ಬಿಹಾರ: 25 ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಅಂತಿಮ

KannadaprabhaNewsNetwork |  
Published : Oct 09, 2025, 02:00 AM IST
ಬಿಹಾರ | Kannada Prabha

ಸಾರಾಂಶ

ಬಿಹಾರದ ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷ ಬುಧವಾರ 25 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಇಲ್ಲಿನ ಇಂದಿರಾ ಭವನದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಆನ್‌ಲೈನ್‌ ಮೂಲಕ ಭಾಗವಹಿಸಿದ್ದ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರು ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರು ಎಂದು ಗೊತ್ತಾಗಿದೆ.

ಪಿಟಿಐ ನವದೆಹಲಿ

ಬಿಹಾರದ ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷ ಬುಧವಾರ 25 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.

ಇಲ್ಲಿನ ಇಂದಿರಾ ಭವನದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಆನ್‌ಲೈನ್‌ ಮೂಲಕ ಭಾಗವಹಿಸಿದ್ದ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರು ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರು ಎಂದು ಗೊತ್ತಾಗಿದೆ.ಮಹಾಮೈತ್ರಿಕೂಟದ ಮಿತ್ರಪಕ್ಷಗಳಾದ ಆರ್‌ಜೆಡಿ ಮತ್ತು ಎಡಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆ ಇನ್ನೂ ಅಂತಿಮಗೊಂಡಿಲ್ಲ. ಕಾಂಗ್ರೆಸ್‌ ಆಗಲೇ 25 ಹೆಸರ ಆಖೈರು ಮಾಡಿರುವುದು ವಿಶೇಷ.

==

ಬಿಹಾರದ 2 ಕ್ಷೇತ್ರಗಳಲ್ಲಿ ತೇಜಸ್ವಿ ಯಾದವ್‌ ಸ್ಪರ್ಧೆ ಸಾಧ್ಯತೆ

ಪಟನಾ: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಬಿಹಾರದ 2 ವಿಧಾನಸಭೆ ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಅವರು ರಾಘೋಪುರ ಹಾಗೂ ಫೂಲ್‌ ಪರಾಸ್‌ ಎಂಬ ಕ್ಷೇತ್ರಗಳಿಂದ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್‌ ಯಾದವ್‌ ಹಾಗೂ ಪಕ್ಷದ ನಾಯಕರು ಸಭೆ ಸೇರಿ ಈ ಬಗ್ಗೆ ಸಭೆ ಸೇರಿ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಅವು ಹೇಳಿವೆ.

ತೇಜಸ್ವಿ ಅವರು ಆರ್‌ಜೆಡಿ-ಕಾಂಗ್ರೆಸ್ ಮಹಾಮೈತ್ರಿಕೂಟದ ಪ್ರಮುಖ ಮುಖವಾಗಿದ್ದು, ಸಿಎಂ ಆಗುವ ಆಸೆ ಹೊಂದಿದ್ದಾರೆ.ಬಿಹಾರ ಚುನಾವಣೆ ನ.6 ಹಾಗೂ 11ರಂದು ನಡೆಯಲಿದ್ದು, ನ.14ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

==

15ಕ್ಕಿಂತ ಕಮ್ಮಿ ಸ್ಥಾನ ಕೊಟ್ರೆ ಸ್ಪರ್ಧಿಸಲ್ಲ: ಮಾಂಝಿ ಪಕ್ಷ ಬೆದರಿಕೆ

- ಬಿಹಾರದಲ್ಲಿ ಎನ್‌ಡಿಎಗೆ ಸೀಟು ಹಂಚಿಕೆ ತಲೆನೋವು

ಪಟನಾ: ಬಿಹಾರ ಚುನಾವಣೆಯ ಸೀಟು ಹಂಚಿಕೆ ಎನ್‌ಡಿಎಗೆ ತಲೆನೋವಗುವ ಸಾಧ್ಯತೆ ಇದೆ. ಕೂಟದ ಪಾಲುದಾರ ಪಕ್ಷವಾದ ಎಲ್‌ಜೆಪಿ ನೇತಾರ ಚಿರಾಗ್‌ ಪಾಸ್ವಾನ್‌ ಬಳಿಕ, ಹಮ್‌ ನಾಯಕ ಹಾಗೂ ಕೇಂದ್ರ ಸಚಿವ ಜೀತನ್‌ರಾಂ ಮಾಂಝಿ ಕೂಡ ಸೀಟು ಹಂಚಿಕೆ ಬಗ್ಗೆ ಬಂಡೇಳುವ ಮುನ್ಸೂಚನೆ ನೀಡಿದ್ದಾರೆ.ಮಾಂಝಿ ಅವರ ಪಕ್ಷಕ್ಕೆ ಕೇವಲ 5-6 ಸೀಟುಗಳನ್ನು ನೀಡುವ ಚಿಂತನೆಯನ್ನು ಕೂಟದ ಪ್ರಮುಖ ಪಕ್ಷಗಳಾದ ಜೆಡಿಯು-ಬಿಜೆಪಿ ಹೊಂದಿವೆ. ಆದರೆ ಇದಕ್ಕೆ ಬುಧವಾರ ಆಕ್ಷೇಪಿಸಿರುವ ಮಾಂಝಿ, ‘ನಮಗೆ 15 ಸ್ಥಾನ ಕೊಡಬೇಕು. ಇಲ್ಲದಿದ್ದರೆ ಚುನಾವಣೆಗೆ ನಮ್ಮ ಪಕ್ಷ ಸ್ಪರ್ಧಿಸಲ್ಲ. ಎನ್‌ಡಿಎಗೆ ಬಾಹ್ಯ ಬೆಂಬಲ ಮಾತ್ರ ನೀಡುತ್ತೇವೆ. ನಮಗೇನೂ ಸಿಎಂ ಸ್ಥಾನ ಬೇಡ. ನಮಗೆ ಗೌರವ ಮುಖ್ಯ’ ಎಂದಿದ್ದಾರೆ.ಇದರ ಬೆನ್ನಲ್ಲೇ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಾಂಝಿ ಜತೆ ಮಾತನಾಡಿ ಮನವೊಲಿಕೆ ಯತ್ನ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

==

ಶಾ ಮುಂದೊಮ್ಮೆ ಮೀರ್‌ ಜಾಫರ್‌ ಆಗಬಹುದು: ಮೋದಿಗೆ ದೀದಿ

-ಅಮಿತ್‌ ಶಾ ಬಗ್ಗೆ ಮೋದಿ ಹುಷಾರಾಗಿರಬೇಕು: ಮಮತಾ

-ಈಗಲೇ ಹಂಗಾಮಿ ಪ್ರಧಾನಿಯಂತೆ ಶಾ ವರ್ತನೆ: ಟೀಕೆ

ಪಿಟಿಐ ಕೋಲ್ಕತಾ‘ಗೃಹ ಸಚಿವ ಅಮಿತ್‌ ಶಾ ಈಗಲೇ ಹಂಗಾಮಿ ಪ್ರಧಾನಮಂತ್ರಿಯಂತೆ ವರ್ತಿಸುತ್ತಿದ್ದಾರೆ. ಪ್ರಧಾನಿ ಮೋದಿಯವರು ಶಾ ಮೇಲೆ ತುಂಬ ನಂಬಿಕೆಯಿಡಬಾರದು. ಅವರು ಮುಂದೊಂದು ದಿನ ಮೀರ್‌ ಜಾಫರ್‌ (ದ್ರೋಹಿ) ಆಗಬಹುದು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮತಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಚುನಾವಣಾ ಆಯೋಗ ಏನೇ ಮಾಡುತ್ತಿದ್ದರೂ, ಅದು ಶಾ ಅವರ ಆಜ್ಞೆಯ ಮೇರೆಗೆ ಮಾಡುತ್ತಿದೆ. ಅವರು ಹಂಗಾಮಿ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ. ದುರದೃಷ್ಟವಶಾತ್, ಪ್ರಧಾನಿ ಮೋದಿ ಅವರು ಶಾ ಮೇಲೆ ತುಂಬ ನಂಬಿಕೆಯಿಡಬಾರದು. ಅವರು ಮುಂದೊಂದು ದಿನ ಮೀರ್‌ ಜಾಫರ್‌ ಆಗಬಹುದು’ ಎಂದರು.

ಯಾರು ಮೀರ್ ಜಾಫರ್?:18ನೇ ಶತಮಾನದಲ್ಲಿ ಬ್ರಿಟಿಷರು ಮತ್ತು ಬಂಗಾಳದ ನವಾಬ ಸಿರಾಜುದ್ದೌಲನ ನಡುವಿನ ಪ್ಲಾಸಿ ಕದನ ನಡೆದಿತ್ತು. ಆಗ ಸೇನಾ ಮುಖ್ಯಸ್ಥ ಮೀರ್‌ ಜಾಫರ್‌, ಬ್ರಿಟಿಷರೊಂದಿಗೆ ಕೈಜೋಡಿಸಿ, ನವಾಬನಿಗೆ ದ್ರೋಹ ಬಗೆದು ತಾನೇ ನವಾಬನಾಗಿದ್ದ. ಹಾಗಾಗಿ ಮಿತ್ರದ್ರೋಹದ ಉದಾಹರಣೆಯಾಗಿ ಆತನ ಹೆಸರು ಬಳಸಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೊಬೈಲಲ್ಲಿ ಲೋಕೇಷನ್‌ ಆನ್‌ಕಡ್ಡಾಯಕ್ಕೆ ಕೇಂದ್ರಕ್ಕೆ ಶಿಫಾರಸು
ಗಲ್ವಾನ್‌ ಹಿಂಸೆ ನಡೆದ ಸ್ಥಳದಲ್ಲಿ ವಿಶ್ವದ ಎತ್ತರದ ಯುದ್ಧ ಸ್ಮಾರಕ!