಿ ಸಿದ್ಧತೆ

KannadaprabhaNewsNetwork |  
Published : Nov 19, 2025, 12:45 AM IST
ನಿತೀಶ್‌ | Kannada Prabha

ಸಾರಾಂಶ

ಗುರುವಾರ ಪಟನಾ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಬಿಹಾರದಲ್ಲಿ ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಸಿದ್ಧತೆಗಳು ಆರಂಭವಾಗಿವೆ. ಹಾಲಿ ಸಿಎಂ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಪುನಃ ಮುಖ್ಯಮಂತ್ರಿ ಆಗುವುದು ಪಕ್ಕಾ ಆಗಿದ್ದು, ಅವರು ಮಂಗಳವಾರ ಮೈದಾನಕ್ಕೆ ಆಗಮಿಸಿ ಸಿದ್ಧತೆ ಪರಿಶೀಲಿಸಿದರು.

ಇಂದು ಮೈತ್ರಿಕೂಟದ ನಾಯಕನಾಗಿ ನಿತೀಶ್ ಆಯ್ಕೆ ಸಾಧ್ಯತೆಪಿಟಿಐ ಪಟನಾ

ಗುರುವಾರ ಪಟನಾ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಬಿಹಾರದಲ್ಲಿ ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಸಿದ್ಧತೆಗಳು ಆರಂಭವಾಗಿವೆ. ಹಾಲಿ ಸಿಎಂ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಪುನಃ ಮುಖ್ಯಮಂತ್ರಿ ಆಗುವುದು ಪಕ್ಕಾ ಆಗಿದ್ದು, ಅವರು ಮಂಗಳವಾರ ಮೈದಾನಕ್ಕೆ ಆಗಮಿಸಿ ಸಿದ್ಧತೆ ಪರಿಶೀಲಿಸಿದರು.

ದಾಖಲೆಯ 10ನೇ ಬಾರಿಗೆ ನಿತೀಶ್ ಪ್ರಮಾಣವಚನ ಸ್ವೀಕಾರ ಪಕ್ಕಾ ಆಗಿದೆ. ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಗಿರಿರಾಜ್‌ ಸಿಂಗ್‌ ಅವರೇ ಇದನ್ನು ದೃಢಪಡಿಸಿದ್ದು, ನಿತೀಶ್‌ ಅವರೇ ಮುಂದುವರಿಯಲಿದ್ದಾರೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಇತರ ಕೇಂದ್ರ ಸಚಿವರು ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ನ.19ರಂದು ವಿಧಾನಸಭೆ ವಿಸರ್ಜನೆ ಆಗಲಿದೆ. ಇದೇ ವೇಳೆ, ಜೆಡಿಯು ಮತ್ತು ಬಿಜೆಪಿ ತಮ್ಮ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಲಿವೆ.

ಗೃಹ ಸಚಿವ ಖಾತೆಗೆ ಲಾಬಿ:

ಹಾಲಿ ನಿತೀಶ್‌ ಅವರೇ ಗೃಹ ಸಚಿವರಾಗಿದ್ದು, ಇದಕ್ಕೆ ಈಗ ಬಿಜೆಪಿ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಇದೇ ವೇಳೆ, ಸ್ಪೀಕರ್‌ ಸ್ಥಾನಕ್ಕೂ ಜೆಡಿಯು-ಬಿಜೆಪಿ ಲಾಬಿ ಮಾಡುತ್ತಿವೆ ಎನ್ನಲಾಗಿದೆ. ಹೀಗಾಗಿ ಸಂಪುಟ ದರ್ಜೆಯ ಸ್ಥಾನಗಳ ಹಂಚಿಕೆಯನ್ನು ಅಂತಿಮಗೊಳಿಸಲು ಕಸರತ್ತು ನಡೆಯುತ್ತಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 202 ಸ್ಥಾನಗಳನ್ನು ಗೆದ್ದು ಎನ್‌ಡಿಎ ಅಧಿಕಾರಕ್ಕೆ ಬಂದಿದೆ. ಬಿಜೆಪಿ 89, ಜೆಡಿಯು 85, ಎಲ್‌ಜೆಪಿ (ಆರ್‌ವಿ) 19, ಎಚ್‌ಎಎಂ 5 ಮತ್ತು ಆರ್‌ಎಲ್‌ಎಂ 4 ಸ್ಥಾನಗಳನ್ನು ಗಳಿಸಿವೆ

==

ಜೆಡಿಯು 2 ಲಕ್ಷ ರು. ಭರವಸೆ ಈಡೇರಿಸಿದರೆ ನಿವೃತ್ತಿ: ಪಿಕೆ

ಮಹಿಳೆಯರಿಗೆ ₹10 ಸಾವಿರ ನೀಡಿರದಿದ್ರೆ 25 ಸೀಟೂ ಗೆಲ್ಲುತ್ತಿರಲಿಲ್ಲ

ಪಟನಾ: ‘ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಾಗ ಮಹಿಳೆಯರಿಗೆ 10 ಸಾವಿರ ರು. ನೀಡಿರದಿದ್ದರೆ ಜೆಡಿಯು 25 ಕ್ಷೇತ್ರಗಳಲ್ಲೂ ಗೆಲ್ಲುತ್ತಿರಲಿಲ್ಲ’ ಎಂದು ಜನ್‌ ಸುರಾಜ್‌ ಪಕ್ಷದ ನಾಯಕ ಪ್ರಶಾಂತ್ ಕಿಶೋರ್‌ (ಪಿಕೆ) ವ್ಯಂಗ್ಯವಾಡಿದ್ದಾರೆ.

ಸೋಲಿನ ಬಳಿಕ ಮೊದಲ ಬಾರಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಎನ್‌ಡಿಎ ತಾನು ನೀಡಿದ ಭರವಸೆಯಂತೆ ಮಹಿಳೆಯರು ಸ್ವ ಉದ್ಯೋಗ ಪ್ರಾರಂಭಿಸಲು 2 ಲಕ್ಷ ರು. ನೀಡಬೇಕು. ಅವರು ಈ ಭರವಸೆ ಈಡೇರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. 6 ತಿಂಗಳೊಳಗೆ 2 ಲಕ್ಷ ರು. ಸಿಗದಿದ್ದರೆ ಜನರು ನಮ್ಮ ಪಕ್ಷಕ್ಕೆ ಬರಬಹುದು, ನಾನು ಅವರ ಭರವಸೆ ಈಡೇರಿಸುತ್ತೇನೆ’ ಎಂದು ಸವಾಲೆಸೆದರು.ಇದೇ ಸಂದರ್ಭದಲ್ಲಿ ಪಿಕೆ ಪಕ್ಷದ ಸೋಲಿನ ಬಗ್ಗೆಯೂ ಮಾತನಾಡಿದ್ದು ‘ ಜನ ಸುರಾಜ್‌ ಪಕ್ಷ ಚುನಾವಣೆಯಲ್ಲಿ ಪ್ರಾಮಾಣಿಕ ವಾಗಿ ಪ್ರಯತ್ನಿಸಿದೆ. ಆದರೆ ಛಾಪು ಮೂಡಿಸಿವುದರಲ್ಲಿ ವಿಫಲವಾಯಿತು. ಇದರ ಸಂಪೂರ್ಣ ಹೊಣೆ ನಾನು ಹೊರುತ್ತೇನೆ’ ಎಂದು ಹೇಳಿದರು.

==

ಪ್ರತಿಪಕ್ಷ ನಾಯಕ ಆಗಲ್ಲ ಎಂದಿದ್ದ ತೇಜಸ್ವಿ: ಮನವೊಲಿಸಿದ್ದ ಲಾಲು

ಪಟನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು, ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್‌ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸಿದರು. ತಂದೆ ಲಾಲು ಪ್ರಸಾದ್‌ ಯಾದವ್‌ ಅವರೇ ಮನವೊಲಿಸಿದರು ಎಂದು ಗೊತ್ತಾಗಿದೆ.ಮೂಲಗಳ ಪ್ರಕಾರ, ಸೋಮವಾರ ನಡೆದ ಆರ್‌ಜೆಡಿ ನಾಯಕರ ಸಭೆಯಲ್ಲಿ ತೇಜಸ್ವಿ ಶಾಸಕರಾಗಿ ಮಾತ್ರ ಕೆಲಸ ಮಾಡಲು ನಿರ್ಧರಿಸಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ನಿರಾಕರಿಸಿದ್ದರು. ಅಲ್ಲದೇ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದರು. ಆ ಬಳಿಕ ಸಭೆಯಲ್ಲಿದ್ದ ಲಾಲು ತಮ್ಮ ಪುತ್ರನ ಮನವೊಲಿಸಿದ್ದರು ಎಂದು ತಿಳಿದು ಬಂದಿದೆ.

==

ಮತಪಟ್ಟಿ ಪರಿಷ್ಕರಣೆ ವಿರುದ್ಧ ಕಾನೂನು ಹೋರಾಟ: ರಾಹುಲ್‌

ನವದೆಹಲಿ: ಮತಪಟ್ಟಿ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ಸಿಗರ ಅಪಸ್ವರ ಮುಂದುವರೆದಿದ್ದು, 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯ ಚುನಾವಣಾ ಆಯೋಗ ನಡೆಸುತ್ತಿರುವ ಮತಪಟ್ಟಿ ಪರಿಷ್ಕರಣೆ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.ಮತಪಟ್ಟಿ ಪರಿಷ್ಕರಣೆಗೆ ಒಳಗಾಗಿರುವ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಐಸಿಸಿ ಪದಾಧಿಕಾರಿಗಳ ಜತೆಗಿನ ಸಭೆಯಲ್ಲಿ ರಾಹುಲ್‌, ‘ ಮತಪಟ್ಟಿ ಪರಿಷ್ಕರಣೆಯನ್ನು ಕಾಂಗ್ರೆಸ್‌ ರಾಜಕೀಯ, ಸಂಘಟನಾತ್ಮಕ ಮತ್ತು ಕಾನೂನಾತ್ಮಕವಾಗಿ ಎದುರಿಸಬೇಕು. ಆಯೋಗ ಈ ವಿಧಾನವನ್ನು ತರಾತುರಿಯಲ್ಲಿ ಅಳವಡಿಸಿಕೊಳ್ಳುತ್ತಿದ್ದು, ನಿಜವಾದ ಮತದಾರರನ್ನು ಅಳಿಸುವ ಉದ್ದೇಶವನ್ನು ಹೊಂದಿದೆ’ ಎಂದು ಆರೋಪಿಸಿದರು. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

==

25 ಸಾವಿರ ಮತ ಪ್ರೀಲೋಡ್‌ ಎಂಬ ಆರ್‌ಜೆಡಿ ಆರೋಪ ಸುಳ್ಳು: ಆಯೋಗ

ಪಟನಾ: ‘ಇವಿಎಂಗಳಲ್ಲಿ ಮತದಾನಕ್ಕೂ ಮೊದಲೇ 25,000 ಮತಗಳನ್ನು ತುಂಬಲಾಗಿತ್ತು’ ಎಂಬ ಆರ್‌ಜೆಡಿ ಹಿರಿಯ ನಾಯಕ ಜಗದಾನಂದ ಸಿಂಗ್‌ ಆರೋಪವು ‘ತಾಂತ್ರಿಕವಾಗಿ ಅಸಾಧ್ಯ’ ಎಂದು ಚುನಾವಣಾ ಆಯೋಗ ತಳ್ಳಿ ಹಾಕಿದೆ.‘ಇವಿಎಂಗಳಿಗೆ ವೈಫೈ, ಇಂಟರ್ನೆಟ್‌, ಬ್ಲೂಟೂತ್‌ ರೀತಿ ಯಾವುದೇ ಬಾಹ್ಯ ಸಂಪರ್ಕವಿಲ್ಲ. ಹೀಗಾಗಿ ಹ್ಯಾಕಿಂಗ್‌ ಮಾಡಲು ಅಸಾಧ್ಯ. ಇದರ ಜೊತೆಗೆ ಪ್ರತಿ ಮತದಾನಕ್ಕೂ ಮುನ್ನ ಎಲ್ಲ ಅಭ್ಯರ್ಥಿಗಳ ಮತವು ಶೂನ್ಯದಲ್ಲಿಯೇ ಇರುತ್ತದೆ. ಜೊತೆಗೆ ಮತದಾನಕ್ಕೂ ಮುನ್ನ ಎಲ್ಲ ಪಕ್ಷದ ಏಜೆಂಟರ ಸಮ್ಮುಖದಲ್ಲಿಯೇ ಅಣಕು ಮತದಾನ ಮಾಡಿ ನಂತರ ಎಲ್ಲವನ್ನು ತೆರವುಗೊಳಿಸಲಾಗುತ್ತದೆ. ಇದನ್ನು ಪಕ್ಷಗಳೂ ಸಹ ಸಹಿ ಹಾಕಿರುತ್ತವೆ. ಯಾವುದೇ ಇವಿಎಂ ಹಂಚಿಕೆಯು ನಿರ್ದಿಷ್ಟ ಪ್ರದೇಶಕ್ಕೆ ಎಂದು ಸೀಮಿತವಾಗಿರುವುದಿಲ್ಲ. ಹೀಗಾಗಿ ಸಿಂಗ್‌ ಮಾಡಿರುವ ಆರೋಪವು ಸಂಪೂರ್ಣ ಸುಳ್ಳಾಗಿದ್ದು, ಅವರ ಪಕ್ಷದ ಬೂತ್‌ ಏಜೆಂಟ್‌ ಸಹಿಗೇ ವಿರುದ್ಧವಾಗಿದೆ’ ಎಂದು ಹೇಳಿದೆ.

PREV

Recommended Stories

ಶಬರಿಮಲೇಲಿ ಅವ್ಯವಸ್ಥೆ ಭಕ್ತರ ಭಾರೀ ಪರದಾಟ
ಅಮೆರಿಕದಿಂದ ಅನ್ಮೋಲ್‌ ಬಿಷ್ಣೋಯಿ ಭಾರತಕ್ಕೆ ಗಡೀಪಾರು