ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸೀಟು ಮೀಸಲಿಡುವ ಐತಿಹಾಸಿಕ ನಾರಿ ಶಕ್ತಿ ವಂದನ ಅಧಿನಿಯಮ-2023 ಹಾಗೂ ಲೋಕಸಭಾ ಕ್ಷೇತ್ರಗಳನ್ನು ಸದ್ಯದ 543ರಿಂದ ಗರಿಷ್ಠ 850ಕ್ಕೇರಿಸುವ ಸಂವಿಧಾನ (131ನೇ ತಿದ್ದುಪಡಿ) ಮಸೂದೆ-2026 ಅನ್ನು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಂಡಿಸಲಿದೆ. ಏ.15ರಿಂದ 3 ದಿನಗಳ ಕಾಲ ಕರೆದಿರುವ ಅಧಿವೇಶನದಲ್ಲಿ ಈ ಮಹತ್ವದ ಮಸೂದೆ ಮಂಡಿಸಿ ಅದಕ್ಕೆ ಅಂಗೀಕಾರ ಪಡೆಯುವ ವಿಶ್ವಾಸವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ.
ಆದರೆ ಕೇಂದ್ರ ಸರ್ಕಾರದ ಪ್ರಸ್ತಾಪಿತ ವಿಧೇಯಕದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷಗಳು, ‘ನಾವು ಮಹಿಳಾ ಮೀಸಲು ಮಸೂದೆಯ ಪರವಾಗಿದ್ದೇವೆ. ಆದರೆ ಅದನ್ನು ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಮಾರ್ಗದ ಬಗ್ಗೆ ನಮಗೆ ತಕರಾರಿದೆ. ಸರ್ಕಾರದ ನಡೆ ರಾಜಕೀಯ ಪ್ರೇರಿತವಾಗಿದೆ. ವಿಪಕ್ಷಗಳನ್ನು ಹತ್ತಿಕ್ಕಲು ಮತ್ತು ನಿಗ್ರಹಿಸಲು, ಸರ್ಕಾರ ಈ ರೀತಿಯಲ್ಲಿ ವಿಧೇಯಕ ಮಂಡನೆ ಮಾಡುತ್ತಿದೆ. ಹೀಗಾಗಿ ವಿಧೇಯಕ ವಿರೋಧಿಸಲು ನಿರ್ಧರಿಸಿದ್ದೇವೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಹೀಗಾಗಿ ಗುರುವಾರದಿಂದ ಆರಂಭವಾಗಲಿರುವ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ಜಟಾಪಟಿ, ವಾಕ್ಸಮರಕ್ಕೆ ವೇದಿಕೆಯಾಗುವ ನಿರೀಕ್ಷೆ ಇದೆ. ಏಕೆಂದರೆ ಮಹಿಳಾ ಮೀಸಲು ನೆಪದಲ್ಲಿ ಕ್ಷೇತ್ರ ಮರುವಿಂಗಡಣೆಗೆ ವಿಪಕ್ಷ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಸರ್ಕಾರಕ್ಕೆ 3ನೇ 2ರಷ್ಟು ಬಹುಮತ ಇಲ್ಲದ ಕಾರಣ ಇದು ಹೇಗೆ ಅಂಗೀಕಾರ ಆಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಆಡಳಿತ ಪಕ್ಷದ ಕಡೆಯಿಂದ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮಹಿಳಾ ಮೀಸಲು ವಿಧೇಯಕದ ಬಗ್ಗೆ ಚರ್ಚೆ ಆರಂಭಿಸಲಿದ್ದರೆ, ವಿಪಕ್ಷಗಳ ಪರವಾಗಿ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಚರ್ಚೆ ಆರಂಭಿಸುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರವು ಗುರುವಾರ, ‘ಸಂವಿಧಾನ (103ನೇ ತಿದ್ದುಪಡಿ) ಮಸೂದೆ 2026’, ‘ಕ್ಷೇತ್ರ ಮರುವಿಂಗಡಣೆ ವಿಧೇಯಕ, 2026’ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ), 2026ರ ವಿಧೇಯಕ ಮಂಡನೆಗೆ ಮುಂದಾಗಿದೆ. ಮೊದಲ ಎರಡು ವಿಧೇಯಕಗಳನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮತ್ತು ಇನ್ನೊಂದು ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಲಿದ್ದಾರೆ. ಈ ವಿಧೇಯಕಗಳ ಚರ್ಚೆಗೆ 18 ಗಂಟೆಗಳ ಕಾಲ ನಿಗದಿಪಡಿಸಲಾಗಿದೆ. ಲೋಕಸಭೆ ಅಂಗೀಕಾರದ ಬಳಿಕ ರಾಜ್ಯಸಭೆಯ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ.
ಮಹಿಳಾ ಮೀಸಲು ವಿಧೇಯಕ ಅಂಗೀಕಾರದ ಮೂಲಕ ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಳ ಮಾಡಬೇಕೆಂಬ ದೇಶದ ಕೋಟ್ಯಂತರ ಮಹಿಳೆಯರ ಆಶೋತ್ತರ ಈಡೇರಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಮಹಿಳಾ ಮೀಸಲು ಜಾರಿಯ ಮೂಲಕ ಲೋಕಸಭೆ ಮತ್ತು ವಿಧಾನಸಭೆಯ ಒಟ್ಟು ಸ್ಥಾನಗಳ ಪೈಕಿ ಶೇ.33ರಷ್ಟು ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗುವುದು. ವಿಧೇಯಕ ಅಂಗೀಕಾವಾರದರೆ 2029ರಿಂದ ಹೊಸ ಮೀಸಲು ಜಾರಿಯಾಗಲಿದೆ. ಈ ಲೆಕ್ಕಾಚಾರದಲ್ಲಿ ವಿವಿಧ ರಾಜ್ಯಗಳಿಂದ ಲೋಕಸಭೆಯನ್ನು ಪ್ರತಿನಿಧಿಸುವ 815 ಜನರ ಪೈಕಿ ಮಹಿಳೆಯರಿಗೆ 273 ಸ್ಥಾನಗಳು ಲಭ್ಯವಾಗಲಿವೆ. ಮಹಿಳಾ ಮೀಸಲು ಸ್ಥಾನಗಳನ್ನು ಪ್ರತಿ 15 ವರ್ಷಕ್ಕೊಮ್ಮೆ ಮರುಹಂಚಿಕೆ (ರೋಸ್ಟರ್) ಮಾಡಲಾಗುವುದು. ಸದ್ಯ ಜಾರಿಗೊಳ್ಳಲಿರುವ ಮಹಿಳಾ ಮೀಸಲು ಕ್ಷೇತ್ರಗಳು 2033ರವರೆಗೆ ಅಥವಾ ಈ ಸಂಬಂಧ ಕೇಂದ್ರ ಸರ್ಕಾರ ಮುಂದೆ ಹೊರಡಿಸಲಿಸಲಿರುವ ಆದೇಶಗಳಿಗೆ ಒಳಪಟ್ಟಿರಲಿದೆ ಎಂದು ಕರಡು ವಿಧೇಯಕ ಹೇಳಿದೆ.
ಲೋಕಸಭಾ ಸ್ಥಾನ ಏರಿಕೆ:
ಕೇಂದ್ರ ಸರ್ಕಾರದ ಪ್ರಸ್ತಾವಿತ ಕರಡು ವರದಿ ಅನ್ವಯ, 2011ರ ಜನಗಣತಿ ಅಂಕಿ ಅಂಶ ಆಧರಿಸಿ ವಿವಿಧ ರಾಜ್ಯಗಳಲ್ಲಿನ ಲೋಕಸಭಾ ಸ್ಥಾನ ಗರಿಷ್ಠ 815 ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಲ ಗರಿಷ್ಠ 35ಕ್ಕೆ ಏರಿಸಲಾಗುವುದು. ಈ ಮೂಲಕ ಒಟ್ಟಾರೆ ಸ್ಥಾನ ಬಲವನ್ನು ಗರಿಷ್ಠ 850 ದಾಟದಂತೆ ನೋಡಿಕೊಳ್ಳಲಾಗುವುದು.
ಮರುವಿಂಗಡಣೆಗೆ ಆಯೋಗ:
ಕರಡು ವಿಧೇಯಕದ ಅನ್ವಯ, ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಕ್ಷೇತ್ರ ಮರುವಿಂಗಡಣೆ ಆಯೋಗ ರಚನೆಯಾಗಲಿದೆ. ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತರು/ ನಾಮನಿರ್ದೇಶಿತ ಚುನಾವಣಾ ಆಯುಕ್ತರು ಮತ್ತು ಸಂಬಂಧಪಟ್ಟ ರಾಜ್ಯದ ಚುನಾವಣಾ ಆಯುಕ್ತರು ಇದರ ಸದಸ್ಯರಾಗಿರುತ್ತಾರೆ.